ನವದೆಹಲಿ: ಪೇಟಿಎಂ ಬ್ರ್ಯಾಂಡ್ನ ಮಾಲೀಕತ್ವ ಹೊಂದಿರುವ ಒನ್ 97 ಕಮ್ಯುನಿಕೇಷನ್ಸ್ ಕಂಪನಿಯ ಷೇರುಗಳು ಬುಧವಾರ ಸತತ ನಾಲ್ಕನೇ ದಿನವೂ ಏರಿಕೆ ಕಂಡಿದ್ದು, ಗರಿಷ್ಠ ಸರ್ಕ್ಯೂಟ್ (upper circuit) ಮಿತಿಯನ್ನು ತಲುಪಿವೆ. ಕಂಪನಿಯ ಷೇರುಗಳು ಬಿಎಸ್ಇ ಮತ್ತು ಎನ್ಎಸ್ಇಯಲ್ಲಿ ಕ್ರಮವಾಗಿ 395.25 ಮತ್ತು 395.05 ರೂ.ಗೆ ಏರಿಕೆಯಾಗಿವೆ.
ಬೆಳಗಿನ ವಹಿವಾಟಿನ ಆರಂಭದಲ್ಲಿ 30 ಷೇರುಗಳ ಬಿಎಸ್ಇ ಸೆನ್ಸೆಕ್ಸ್ 27.95 ಪಾಯಿಂಟ್ಸ್ ಅಥವಾ ಶೇಕಡಾ 0.04 ರಷ್ಟು ಏರಿಕೆ ಕಂಡು 73,085.35 ಕ್ಕೆ ತಲುಪಿದ್ದರೆ, ಎನ್ಎಸ್ಇ ನಿಫ್ಟಿ 15.75 ಪಾಯಿಂಟ್ಸ್ ಕುಸಿದು 22,181.20 ಕ್ಕೆ ತಲುಪಿದೆ.
ಪೇಟಿಎಂ ಷೇರುಗಳು ಶುಕ್ರವಾರದಿಂದ ಚೇತರಿಸಿಕೊಂಡಿದ್ದು, ಗುರುವಾರದ ಮುಕ್ತಾಯದ ಮಟ್ಟವಾದ 325 ರೂ.ಗಳಿಂದ ಶೇಕಡಾ 21 ಕ್ಕಿಂತ ಹೆಚ್ಚು ಲಾಭ ಗಳಿಸಿವೆ. ಒನ್ 97 ಕಮ್ಯುನಿಕೇಷನ್ಸ್ ಕಂಪನಿಯ ಅಂಗವಾದ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್ (ಪಿಪಿಬಿಎಲ್) ಎದುರಿಸುತ್ತಿರುವ ಹಣಕಾಸು ಅಕ್ರಮದ ಬಗ್ಗೆ ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ. ಆದರೆ ಇಲ್ಲಿಯವರೆಗೆ ವಿದೇಶಿ ವಿನಿಮಯ ನಿಯಮಗಳ ಯಾವುದೇ ಉಲ್ಲಂಘನೆ ಕಂಡು ಬಂದಿಲ್ಲ ಎಂಬ ವರದಿಗಳ ಹಿನ್ನೆಲೆಯಲ್ಲಿ ಒನ್ 97 ಕಮ್ಯುನಿಕೇಷನ್ ಷೇರುಗಳು ಭಾರಿ ಏರಿಕೆಯಾಗುತ್ತಿವೆ.
ಆದಾಗ್ಯೂ ನೋ-ಯುವರ್-ಕಸ್ಟಮರ್ (ಕೆವೈಸಿ) ಮಾನದಂಡಗಳಲ್ಲಿ ಕೆಲವು ಲೋಪಗಳನ್ನು ಮತ್ತು ಅನುಮಾನಾಸ್ಪದ ವಹಿವಾಟು ವರದಿಯನ್ನು ತಯಾರಿಸಲಾದ ಬಗ್ಗೆ ಇಡಿ ಪತ್ತೆ ಮಾಡಿದೆ. ವಿದೇಶಿ ವಿನಿಮಯ ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಪಿಪಿಬಿಎಲ್ನ ಸಾಗರೋತ್ತರ ವಹಿವಾಟುಗಳ ಬಗ್ಗೆ ಕಳೆದ ವಾರ ಇಡಿ ತನಿಖೆ ಆರಂಭಿಸಿತ್ತು.
ಸೋಮವಾರ ಗರಿಷ್ಠ ಸರ್ಕ್ಯೂಟ್ ಮಿತಿಯನ್ನು ತಲುಪಿದ ಒಂದು ದಿನದ ನಂತರ ಒನ್ 97 ಕಮ್ಯುನಿಕೇಷನ್ಸ್ ಷೇರುಗಳು ಮಂಗಳವಾರ ಶೇಕಡಾ 5 ರಷ್ಟು ಏರಿಕೆಯಾಗಿವೆ. ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ವ್ಯವಹಾರಕ್ಕೆ ಸಂಬಂಧಿಸಿದ ವಿವಿಧ ಉಲ್ಲಂಘನೆಗಳ ಬಗ್ಗೆ ಇಡಿ ತನಿಖೆ ಆರಂಭಿಸಿದ ಮಧ್ಯೆ ಸತತ ಮೂರು ದಿನಗಳ ಕುಸಿತದ ನಂತರ ಶುಕ್ರವಾರ ಪೇಟಿಎಂ ಷೇರುಗಳು ಚೇತರಿಸಿಕೊಂಡವು.
ಫೆಬ್ರವರಿ 29 ರ ನಂತರ ಗ್ರಾಹಕರ ಖಾತೆಗಳಿಗೆ ಹಣ ಠೇವಣಿ ಮಾಡಿಕೊಳ್ಳುವುದು ಮತ್ತು ಕ್ರೆಡಿಟ್ ವಹಿವಾಟುಗಳನ್ನು ನಿಲ್ಲಿಸುವಂತೆ ಹಾಗೂ ಯಾವುದೇ ಗ್ರಾಹಕರ ಖಾತೆಗಳಿಗೆ, ಪ್ರಿಪೇಡ್ ಸಾಧನಗಳಿಗೆ, ಫಾಸ್ಟ್ಯಾಗ್ಗಳಿಗೆ ಮತ್ತು ನ್ಯಾಷನಲ್ ಮೊಬಿಲಿಟಿ ಕಾರ್ಡ್ಗಳಿಗೆ ಟಾಪ್ ಅಪ್ ಮಾಡುವುದನ್ನು ನಿಲ್ಲಿಸುವಂತೆ ಆರ್ಬಿಐ ತನ್ನ ಜನವರಿ 31 ರ ಆದೇಶದಲ್ಲಿ ಕಂಪನಿಗೆ ಸೂಚಿಸಿದೆ. ಒನ್ 97 ಕಮ್ಯುನಿಕೇಷನ್ಸ್ ಪಿಪಿಬಿಎಲ್ನಲ್ಲಿ ಶೇಕಡಾ 49 ರಷ್ಟು ಪಾಲನ್ನು ಹೊಂದಿದೆ.
ಇದನ್ನೂ ಓದಿ : ಅಯೋಧ್ಯೆಗೆ ಬೇಕು 8,500 ರಿಂದ 12,500 ಬ್ರಾಂಡೆಡ್ ಹೋಟೆಲ್ ಕೊಠಡಿಗಳು