ಬೆಂಗಳೂರು: ಭಾರತದಲ್ಲಿನ ಸ್ಟಾರ್ಟ್ಅಪ್ಗಳ ಸಂಖ್ಯೆ ಏಪ್ರಿಲ್ನಲ್ಲಿ ಶೇ 37ರಷ್ಟು ಹೆಚ್ಚಾಗಿದ್ದು, ಅದಕ್ಕೆ ತಕ್ಕಂತೆ ಶೇ 14ರಷ್ಟು ಹೊಸ ಉದ್ಯೋಗಗಳು ಸೃಷ್ಟಿಯಾಗಿವೆ ಎಂದು ವರದಿಯೊಂದು ಗುರುವಾರ ತಿಳಿಸಿದೆ. ಟ್ಯಾಲೆಂಟ್ ಪ್ಲಾಟ್ ಫಾರ್ಮ್ ಫೌಂಡಿಟ್ (ಈ ಹಿಂದೆ ಮಾನ್ ಸ್ಟರ್ ಎಪಿಎಸಿ ಮತ್ತು ಎಂಇ) ವರದಿಯ ಪ್ರಕಾರ, ಎಲ್ಲಾ ಸ್ಟಾರ್ಟ್ಅಪ್ಗಳಲ್ಲಿ ಲಭ್ಯವಿರುವ ಉದ್ಯೋಗಗಳ ಪೈಕಿ ಸುಮಾರು ಶೇ 53ರಷ್ಟು ಹುದ್ದೆಗಳು ಫ್ರೆಶರ್ಸ್ಗಳಿಗೆ ಲಭ್ಯವಾಗಲಿವೆ. ಸ್ಟಾರ್ಟ್ಅಪ್ ಉದ್ಯಮದ ಒಟ್ಟಾರೆ ನೇಮಕಾತಿ ಪ್ರಮಾಣವು ಮಾಸಿಕವಾಗಿ ಶೇ 9ರಷ್ಟು ಮತ್ತು ವಾರ್ಷಿಕವಾಗಿ ಶೇ 9ರಷ್ಟು ಹೆಚ್ಚಳವಾಗಿದೆ.
"ಉತ್ಪಾದನಾ ವಲಯದ ಸ್ಟಾರ್ಟ್ಅಪ್ಗಳಲ್ಲಿನ ನೇಮಕಾತಿಯು ವರ್ಷದಿಂದ ವರ್ಷಕ್ಕೆ ಶೇ 31ರಷ್ಟು ಗಮನಾರ್ಹ ಏರಿಕೆ ಕಂಡಿದೆ" ಎಂದು ಫೌಂಡಿಟ್ ಸಿಇಒ ಶೇಖರ್ ಗರಿಸಾ ಹೇಳಿದ್ದಾರೆ.
ಐಟಿ (ಮಾಹಿತಿ ತಂತ್ರಜ್ಞಾನ) ಸೇವಾ ವಲಯದ ಸ್ಟಾರ್ಟ್ಅಪ್ಗಳಲ್ಲಿ ಏಪ್ರಿಲ್ 2023 ಮತ್ತು ಈ ವರ್ಷದ ಏಪ್ರಿಲ್ ನಡುವೆ ಉದ್ಯೋಗ ನೇಮಕಾತಿಗಳಲ್ಲಿ ಶೇಕಡಾ 20ರಿಂದ 23ರಷ್ಟು ಸ್ಥಿರವಾದ ಹೆಚ್ಚಳ ಕಂಡು ಬಂದಿದೆ. ಇದಕ್ಕೆ ವ್ಯತಿರಿಕ್ತವಾಗಿ ಇಂಟರ್ ನೆಟ್, ಬಿಎಫ್ಎಸ್ಐ/ಫಿನ್‌ಟೆಕ್ ಮತ್ತು ಮಾಧ್ಯಮ ಮತ್ತು ಮನರಂಜನಾ ಉದ್ಯಮಗಳಿಗೆ ಸಂಬಂಧಿಸಿದ ಸ್ಟಾರ್ಟ್ಅಪ್ಗಳಲ್ಲಿ ಉದ್ಯೋಗ ನೇಮಕಾತಿಗಳು ಹಿಂದಿನ ಸಮಯಕ್ಕೆ ಹೋಲಿಸಿದರೆ ಅಲ್ಪ ಕುಸಿತವಾಗಿದೆ.