ನವದೆಹಲಿ: ದೇಶದಲ್ಲಿನ ಹವಾಮಾನ ಪರಿಸ್ಥಿತಿಗಳು ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿನ ಸರಕುಗಳ ಬೆಲೆಗಳಂಥ ಬಾಹ್ಯ ಅಂಶಗಳಿಂದ ಯಾವುದೇ ಅಡೆತಡೆಗಳು ಎದುರಾಗದಿದ್ದರೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ಅಕ್ಟೋಬರ್ನಿಂದ ಬಡ್ಡಿದರಗಳನ್ನು ಕಡಿಮೆ ಮಾಡಲು ಪ್ರಾರಂಭಿಸಬಹುದು ಎಂದು ಕ್ರೆಡಿಟ್ ರೇಟಿಂಗ್ ಏಜೆನ್ಸಿ ಕ್ರಿಸಿಲ್ ತನ್ನ ವರದಿಯಲ್ಲಿ ತಿಳಿಸಿದೆ.
ಈ ಹಣಕಾಸು ವರ್ಷದಲ್ಲಿ ಎರಡು ಬಾರಿ ಬಡ್ಡಿದರ ಕಡಿತವಾಗಬಹುದು ಎಂದು ಕ್ರಿಸಿಲ್ ನಿರೀಕ್ಷಿಸಿದೆ. ಆಹಾರ ಹಣದುಬ್ಬರ ಹೆಚ್ಚಾಗಿದ್ದರಿಂದ ಆರ್ಬಿಐನ ಹಣಕಾಸು ನೀತಿ ಸಮಿತಿಯು (ಎಂಪಿಸಿ) ಇತ್ತೀಚಿನ ತನ್ನ ಸಭೆಯಲ್ಲಿ ಬಡ್ಡಿದರ ಕಡಿತ ಮಾಡುವ ನಿರ್ಧಾರ ಕೈಗೊಂಡಿಲ್ಲ ಎಂದು ಹೇಳಿರುವ ಕ್ರಿಸಿಲ್, ಬದಲಾಗುತ್ತಿರುವ ಹವಾಮಾನ ಪರಿಸ್ಥಿತಿಗಳ ಬಗ್ಗೆ ಇನ್ನೂ ಕಾಯ್ದು ನೋಡಬೇಕಾಗಿದೆ ಎಂದು ತಿಳಿಸಿದೆ. ಆದಾಗ್ಯೂ ಸ್ಥೂಲ ಆರ್ಥಿಕ ಪರಿಸ್ಥಿತಿಯು ಉತ್ತಮವಾಗಿ ಮುಂದುವರೆಯುವುದರಿಂದ ಬಡ್ಡಿದರ ಕಡಿತಕ್ಕೆ ಅನುಕೂಲವಾಗಲಿದೆ ಎಂದು ಅದು ನಿರೀಕ್ಷಿಸಿದೆ.
ಈ ಬಾರಿ ಮಾನ್ಸೂನ್ ಸಾಮಾನ್ಯಕ್ಕಿಂತ ಹೆಚ್ಚಾಗಿರುವುದರಿಂದ (ಆಗಸ್ಟ್ 7 ರ ಹೊತ್ತಿಗೆ ದೀರ್ಘಾವಧಿಯ ಸರಾಸರಿಗಿಂತ ಶೇಕಡಾ 7 ರಷ್ಟು ಹೆಚ್ಚಾಗಿದೆ) ಪ್ರಮುಖ ಆಹಾರ ಧಾನ್ಯಗಳ ಬಿತ್ತನೆ ಪ್ರಮಾಣ ಹೆಚ್ಚಾಗಿದೆ. ಹೀಗಾಗಿ ಕೃಷಿ ಇಳುವರಿಯು ಕಳೆದ ವರ್ಷಕ್ಕಿಂತ ಉತ್ತಮವಾಗಿರುವ ಸಾಧ್ಯತೆಗಳು ಕಂಡು ಬಂದಿದ್ದು, ಆಹಾರ ಹಣದುಬ್ಬರ ಕಡಿಮೆಯಾಗಬಹುದು ಮತ್ತು ಇದು ಬಡ್ಡಿದರ ಕಡಿತಕ್ಕೆ ಇರುವ ಅಡೆತಡೆಗಳನ್ನು ಕಡಿಮೆ ಮಾಡಬಹುದು. ಸೆಪ್ಟೆಂಬರ್ ವೇಳೆಗೆ ದೇಶದ ಕೃಷಿ ಇಳುವರಿಯ ಬಗ್ಗೆ ಸ್ಪಷ್ಟ ಚಿತ್ರಣ ದೊರಕಲಿದ್ದು, ಇದು ಬಡ್ಡಿದರ ಕಡಿತಕ್ಕೆ ದಾರಿ ಮಾಡಕೊಡಲಿದೆ ಎಂದು ನಿರೀಕ್ಷಿಸಲಾಗಿದೆ ಎಂದು ಕ್ರಿಸಿಲ್ ವರದಿ ತಿಳಿಸಿದೆ.