ಮುಂಬೈ :ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ಗುರುವಾರದಂದು ತನ್ನ ಪ್ರಮುಖ ಬಡ್ಡಿದರವನ್ನು ಶೇಕಡಾ 6.5ರಲ್ಲಿಯೇ ಮುಂದುವರಿಸುವ ಸಾಧ್ಯತೆಯಿದೆ ಎಂದು ತಜ್ಞರು ಹೇಳಿದ್ದಾರೆ. ಬಡ್ಡಿದರ ಹೆಚ್ಚಳದ ಯಾವುದೇ ತೀರ್ಮಾನ ಕೈಗೊಳ್ಳುವ ಮೊದಲು ಆರ್ಬಿಐ ಮತ್ತಷ್ಟು ಸ್ಥೂಲ ಆರ್ಥಿಕ ದತ್ತಾಂಶಕ್ಕಾಗಿ ಕಾಯುತ್ತಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಪ್ರಸ್ತುತ ಯುಎಸ್ ಫೆಡರಲ್ ರಿಸರ್ವ್ ಕೂಡ ಸದ್ಯಕ್ಕೆ ತನ್ನ ಬಡ್ಡಿದರದಲ್ಲಿ ಯಥಾಸ್ಥಿತಿಯನ್ನು ಕಾಪಾಡಿಕೊಳ್ಳಲು ನಿರ್ಧರಿಸಿದೆ ಮತ್ತು ಮುಂಬರುವ ತಿಂಗಳುಗಳಲ್ಲಿ ವಿತ್ತೀಯ ನೀತಿಯನ್ನು ಇನ್ನಷ್ಟು ಸರಳಗೊಳಿಸಬಹುದು ಎಂಬ ಮಾಹಿತಿಗಳು ಲಭ್ಯವಾಗಿವೆ.
ನಿರಂತರ ಹಣದುಬ್ಬರದ ಒತ್ತಡಗಳ ಮಧ್ಯೆ, ಫೆಬ್ರವರಿ 2023 ರಿಂದ ಬದಲಾಗದೆ ಉಳಿದಿರುವ ಬಡ್ಡಿದರಗಳನ್ನು ಬದಲಾಯಿಸುವ ಮೊದಲು ಆರ್ಬಿಐ ಯುಎಸ್ ಹಣಕಾಸು ನೀತಿಯ ಪಥವನ್ನು ಸೂಕ್ಷ್ಮವಾಗಿ ಗಮನಿಸಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಸದ್ಯ 6.5 ರಷ್ಟು (ರೆಪೊ ದರ) ಹೆಚ್ಚಿನ ಬಡ್ಡಿದರವಿದ್ದರೂ ಆರ್ಥಿಕ ಬೆಳವಣಿಗೆಯು ಹೆಚ್ಚುತ್ತಿರುವುದರಿಂದ ಹಣಕಾಸು ನೀತಿ ಸಮಿತಿ (ಎಂಪಿಸಿ)ಯು ಬಡ್ಡಿದರ ಕಡಿತಕ್ಕೆ ಮುಂದಾಗದಿರಬಹುದು.
ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ನೇತೃತ್ವದ ಎಂಪಿಸಿ ಸಭೆ ಆಗಸ್ಟ್ 6 ರಿಂದ 8 ರವರೆಗೆ ನಡೆಯಲಿದೆ. ದರ ನಿಗದಿ ಸಮಿತಿಯ ನಿರ್ಧಾರವನ್ನು ದಾಸ್ ಆಗಸ್ಟ್ 8 ರಂದು (ಗುರುವಾರ) ಪ್ರಕಟಿಸಲಿದ್ದಾರೆ.