ನವದೆಹಲಿ: ಕಬ್ಬಿನ ರಸ, ಬಿ-ಹೆವಿ ಮತ್ತು ಸಿ-ಹೆವಿ ಮೊಲಾಸಿಸ್ನಿಂದ ಎಥೆನಾಲ್ ಉತ್ಪಾದನೆಯ ಮೇಲೆ ವಿಧಿಸಲಾಗಿದ್ದ ನಿರ್ಬಂಧಗಳನ್ನು ಸರ್ಕಾರ ತೆಗೆದುಹಾಕಿದೆ. ನವೆಂಬರ್ನಿಂದ ಪ್ರಾರಂಭವಾಗುವ ಮುಂದಿನ ವರ್ಷದ ಎಥೆನಾಲ್ ಪೂರೈಕೆ ವರ್ಷದಿಂದ ಎಥೆನಾಲ್ ಉತ್ಪಾದನೆ ಮೇಲಿನ ನಿರ್ಬಂಧಗಳು ತೆರವಾಗಲಿವೆ.
ಸಕ್ಕರೆ ಕಾರ್ಖಾನೆಗಳು ಮತ್ತು ಡಿಸ್ಟಿಲರಿಗಳು ತೈಲ ಮಾರುಕಟ್ಟೆ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿರುವಂತೆ ಕಬ್ಬಿನ ರಸ, ಸಕ್ಕರೆ ಸಿರಪ್, ಬಿ-ಹೆವಿ ಅಥವಾ ಸಿ-ಹೆವಿ ಮೊಲಾಸಿಸ್ನಿಂದ ಎಥೆನಾಲ್ ಉತ್ಪಾದಿಸಬಹುದು ಎಂದು ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ ಗುರುವಾರ ಪ್ರಕಟಣೆಯಲ್ಲಿ ತಿಳಿಸಿದೆ.
ದೇಶದಲ್ಲಿ ಬೇಡಿಕೆಗೆ ತಕ್ಕಷ್ಟು ಸಕ್ಕರೆ ಲಭ್ಯವಿರುವುದನ್ನು ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ ಆಗಾಗ ಖಚಿತಪಡಿಸಿಕೊಂಡು ಎಥೆನಾಲ್ ತಯಾರಿಕೆಗೆ ಸಕ್ಕರೆಯನ್ನು ಪೂರೈಸಲಿದೆ. ದೇಶದ ಮಾರುಕಟ್ಟೆಯಲ್ಲಿ ಬೇಡಿಕೆಗೆ ತಕ್ಕಷ್ಟು ಸಕ್ಕರೆಯ ಪೂರೈಕೆಗಾಗಿ ಇಲಾಖೆ ಕಳೆದ ಡಿಸೆಂಬರ್ ನಿಂದ ಎಥೆನಾಲ್ ಉತ್ಪಾದನೆಯನ್ನು ನಿರ್ಬಂಧಿಸಿತ್ತು.
2024-25ರ ಎಥೆನಾಲ್ ವರ್ಷದಲ್ಲಿ ಕಬ್ಬಿನ ರಸ, ಬಿ-ಹೆವಿ ಮೊಲಾಸಿಸ್ ಮತ್ತು ಸಿ-ಹೆವಿ ಮೊಲಾಸಿಸ್ನಿಂದ ಅನಿರ್ಬಂಧಿತ ಎಥೆನಾಲ್ ಉತ್ಪಾದನೆಗೆ ಅವಕಾಶ ನೀಡುವುದು ಉದ್ಯಮಕ್ಕೆ ಗಮನಾರ್ಹ ಲಾಭದಾಯಕವಾಗಿದೆ ಎಂದು ಭಾರತೀಯ ಸಕ್ಕರೆ ಮತ್ತು ಜೈವಿಕ ಇಂಧನ ತಯಾರಕರ ಸಂಘದ ಮಹಾನಿರ್ದೇಶಕ ದೀಪಕ್ ಬಲ್ಲಾನಿ ಹೇಳಿದ್ದಾರೆ.