ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬುಧವಾರ ಚಿನ್ನದ ಬೆಲೆ ಸಾರ್ವಕಾಲಿಕ ಎತ್ತರಕ್ಕೆ ಜಿಗಿಯಿತು. 910 ರೂಪಾಯಿ ಏರಿಕೆಯಾಗಿ 10 ಗ್ರಾಂ.ಗೆ 83,750 ರೂಪಾಯಿ ತಲುಪಿತು. ಜುವೆಲ್ಲರಿ ಮತ್ತು ಚಿಲ್ಲರೆ ಮಾರಾಟಗಾರರಿಂದ ಬೇಡಿಕೆ ಹೆಚ್ಚಾಗಿದ್ದು ಬೆಲೆ ಏರಿಕೆಗೆ ಕಾರಣ ಎಂದು ಅಖಿಲ ಭಾರತ ಸರಾಫಾ ಅಸೋಸಿಯೇಷನ್ ತಿಳಿಸಿದೆ.
ಇದಕ್ಕೂ ಹಿಂದಿನ ದಿನ ಅಂದರೆ ಮಂಗಳವಾರ 99.9 ಶುದ್ಧತೆಯ ಚಿನ್ನದ ಬೆಲೆ 10 ಗ್ರಾಂ.ಗೆ 82,840 ರೂಪಾಯಿಗೆ ಮಾರಾಟವಾಗಿತ್ತು. ಜನವರಿ 1ರಂದು ಚಿನ್ನದ ಬೆಲೆಯಲ್ಲಿ 4,360 ಅಥವಾ ಶೇ 5.5ರಷ್ಟು ಏರಿಕೆಯಾಗಿ 10 ಗ್ರಾಂ.ಗೆ 83,750 ಆಗಿತ್ತು.
ಎರಡು ದಿನ ಕೊಂಚ ಇಳಿಕೆ ಕಂಡಿರುವ ಶೇ 99.5 ಶುದ್ಧತೆಯ ಚಿನ್ನ 910 ರೂ ಏರಿಕೆಯಾಗಿ 10 ಗ್ರಾಂ.ಗೆ 83,350 ತಲುಪಿದೆ. ಇದರ ಬೆಲೆ ಮಂಗಳವಾರ 82,440 ರೂ ಇತ್ತು.
ಬೆಳ್ಳಿ ಧಾರಣೆ 1,000 ರೂ ಹೆಚ್ಚಳ: ಚಿನ್ನದೊಂದಿಗೆ ಬೆಳ್ಳಿ ಬೆಲೆಯೂ ಹೆಚ್ಚಾಗುತ್ತಿದೆ. ಬುಧವಾರ 1,000 ರೂಪಾಯಿ ಏರಿಕೆಯಾಗಿದ್ದು, ಕೆ.ಜಿಗೆ 93,000 ರೂ ತಲುಪಿದೆ. ಇದಕ್ಕೂ ಹಿಂದಿನ ದಿನ ಪ್ರತಿ ಕೆ.ಜಿ ಬೆಳ್ಳಿ 92,000 ರೂಪಾಯಿಗೆ ಮಾರಾಟವಾಗಿತ್ತು.
"ಷೇರು ಮಾರುಕಟ್ಟೆ ಇಳಿಕೆಯ ಹಾದಿಯಲ್ಲಿ ಸಾಗುತ್ತಿದ್ದಂತೆ ಇತ್ತ ಹೂಡಿಕೆದಾರರು ಚಿನ್ನ, ಬೆಳ್ಳಿಯತ್ತ ಚಿತ್ತ ಹರಿಸುತ್ತಿದ್ದಾರೆ. ಅಮೂಲ್ಯ ಲೋಹಗಳಲ್ಲೇ ಹೂಡಿಕೆ ಹೆಚ್ಚು ಸುರಕ್ಷಿತ ಎಂದು ಅವರು ಮನಗಂಡಿರುವಂತಿದೆ" ಎಂಬುದು ಆ್ಯಕ್ಸಿಸ್ ಸೆಕ್ಯೂರಿಟೀಸ್‌ನ ರಿಸರ್ಚ್ ಅನಾಲಿಸ್ಟ್ ದೆವೆಯ ಗಗ್ಲಾನಿ ಅವರ ವಿಶ್ಲೇಷಣೆ.
ಹೆಚ್‌ಡಿಎಫ್‌ಸಿ ಸೆಕ್ಯೂರಿಟೀಸ್‌ನ ಹಿರಿಯ ಅನಾಲಿಸ್ಟ್ ಸೌಮಿಲ್ ಗಾಂಧಿ ಅವರ ಪ್ರಕಾರ, "ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಿರೀಕ್ಷಿತ ತೆರಿಗೆ ಯೋಜನೆಯ ವಿರುದ್ಧ ರಕ್ಷಣೆ ಪಡೆದುಕೊಳ್ಳಲು ಮಾರಾಟಗಾರರು, ಹೂಡಿಕೆದಾರರು ಚಿನ್ನ, ಬೆಳ್ಳಿ ಮುಂತಾದ ಅಮೂಲ್ಯ ಲೋಹಗಳಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಇದೇ ಕಾರಣಕ್ಕೆ ಬೆಲೆ ಏರಿಕೆಯಾಗುತ್ತಿದೆ" ಎಂದರು.
"ಅಮೆರಿಕದ ಕೇಂದ್ರ ಬ್ಯಾಂಕ್ ಫೆಡರಲ್ ರಿಸರ್ವ್‌ನ ಮುಂದಿನ ಬಡ್ಡಿ ದರ ನಿರ್ಧಾರಗಳನ್ನು ಕೂಡಾ ಮಾರುಕಟ್ಟೆ ಪಾಲುದಾರರು ನಿರೀಕ್ಷಿಸುತ್ತಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಬಡ್ಡಿ ದರ ಕಡಿತ ದೂರದ ಮಾತೆನ್ನಬಹುದು. ಆದರೆ ಚಿನ್ನದ ಮುಂದಿನ ಬೆಳವಣಿಗೆಯನ್ನು ಅಂದಾಜಿಸಲು ಇದು ಪೂರಕವಾಗಿದೆ" ಎಂಬುದು ಎಲ್‌ಕೆಪಿ ಸೆಕ್ಯೂರಿಟೀಸ್‌ನ ಹಿರಿಯ ರಿಸರ್ಚ್ ಅನಾಲಿಸ್ಟ್ ಜತೀನ್ ತ್ರಿವೇದಿ ಅವರ ಮಾತು.
ಇದನ್ನೂ ಓದಿ: 2024ರಲ್ಲಿ ಹೆಚ್ಚು ಚಿನ್ನ ಖರೀದಿ ಮಾಡಿದ 2ನೇ ದೊಡ್ಡ ರಾಷ್ಟ್ರವಾದ ಭಾರತ: ಇಂಡಿಯಾ ಬಳಿ ಇದೆ ಇಷ್ಟೊಂದು ಸಂಗ್ರಹ