ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ PFRDAಯಿಂದ ಭಾರತದಲ್ಲಿ ಪ್ರತಿ ವರ್ಷ ಅಕ್ಟೋಬರ್ 1 ರಂದು ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ ದಿವಸವನ್ನು ಆಚರಿಸಲಾಗುತ್ತದೆ. ಇದು ಭಾರತದ ನಾಗರಿಕರಲ್ಲಿ ಪಿಂಚಣಿ ಮತ್ತು ನಿವೃತ್ತಿ ಯೋಜನೆ ಉತ್ತೇಜಿಸುವ ಗುರಿ ಹೊಂದಿದೆ. ನಿವೃತ್ತಿಯ ನಂತರ ಆರ್ಥಿಕ ಸ್ವಾತಂತ್ರ್ಯ ಕಲ್ಪಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ.
ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (PFRDA) ಕಾಯಿದೆ ಸೆಪ್ಟೆಂಬರ್ 19, 2013 ರಂದು ಅಂಗೀಕರಿಸಲಾಯಿತು.1 ಫೆಬ್ರವರಿ 1, 2014 ರಂದು ಈ ದಿನವನ್ನು ಆಚರಿಸುವಂತೆ ಪ್ರಸ್ತಾವನೆ ಸಲ್ಲಿಕೆ ಮಾಡಲಾಗಿತ್ತು. ಸರ್ಕಾರಿ ನೌಕರರು ಚಂದಾದಾರರಾಗಿರುವ NPS ಅನ್ನು PFRDA ನಿಯಂತ್ರಿಸುತ್ತಿದೆ. ಭಾರತ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಹಾಗೂ ಖಾಸಗಿ ಸಂಸ್ಥೆಗಳು, ಅಸಂಘಟಿತ ವಲಯದ ಉದ್ಯೋಗಿಗಳು ಇದರ ಚಂದಾದಾರಾಗಿರುತ್ತಾರೆ.
NPS ದಿನದ ಆಚರಣೆಯ ಉದ್ದೇಶಗಳೇನು?: ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ ದಿನ ಹಲವಾರು ಗುರಿಗಳು ಮತ್ತು ಪ್ರಯೋಜನಗಳನ್ನು ಹೊಂದಿದೆ. ಜನರಿಗೆ ನಿವೃತ್ತಿ ಯೋಜನೆಗಳ ಲಾಭ ಮತ್ತು ಪ್ರಯೋಜನಗಳನ್ನು ತಿಳಿಸುವುದಲ್ಲದೇ, ಆ ಬಗ್ಗೆ ಶಿಕ್ಷಣ ನೀಡುವ ಮೂಲಕ ನಿವೃತ್ತಿಗಾಗಿ ಉಳಿತಾಯ ಪ್ರಾರಂಭಿಸಲು ಉತ್ತೇಜಿಸುತ್ತದೆ. ಈ ಮೂಲಕ ವೃದ್ದಾಪ್ಯದಲ್ಲಿ ಸುರಕ್ಷಿತ ಜೀವನ ನಡೆಸುಲು ಉಳಿತಾಯ ಮಾಡುವಂತೆ ಪ್ರೇರೇಪಿಸುವುದು ಈ ಯೋಜನೆಯ ಉದ್ದೇಶ ಮತ್ತು ಗುರಿಯಾಗಿದೆ.
ಎರಡು ರೀತಿಯ NPS ಖಾತೆಗಳಿವೆ:
• ಶ್ರೇಣಿ I NPS ಖಾತೆ: ಎನ್ಪಿಎಸ್ ಮೊದಲ ಹಂತದಲ್ಲಿ ಕನಿಷ್ಠ ಹೂಡಿಕೆಯಿಂದ ಯೋಜನೆ ಆರಂಭಿಸಬಹುದು. ಕೇವಲ 500ಗಳಿಂದ ನೀವು ಖಾತೆಯನ್ನು ತೆರೆಯಬಹುದು. ಈ ಖಾತೆಯಲ್ಲಿ ಹೂಡಿಕೆಗೆ ಯಾವುದೇ ಮಿತಿ ಇರುವುದಿಲ್ಲ. ಈ ಖಾತೆಯು ಠೇವಣಿದಾರರು 60 ತಲುಪುವವರೆಗೆ ಲಾಕ್ - ಇನ್ ಅವಧಿ ಇರುತ್ತದೆ. ಲಾಕ್ ಇನ್ ಅವಧಿ ಮುಕ್ತಾಯದ ನಂತರ ಸಂಚಿತ ಮೊತ್ತದ ಶೇ 60ರಷ್ಟು ಹಣವನ್ನು ಹಿಂಪಡೆಯಬಹುದು. ಮಾಸಿಕ ಪಿಂಚಣಿ ಪಡೆಯಲು ಪೂರೈಕೆದಾರರಿಂದ ವರ್ಷಾಶನ ಖರೀದಿಸಲು ಉಳಿದ ಶೇ 40ರಷ್ಟು ಹಣವನ್ನು ಬಳಸಬಹುದು.
• ಶ್ರೇಣಿ II NPS ಖಾತೆ: ಶ್ರೇಣಿ II ಖಾತೆಯು ಈಗಾಗಲೇ ಶ್ರೇಣಿ I ಖಾತೆಯನ್ನು ಹೊಂದಿರುವ ವ್ಯಕ್ತಿಗಳಿಗೆ ಲಭ್ಯವಿರುವ ಸ್ವಯಂ ಪ್ರೇರಿತ ಖಾತೆಯಾಗಿದೆ. ಶ್ರೇಣಿ II ಖಾತೆಯನ್ನು ತೆರೆಯಲು, ವ್ಯಕ್ತಿಗಳು ಕನಿಷ್ಠ 250 ರೂಪಾಯಿ ಠೇವಣಿ ಮಾಡಬೇಕಾಗುತ್ತದೆ.
ಅರ್ಹತೆ:18-70 ವರ್ಷ ವಯಸ್ಸಿನ ಭಾರತದ ಯಾವುದೇ ವೈಯಕ್ತಿಕ ನಾಗರಿಕ NPSಗೆ ಸೇರಬಹುದು.