ನವದೆಹಲಿ: ಎಚ್ಡಿಎಫ್ಸಿ ಲೈಫ್ ಇನ್ಶೂರೆನ್ಸ್ ಕಂಪನಿಯ 1.6 ಕೋಟಿ (16 ಮಿಲಿಯನ್) ಗ್ರಾಹಕರ ದಾಖಲೆಗಳನ್ನು ಡಾರ್ಕ್ ವೆಬ್ ಫೋರಂನಲ್ಲಿ 200,000 ಯುಎಸ್ಡಿಟಿ (ಟೆಥರ್ ಕ್ರಿಪ್ಟೋಕರೆನ್ಸಿ) ಗೆ ಮಾರಾಟಕ್ಕೆ ಇಡಲಾಗಿದೆ ಎಂದು ಸೈಬರ್ ಪೀಸ್‌ನ ಸಂಶೋಧನಾ ವಿಭಾಗ ಬುಧವಾರ ಹೇಳಿದೆ.
ಯಾವೆಲ್ಲಾ ಮಾಹಿತಿ ಸೋರಿಕೆ?: ಸೋರಿಕೆಯಾದ ಡೇಟಾವು ಪಾಲಿಸಿ ಸಂಖ್ಯೆಗಳು, ಹೆಸರು, ಮೊಬೈಲ್ ಸಂಖ್ಯೆಗಳು, ಹುಟ್ಟಿದ ದಿನಾಂಕ, ಇಮೇಲ್ ವಿಳಾಸ, ನಿವಾಸದ ವಿಳಾಸ, ಆರೋಗ್ಯ ಸ್ಥಿತಿ ಮತ್ತು ಸೂಕ್ಷ್ಮ ಗ್ರಾಹಕರ ಮಾಹಿತಿಯನ್ನು ಒಳಗೊಂಡಿದೆ ಎಂದು ಸೈಬರ್ ಪೀಸ್ ಹೇಳಿದೆ.
ಹೆಚ್‌ಡಿಎಫ್‌ಸಿ ಪ್ರತಿಕ್ರಿಯೆ: ಕಳೆದ ತಿಂಗಳ ಕೊನೆಯಲ್ಲಿ ಹಲವಾರು ಬಾರಿ ಎಚ್ಡಿಎಫ್ಸಿ ಲೈಫ್ ಇನ್ಶೂರೆನ್ಸ್‌ನ ಡೇಟಾ ಸೋರಿಕೆಯಾಗಿದ್ದು, ಈ ಸೋರಿಕೆಯ ಸಂಭಾವ್ಯ ಪರಿಣಾಮವನ್ನು ಮೌಲ್ಯಮಾಪನ ಮಾಡುತ್ತಿದ್ದೇವೆ ಎಂದು ಎಚ್ಡಿಎಫ್ಸಿ ಹೇಳಿದೆ. "ನಮ್ಮ ಗ್ರಾಹಕರ ಕೆಲ ಡೇಟಾವನ್ನು ಸೋರಿಕೆ ಮಾಡಿರುವ ಬಗ್ಗೆ ಅಪರಿಚಿತ ಮೂಲದಿಂದ ನಮಗೆ ಮಾಹಿತಿ ಬಂದಿದೆ" ಎಂದು ಎಚ್ಡಿಎಫ್ಸಿ ಲೈಫ್ ನಿಯಂತ್ರಕ ಪ್ರಾಧಿಕಾರಕ್ಕೆ ಸಲ್ಲಿಸಿದ ಫೈಲಿಂಗ್ನಲ್ಲಿ ತಿಳಿಸಿದೆ.
1,00,000ದಷ್ಟು ಸಣ್ಣ ಪ್ರಮಾಣದಲ್ಲಿ ದಾಖಲೆಗಳನ್ನು (16 ಮಿಲಿಯನ್ ದಾಖಲೆಗಳು) ಮಾರಾಟ ಮಾಡಲಾಗುತ್ತಿದೆ ಎಂದು ಸೈಬರ್ ಪೀಸ್ ಮಾಹಿತಿ ನೀಡಿದೆ.
ಇದು ಆಘಾತಕಾರಿ ಅಂಶ: "ಈ ಡೇಟಾ ಕಳವು ಮಾಡಿದ ಸೈಬರ್ ವಂಚಕರ ಗುರುತು ಈವರೆಗೆ ಪತ್ತೆಯಾಗಿಲ್ಲ. ಹ್ಯಾಕರ್ಗಳು ಈಗಾಗಲೇ ಡೇಟಾದ ಗಣನೀಯ ಭಾಗಗಳನ್ನು ಆಸಕ್ತ ವ್ಯಕ್ತಿಗಳಿಗೆ ಮಾರಾಟ ಮಾಡಿದ್ದಾರೆ ಎಂದು ಸೈಬರ್ ಪೀಸ್‌ನ ತನಿಖೆಯಲ್ಲಿ ತಿಳಿದು ಬಂದಿದೆ. 16 ಮಿಲಿಯನ್ ಗ್ರಾಹಕರ ದಾಖಲೆಗಳನ್ನು ಈಗಾಗಲೇ ಮಾರಾಟ ಮಾಡಲಾಗಿದೆ. ಇದು ವೈಯಕ್ತಿಕ ಮಾಹಿತಿಯ ದುರುಪಯೋಗ ಮತ್ತು ಶೋಷಣೆಯ ಬಗ್ಗೆ ಕಳವಳವನ್ನು ಹೆಚ್ಚಿಸಿದೆ" ಎಂದು ಸೈಬರ್-ಭದ್ರತಾ ಸಂಸ್ಥೆ ಸೈಬರ್ ಪೀಸ್ ತಿಳಿಸಿದೆ.
ಮಾಹಿತಿಯ ದುರುಪಯೋಗ ಹೇಗೆ?: "ವೈಯಕ್ತಿಕ ವಿವರಗಳು ಬಹಿರಂಗವಾಗಿದ್ದರಿಂದ ಗ್ರಾಹಕರು ಖಾಸಗಿತನ ಉಲ್ಲಂಘನೆಯ ಅಪಾಯ ಎದುರಿಸುವಂತಾಗಿದೆ.
- ಈ ಮಾಹಿತಿಯನ್ನು ಫಿಶಿಂಗ್ ಹಗರಣಗಳು ಮತ್ತು ಉದ್ದೇಶಿತ ಸೈಬರ್ ದಾಳಿಗಳಿಗೆ ವಂಚಕರು ಬಳಸಬಹುದು" ಎಂದು ಸೈಬರ್ ಪೀಸ್ ಎಚ್ಚರಿಕೆ ನೀಡಿದೆ.
- ಸೋರಿಕೆಯಾದ ವಿಮಾ ಪಾಲಿಸಿ ಸಂಖ್ಯೆಗಳು ಮತ್ತು ವೈಯಕ್ತಿಕ ವಿವರಗಳು ಗುರುತಿನ ಕಳ್ಳತನ ಮತ್ತು ಹಣಕಾಸು ಉತ್ಪನ್ನಗಳು ಅಥವಾ ಸೇವೆಗಳಿಗೆ ಅನಧಿಕೃತ ಪ್ರವೇಶಕ್ಕೆ ಅವಕಾಶ ನೀಡಬಹುದು ಎಂದು ಅದು ಹೇಳಿದೆ.
ಸಮಗ್ರ ತನಿಖೆ-ಎಚ್ಡಿಎಫ್ಸಿ ಲೈಫ್:ಡೇಟಾ ಕಳುವಿನ ಮೂಲ ಕಾರಣವನ್ನು ಕಂಡು ಹಿಡಿಯಲು ಮತ್ತು ಅಗತ್ಯವಿದ್ದರೆ ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳಲು ಸೈಬರ್ ಭದ್ರತಾ ತಜ್ಞರೊಂದಿಗೆ ಸಮಾಲೋಚಿಸಿ ವಿವರವಾದ ತನಿಖೆ ನಡೆಸಲಾಗುತ್ತಿದೆ ಎಂದು ಎಚ್ಡಿಎಫ್ಸಿ ಲೈಫ್ ತನ್ನ ನಿಯಂತ್ರಕ ಫೈಲಿಂಗ್ನಲ್ಲಿ ತಿಳಿಸಿದೆ.
ಇದನ್ನೂ ಓದಿ:ಸಾಲ ಮರುಪಾವತಿಗೆ ಇಂಡಸ್ ಟವರ್ಸ್ನ ಶೇ 3ರಷ್ಟು ಪಾಲು ಮಾರಾಟಕ್ಕೆ ಮುಂದಾದ ವೊಡಾಫೋನ್