ನವದೆಹಲಿ: ಭಾರತದ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ 5ಜಿ ಸ್ಮಾರ್ಟ್ಫೋನ್ಗಳ ಪಾಲು ಎರಡನೇ ತ್ರೈಮಾಸಿಕದಲ್ಲಿ ಶೇಕಡಾ 77 ಕ್ಕೆ ಏರಿಕೆಯಾಗಿದೆ. ಇದು ಕಳೆದ ವರ್ಷದ ಇದೇ ತ್ರೈಮಾಸಿಕದಲ್ಲಿ ಶೇಕಡಾ 49 ರಷ್ಟಿತ್ತು. ಇನ್ನು ಪ್ರಸಕ್ತ ತ್ರೈಮಾಸಿಕದಲ್ಲಿ 5ಜಿ ಸ್ಮಾರ್ಟ್ಫೋನ್ಗಳ ಸರಾಸರಿ ಮಾರಾಟ ಬೆಲೆ ಶೇಕಡಾ 22 ರಷ್ಟು ಕುಸಿದು 293 ಡಾಲರ್ಗೆ (ಸುಮಾರು 24,000 ರೂ.) ತಲುಪಿದೆ ಎಂದು ವರದಿಯೊಂದು ಮಂಗಳವಾರ ತಿಳಿಸಿದೆ. ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಸುಮಾರು 27 ಮಿಲಿಯನ್ 5ಜಿ ಸ್ಮಾರ್ಟ್ಫೋನ್ಗಳು ಮಾರಾಟವಾಗಿವೆ.
ಇಂಟರ್ ನ್ಯಾಷನಲ್ ಡಾಟಾ ಕಾರ್ಪೊರೇಷನ್ (ಐಡಿಸಿ) ವರದಿಯ ಪ್ರಕಾರ, ಭಾರತೀಯ ಒಟ್ಟಾರೆ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ 2024 ರ ಮೊದಲಾರ್ಧದಲ್ಲಿ 69 ಮಿಲಿಯನ್ ಸ್ಮಾರ್ಟ್ಫೋನ್ಗಳು ಮಾರಾಟವಾಗಿವೆ. ಎರಡನೇ ತ್ರೈಮಾಸಿಕದಲ್ಲಿ 35 ಮಿಲಿಯನ್ ಸ್ಮಾರ್ಟ್ಫೋನ್ಗಳು ಮಾರಾಟವಾಗಿದ್ದು, ಶೇಕಡಾ 3.2 ರಷ್ಟು ಬೆಳವಣಿಗೆಯಾಗಿದೆ.
ವರ್ಷದಿಂದ ವರ್ಷಕ್ಕೆ ಸತತ ನಾಲ್ಕನೇ ತ್ರೈಮಾಸಿಕದಲ್ಲಿ ಸ್ಮಾರ್ಟ್ಫೋನ್ಗಳ ಮಾರಾಟ ಹೆಚ್ಚಳವಾಗಿದ್ದರೂ, ಗ್ರಾಹಕರಿಂದ ಬೇಡಿಕೆ ಕುಸಿತವಾಗಿರುವುದು ಮತ್ತು ಹೆಚ್ಚುತ್ತಿರುವ ಸರಾಸರಿ ಮಾರಾಟ ಬೆಲೆಗಳ (ಎಎಸ್ಪಿಗಳು) ಕಾರಣದಿಂದ ವಾರ್ಷಿಕವಾಗಿ ಮಾರುಕಟ್ಟೆಯ ಚೇತರಿಕೆಗೆ ಅಡ್ಡಿಯಾಗಿದೆ ಎಂದು ವರದಿ ಹೇಳಿದೆ.
"ತ್ರೈಮಾಸಿಕದ ಮೊದಲಾರ್ಧದಲ್ಲಿ ಹಳೆಯ ದಾಸ್ತಾನು ಕ್ಲಿಯರೆನ್ಸ್ ಹೊರತಾಗಿ, ಕಂಪನಿಗಳು ಹೊಸ ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡುತ್ತಿವೆ. ವಿಶೇಷವಾಗಿ ಮಧ್ಯ ಪ್ರೀಮಿಯಂ / ಪ್ರೀಮಿಯಂ ವಿಭಾಗದಲ್ಲಿ (ಹೆಚ್ಚಾಗಿ ಚೀನಾ ಮೂಲದ ಮಾರಾಟಗಾರರು) ಜುಲೈ ಮತ್ತು ಆಗಸ್ಟ್ನ ಮಾನ್ಸೂನ್ ಸೀಸನ್ ಗಾಗಿ ಹೊಸ ಸ್ಮಾರ್ಟ್ಪೋನ್ಗಳು ಮಾರುಕಟ್ಟೆಗೆ ಬಂದಿವೆ" ಎಂದು ಐಡಿಸಿ ಇಂಡಿಯಾದ ಡಿವೈಸ್ ರಿಸರ್ಚ್ ವಿಭಾಗದ ಹಿರಿಯ ಸಂಶೋಧನಾ ವ್ಯವಸ್ಥಾಪಕಿ ಉಪಾಸನಾ ಜೋಶಿ ಹೇಳಿದರು.