ಮುಂಬೈ:ಬುಧವಾರದ ವಹಿವಾಟಿನಲ್ಲಿ ಭಾರತೀಯ ಷೇರು ಮಾರುಕಟ್ಟೆಯು ಚಂಚಲತೆಯೊಂದಿಗೆ ವಹಿವಾಟು ನಡೆಸಿ, ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ಕುಸಿತದೊಂದಿಗೆ ಕೊನೆಗೊಂಡವು. ಫೆಡರಲ್ ರಿಸರ್ವ್ ಬಡ್ಡಿದರ ಕಡಿತದ ವಿಳಂಬಕ್ಕೆ ಪ್ರತಿಕ್ರಿಯೆಯಾಗಿ ಏಷ್ಯಾದ ಇತರ ಮಾರುಕಟ್ಟೆಗಳಲ್ಲಿ ಕುಸಿತವನ್ನು ಗಮನಿಸಿದ ಹೂಡಿಕೆದಾರರು ಇಂದು ಜಾಗರೂಕರಾಗಿದ್ದರು. ಫೆಡರಲ್ ರಿಸರ್ವ್ನ ನಿರ್ಧಾರ ತೆಗೆದುಕೊಳ್ಳುವಿಕೆಯ ಬಗೆಗಿನ ಕಳವಳಗಳಿಂದ ಮಾರುಕಟ್ಟೆಯ ಭಾವನೆಯು ಪ್ರಭಾವಿತವಾಯಿತು ಮತ್ತು ಇದು ದಿನವಿಡೀ ವ್ಯಾಪಾರ ಚಟುವಟಿಕೆಗಳ ಮೇಲೆ ಪರಿಣಾಮ ಬೀರಿತು.
ಎನ್ಎಸ್ಇ ನಿಫ್ಟಿ-50 18.65 ಪಾಯಿಂಟ್ಸ್ ಅಥವಾ ಶೇ 0.08ರಷ್ಟು ಕುಸಿದು 22,434.65 ರಲ್ಲಿ ಕೊನೆಗೊಂಡರೆ, ಬಿಎಸ್ಇ ಸೆನ್ಸೆಕ್ಸ್ 27.09 ಪಾಯಿಂಟ್ಸ್ ಅಥವಾ ಶೇ 0.04ರಷ್ಟು ಕುಸಿದು 73,876.82 ರಲ್ಲಿ ಕೊನೆಗೊಂಡಿದೆ.
ಏಷ್ಯಾದ ಮಾರುಕಟ್ಟೆಗಳು ಶೇ 1ರಷ್ಟು ಕುಸಿತವಾದರೆ, ಯುರೋಪಿಯನ್ ಮಾರುಕಟ್ಟೆಗಳು ಯುಎಸ್ ಆರ್ಥಿಕ ದತ್ತಾಂಶದಿಂದ ಪ್ರಭಾವಿತವಾದ ಮಿಶ್ರ ಪ್ರದರ್ಶನವನ್ನು ತೋರಿಸಿವೆ.
ಒಟ್ಟಾರೆ ಮಾರುಕಟ್ಟೆಯ ಭಾವನೆಯ ಹೊರತಾಗಿಯೂ 13 ಪ್ರಮುಖ ವಲಯಗಳ ಪೈಕಿ 8 ವಲಯ ಷೇರುಗಳು ಲಾಭ ಕಂಡವು. ಟಿಸಿಎಸ್, ಎಚ್ಸಿಎಲ್ ಟೆಕ್ ಮತ್ತು ಟೆಕ್ ಮಹೀಂದ್ರಾದಂತಹ ಪ್ರಮುಖ ಕಂಪನಿಗಳ ಷೇರುಗಳನ್ನು ಒಳಗೊಂಡ ಮಾಹಿತಿ ತಂತ್ರಜ್ಞಾನ ಕ್ಷೇತ್ರವು ಶೇ 0.73 ರಷ್ಟು ಹೆಚ್ಚಳವನ್ನು ದಾಖಲಿಸಿದೆ.