ಹೈದರಾಬಾದ್: ಕಳೆದ 10 ವರ್ಷಗಳಲ್ಲಿ ದೇಶವು ನೇರ ತೆರಿಗೆ ಸಂಗ್ರಹದಲ್ಲಿ ಉತ್ತಮ ಬೆಳವಣಿಗೆಯನ್ನು ಹೊಂದಿದೆ. ಇದಕ್ಕೆ ಕಾರಣವಾದ ಪ್ರಮುಖ ಅಂಶಗಳಲ್ಲಿ ವೈಯಕ್ತಿಕ ಆದಾಯ ತೆರಿಗೆ ಸಂಗ್ರಹಣೆ ಮತ್ತು ಕಾರ್ಪೊರೇಟ್ ತೆರಿಗೆ ಸಂಗ್ರಹದಲ್ಲಿನ ಬೆಳವಣಿಗೆಯೂ ಒಂದಾಗಿದೆ. 2013-14 ಮತ್ತು 2023-24ರ ಆರ್ಥಿಕ ವರ್ಷದಲ್ಲಿ ನೇರ ತೆರಿಗೆ ಸಂಗ್ರಹವೂ ಮೂರು ಪಟ್ಟು ಹೆಚ್ಚಾಗಿದೆ. ಈ ಕುರಿತ ವಿಶ್ಲೇಷಣೆಯನ್ನು ಈಟಿವಿ ಭಾರತ್ ಇತ್ತೀಚಿನ ತೆರಿಗೆ ಡೇಟಾವನ್ನು ತೋರಿಸಿದೆ.
ನೇರ ತೆರಿಗೆಯನ್ನು ಸರ್ಕಾರ ನೇರವಾಗಿ ಆದಾಯ ತೆರಿಗೆ ಕಾಯ್ದೆ 1961ರ ಅಡಿಯಲ್ಲಿ ವಿಧಿಸಲಾದ ಆದಾಯ ತೆರಿಗೆ ಮತ್ತು ಕಾರ್ಪೊರೇಷನ್ ತೆರಿಗೆಯಂತಹ ಟ್ಯಾಕ್ಸ್ಅನ್ನು ನೇರವಾಗಿ ಸಂಗ್ರಹಿಸುತ್ತದೆ. ಇದರ ಹೊರತಾಗಿ ಪರೋಕ್ಷ ತೆರಿಗೆ ಎಂಬುದು, ಗ್ರಾಹಕರು ನೀಡುವ ಜಿಎಸ್ಟಿ ಅಥವಾ ಕಸ್ಟಮ್ ಸುಂಕವಾಗಿದೆ.
ಕಳೆದ 10 ವರ್ಷಗಳಲ್ಲಿ ಒಟ್ಟಾರೆ ನೇರ ತೆರಿಗೆ ಸಂಗ್ರಹವು ಸುಮಾರು ಮೂರು ಪಟ್ಟು ಹೆಚ್ಚಾಗಿದೆ. ಈ ಅವಧಿಯಲ್ಲಿ ವೈಯಕ್ತಿಕ ಆದಾಯ ತೆರಿಗೆ ಸಂಗ್ರಹವು ಶೇ. 300 ರಷ್ಟು ವೃದ್ಧಿಯಾಗಿದೆ ಎಂದು ದತ್ತಾಂಶ ತೋರಿಸಿದೆ. ನೇರ ತೆರಿಗೆಗಳ ಮತ್ತೊಂದು ಪ್ರಮುಖ ಮೂಲ ಎಂದರೆ ಕಾರ್ಪೊರೇಷನ್ ತೆರಿಗೆ ಆಗಿದ್ದು, ಇದು ಕೂಡ ಈ ಅವಧಿಯಲ್ಲಿ ದ್ವಿಗುಣಗೊಂಡಿದೆ.
2013- 14ರ ಆರ್ಥಿಕ ವರ್ಷದಲ್ಲಿ ಕಾರ್ಪೋರೇಟ್ ತೆರಿಗೆಯಿಂದಾಗಿ ಹಣಕಾಸು ಇಲಾಖೆ ಕಂದಾಯ ಇಲಾಖೆಯಿಂದ 3.95 ಲಕ್ಷ ಕೋಟಿ ಆದಾಯ ಸಂಗ್ರಹಿಸಿದೆ. ಈ ವರ್ಷದಲ್ಲಿ ವೈಯಕ್ತಿಕ ಆದಾಯ ತೆರಿಗೆ ಸಂಗ್ರಹವು 2.43 ಲಕ್ಷ ಕೋಟಿಯಾಗಿದೆ. ಇತರೆ ಪರೋಕ್ಷ ತೆರಿಗೆಯು 1,030 ಕೋಟಿಯಾಗಿದೆ. ಈ ವರ್ಷ ಒಟ್ಟಾರೆ ಸಂಗ್ರಹವಾದ ತೆರಿಗೆ ಸಂಗ್ರಹ 6.38 ಲಕ್ಷ ಕೋಟಿಯಾಗಿದೆ. ಕೇಂದ್ರ ಸರ್ಕಾರದ ನೇರ ತೆರಿಗೆ ಸಂಗ್ರಹವು ಅಂದಿನಿಂದ ಸ್ಥಿರ ಬೆಳವಣಿಗೆಯನ್ನು ಕಂಡಿದೆ.
ನೇರ ತೆರಿಗೆ ಸಂಗ್ರಹದಲ್ಲಿ ಸ್ಥಿರವಾದ ಬೆಳವಣಿಗೆ: ಉದಾಹರಣೆಗೆ ಕಾರ್ಪೊರೇಟ್ ತೆರಿಗೆ ಸಂಗ್ರಹವು 4.29 ಲಕ್ಷ ಕೋಟಿ ರೂ.ಗೆ ಬೆಳೆದರೆ, ವೈಯಕ್ತಿಕ ಆದಾಯ ತೆರಿಗೆ ಸಂಗ್ರಹವು ರೂ. 2.66 ಲಕ್ಷ ಕೋಟಿಗೆ ಏರಿಕೆ ಕಂಡಿದೆ. ಒಟ್ಟು ನೇರ ತೆರಿಗೆ ಸಂಗ್ರಹ 6.96 ಲಕ್ಷ ಕೋಟಿ ಆಯಿತು. ಇದು ಶೇ. 9 ಕ್ಕಿಂತ ಹೆಚ್ಚಿನ ಬೆಳವಣಿಗೆಯಾಗಿದೆ.
ಇದೇ ರೀತಿ, 2015-16ರಲ್ಲಿ ಕಾರ್ಪೊರೇಟ್ ತೆರಿಗೆ ಸಂಗ್ರಹವು 4.53 ಲಕ್ಷ ಕೋಟಿ ರೂ.ಗಿಂತ ಹೆಚ್ಚಿದ್ದು, ವೈಯಕ್ತಿಕ ತೆರಿಗೆ ಸಂಗ್ರಹವು 2.87 ಲಕ್ಷ ಕೋಟಿ ರೂ. ಆಗುವ ಮೂಲಕ ನೇರ ತೆರಿಗೆ ಸಂಗ್ರಹದಲ್ಲಿ ಒಟ್ಟಾರೆ 7.42 ಲಕ್ಷ ಕೋಟಿಗೆ ಹೆಚ್ಚಿದೆ.
2016-17ರಲ್ಲಿ ಮೊದಲ ಬಾರಿಗೆ ಸರ್ಕಾರದ ಕಾರ್ಪೊರೇಟ್ ತೆರಿಗೆ ಸಂಗ್ರಹವು 5 ಲಕ್ಷ ಕೋಟಿಯಾಗಿದ್ದು, ಇದೇ ವರ್ಷ ಸರ್ಕಾರ ಕಾರ್ಪೊರೇಟ್ ತೆರಿಗೆಗಳಲ್ಲಿ 4.85 ಲಕ್ಷ ಕೋಟಿ ಸಂಗ್ರಹಿಸಿದೆ. ವೈಯಕ್ತಿಕ ಆದಾಯ ತೆರಿಗೆ ಸಂಗ್ರಹವು 3.5 ಲಕ್ಷ ಕೋಟಿ ತಲುಪಿದ್ದು, ಒಟ್ಟು ನೇರ ತೆರಿಗೆ ಸಂಗ್ರಹ ಸುಮಾರು 8.5 ಲಕ್ಷ ಆಗಿದೆ. ಈ ವರ್ಷದಲ್ಲಿ ನೇರ ತೆರಿಗೆ ಸಂಗ್ರಹವು ವರ್ಷದಿಂದ ವರ್ಷಕ್ಕೆ ಶೇ. 14ರಷ್ಟು ಸ್ಥಿರ ಬೆಳವಣಿಗೆ ಕಂಡಿದೆ.
10 ಲಕ್ಷ ಗಡಿ ದಾಟಿದ ನೇರ ತೆರಿಗೆ ಸಂಗ್ರಹ:2017-18ರಲ್ಲಿ ಮೊದಲ ಬಾರಿಗೆ ನೇರ ತೆರಿಗೆ ಸಂಗ್ರಹವು 10 ಲಕ್ಷ ಕೋಟಿ ದಾಟಿದೆ. ಮೊದಲ ವರ್ಷದಲ್ಲಿ ಅಧಿಕಾರಿಗಳು ಕಾರ್ಪೊರೇಟ್ ತೆರಿಗೆಯಿಂದ 5.17 ಲಕ್ಷ ಕೋಟಿ ಸಂಗ್ರಹಿಸಿದರೆ, ನೇರ ತೆರಿಗೆಯಿಂದ 4.2 ಲಕ್ಷ ಕೋಟಿ ಸಂಗ್ರಹಿಸಿದರು. ಇತರೆ ನೇರ ತೆರಿಗೆಯಿಂದ 11.450 ಕೋಟಿ ಸಂಗ್ರಹಿಸಿ, ಒಟ್ಟಾರೆ ನೇರ ತೆರಿಗೆ ಸಂಗ್ರಹ 10.3 ಲಕ್ಷ ಕೋಟಿ ದಾಟಿತು.
ಇತ್ತೀಚಿನ ಅಧಿಕೃತ ದತ್ತಾಂಶಗಳನ್ನು ಎಚ್ಚರಿಕೆಯಿಂದ ಪರೀಕ್ಷಿಸಿದಾಗ ನೇರ ತೆರಿಗೆ ಸಂಗ್ರಹ ದುಪ್ಪಟ್ಟುಗೊಳ್ಳಲು ಆರು ವರ್ಷವಾಗಿದೆ. 2011- 12ರ ಆರ್ಥಿಕ ವರ್ಷದಲ್ಲಿ 5 ಲಕ್ಷ ಕೋಟಿ ಇದ್ದ ಸಂಗ್ರಹ 2017-18ರಲ್ಲಿ 10 ಲಕ್ಷ ಕೋಟಿ ರೂ. ಆಗಿದೆ. ಈ 10 ಲಕ್ಷ ಕೋಟಿ ತೆರಿಗೆ ಸಂಗ್ರಹವು 20 ಲಕ್ಷ ಕೋಟಿ ರೂ. ದಾಟಲು ಮತ್ತೆ ಆರು ವರ್ಷ ತೆಗೆದುಕೊಂಡಿತು ಎಂಬುದು ಮತ್ತೊಂದು ಆಸಕ್ತಿದಾಯಕ ವಿಷಯವಾಗಿದೆ. 2023-24ರಲ್ಲಿ ಇದು ಅಂದಾಜಿನ ಪ್ರಕಾರ ನೇರ ತೆರಿಗೆ ಸಂಗ್ರಹದಿಂದ 19.6 ಲಕ್ಷ ಕೋಟಿ ರೂ. ಸಂಗ್ರಹವಾಗಿದೆ.