ನವದೆಹಲಿ: ಭಾರತದ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿನ ಜನತೆ ವಸ್ತುಗಳ ಖರೀದಿಗೆ ಮತ್ತು ಸೇವೆಗಳನ್ನು ಪಡೆಯಲು ಮಾಡುವ ಗೃಹ ಬಳಕೆಯ ವೆಚ್ಚವು ಕಳೆದ ದಶಕದಲ್ಲಿ ದೃಢವಾದ ಏರಿಕೆ ಕಂಡಿದೆ ತೋರಿಸಿದೆ ಎಂದು ಅಂಕಿಅಂಶ ಸಚಿವಾಲಯ ಬಿಡುಗಡೆ ಮಾಡಿದ ಇತ್ತೀಚಿನ ಸಮೀಕ್ಷೆ ತಿಳಿಸಿದೆ. ಈ ಗೃಹ ಬಳಕೆಯ ವೆಚ್ಚದ ಅಂಕಿ ಸಂಖ್ಯೆಗಳು ಜನಸಂಖ್ಯೆಯ ಜೀವನ ಮಟ್ಟ ಮತ್ತು ಯೋಗಕ್ಷೇಮವನ್ನು ಪ್ರತಿಬಿಂಬಿಸುತ್ತವೆ.
2011-12ರಲ್ಲಿ ದಾಖಲಾದ ಅಂಕಿಅಂಶಗಳಿಗೆ ಹೋಲಿಸಿದರೆ, ಹಣದುಬ್ಬರವನ್ನು ಸರಿಹೊಂದಿಸಿದ ನಂತರ ಗ್ರಾಮೀಣ ಭಾರತದಲ್ಲಿ ಮಾಸಿಕ ತಲಾ ಗೃಹ ಬಳಕೆಯು 2022-23ರಲ್ಲಿ ಶೇಕಡಾ 40ಕ್ಕಿಂತ ಏರಿಕೆಯಾಗಿದೆ ಎಂದು ಸಮೀಕ್ಷೆ ತಿಳಿಸಿದೆ. ಒಟ್ಟಾರೆಯಾಗಿ ಹೇಳುವುದಾದರೆ, ದೇಶದ ಗ್ರಾಮೀಣ ಪ್ರದೇಶಗಳಲ್ಲಿ ಮಾಸಿಕ ತಲಾ ಬಳಕೆಯ ವೆಚ್ಚವು 2011-12ರಲ್ಲಿ 1,430 ರೂ.ಗಳಿಂದ 2022-23ರಲ್ಲಿ 2,008 ರೂ.ಗೆ ಏರಿದೆ.
ಹಣದುಬ್ಬರವನ್ನು ಸರಿಹೊಂದಿಸಿದ ನಂತರ 2011-12ರಲ್ಲಿ 2,360 ರೂ. ಇದ್ದ ತಲಾ ಗೃಹ ಬಳಕೆ ವೆಚ್ಚವು 2022-23ರಲ್ಲಿ 3,510 ರೂ.ಗೆ ಏರುವುದರೊಂದಿಗೆ ಭಾರತದ ನಗರ ಪ್ರದೇಶದಲ್ಲಿನ ಗೃಹ ಬಳಕೆ ವೆಚ್ಚವು ಶೇಕಡಾ 33ರಷ್ಟು ಹೆಚ್ಚಳವಾಗಿದೆ.
ಹಣದುಬ್ಬರವನ್ನು ಸರಿಹೊಂದಿಸದೆ ಇದ್ದಾಗ ಈ ಅಂಕಿಅಂಶಗಳು 2022-23ರಲ್ಲಿ ನಗರ ಕುಟುಂಬಗಳಿಗೆ 6,459 ರೂ ಮತ್ತು ಗ್ರಾಮೀಣ ಕುಟುಂಬಗಳಿಗೆ 3,773 ರೂ.ಗಳಾಗಿದ್ದು, 2011-12 ರಲ್ಲಿ ಇದ್ದ ಕ್ರಮವಾಗಿ 2,630 ಮತ್ತು 1,430 ರೂ.ಗೆ ಹೋಲಿಸಿದರೆ, ಇದು ಹಣದುಬ್ಬರಕ್ಕೆ ಸರಿಹೊಂದಿಸಿದ ನಂತರ ನೈಜ ಅವಧಿಯ ಏರಿಕೆಗಿಂತ ಹೆಚ್ಚಾಗಿದೆ. ಗೃಹ ಬಳಕೆಯ ವೆಚ್ಚವು ಆಹಾರ, ಇಂಧನ, ವಿದ್ಯುತ್, ವೈದ್ಯಕೀಯ ಸೇವೆಗಳು, ಸಾರಿಗೆ ಮತ್ತು ಶಿಕ್ಷಣದ ವೆಚ್ಚವನ್ನು ಒಳಗೊಂಡಿದೆ.