ನವದೆಹಲಿ:ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಜುಲೈ 23ರಂದು ಮುಂಗಡಪತ್ರ (ಬಜೆಟ್)ವನ್ನು ಲೋಕಸಭೆಯಲ್ಲಿ ಮಂಡನೆ ಮಾಡಲಿದ್ದಾರೆ. ಕೇಂದ್ರ ಬಜೆಟ್‌ನಲ್ಲಿ ಸಾಕಷ್ಟು ವಿಚಾರಗಳ ಕುರಿತು ಜನಸಾಮಾನ್ಯರಿಗೆ ಸುಲಭವಾಗಿ ಅರ್ಥವಾಗದು. ಹಣಕಾಸು ಮಸೂದೆ ಕೂಡ ಬಜೆಟ್‌ನಲ್ಲಿ ಅತ್ಯಂತ ಪ್ರಮುಖವಾದದು. ಹಾಗಾದರೆ ಈ ಹಣಕಾಸು ಮಸೂದೆ ಎಂದರೇನು? ಏಕೆ ಮುಖ್ಯ ಎಂಬುದನ್ನು ಇಲ್ಲಿ ತಿಳಿಯಿರಿ
ಕೇಂದ್ರ ಬಜೆಟ್ ಮಂಡನೆ ಸಂದರ್ಭದಲ್ಲಿ ಬಜೆಟ್ನಲ್ಲಿರುವ ತೆರಿಗೆ ಪ್ರಸ್ತಾಪಗಳನ್ನು ಜಾರಿಗೆ ತರಲು ವಿತ್ತ ಸಚಿವರು ಲೋಕಸಭೆಯಲ್ಲಿ ಹಣಕಾಸು ಮಸೂದೆಯನ್ನು ಮಂಡಿಸುತ್ತಾರೆ. ಲೋಕಸಭೆಯಲ್ಲಿ ಹಣಕಾಸು ವರ್ಷದ ಹಣಕಾಸು ಮಸೂದೆಯನ್ನು ಕೇಂದ್ರ ಬಜೆಟ್ ಮಂಡಿಸಿದ ತಕ್ಷಣ ಪ್ರಸ್ತುತ ಪಡಿಸಲಾಗುತ್ತದೆ. ಹೊಸ ತೆರಿಗೆಯನ್ನು ವಿಧಿಸಲು, ಅಸ್ತಿತ್ವದಲ್ಲಿರುವ ತೆರಿಗೆಯನ್ನು ಬದಲಾಯಿಸಲು ಅಥವಾ ರದ್ದುಗೊಳಿಸಲು ಕಾನೂನನ್ನು ಅಂಗೀಕರಿಸುವ ಮೂಲಕ ಸರ್ಕಾರ ಸಂಸತ್ತಿನ ಅನುಮೋದನೆ ಪಡೆಯಬೇಕಾಗಿದೆ.
ಹಣಕಾಸು ಸಚಿವರು, ಬಜೆಟ್ ಪ್ರಸ್ತಾವನೆಗಳನ್ನು ಜಾರಿಗೆ ತರಲು, ವಿಶೇಷವಾಗಿ ತೆರಿಗೆಗಳು ಮತ್ತು ಕೇಂದ್ರ ಸರ್ಕಾರದ ಕೆಲವು ಹಣಕಾಸು ನಿಬಂಧನೆಗಳನ್ನು ಜಾರಿಗೆ ತರಲು, ಹಣಕಾಸು ಮಸೂದೆಯನ್ನು ಬಜೆಟ್ ಮಂಡಿಸಿದ ತಕ್ಷಣ ಲೋಕಸಭೆಯಲ್ಲಿ ಪ್ರಸ್ತುತ ಪಡಿಸುತ್ತಾರೆ.
ಹಣಕಾಸು ಮಸೂದೆ ಮಂಡನೆಗೆ ರಾಷ್ಟ್ರಪತಿಗಳ ಅನುಮೋದನೆ ಅಗತ್ಯ: ಹಣಕಾಸು ಮಸೂದೆಯು ವಿಶೇಷ ಮಸೂದೆ ಆಗಿರುವುದರಿಂದ ಅದನ್ನು ಲೋಕಸಭೆಯಲ್ಲಿ ಮಂಡಿಸಲು ರಾಷ್ಟ್ರಪತಿಗಳ ಅನುಮೋದನೆಯ ಅಗತ್ಯವಿದೆ. ಲೋಕಸಭೆಯಲ್ಲಿ ಹಣಕಾಸು ಮಸೂದೆಯನ್ನು ಮಂಡಿಸಲು ರಾಷ್ಟ್ರಪತಿಗಳ ಶಿಫಾರಸಿನ ಕುರಿತು ಭಾರತೀಯ ಸಂವಿಧಾನದಲ್ಲಿ ಎರಡು ವಿಧಿಗಳಿವೆ. ಇವುಗಳೆಂದರೆ ವಿಧಿ 117 ಮತ್ತು 274.
ಆರ್ಟಿಕಲ್ 117 ಹಣಕಾಸು ಮಸೂದೆಗಳ ಬಗೆಗಿನ ವಿಶೇಷ ನಿಬಂಧನೆಗಳಿಗೆ ಸಂಬಂಧಿಸಿದೆ. ಹಣಕಾಸು ಮಸೂದೆಗಳಿಗೆ ಸಂಬಂಧಿಸಿದ 110 ರ (1) ನೇ ವಿಧಿಯ (ಎ) ನಿಂದ (ಎಫ್) ಉಪ - ಕಲಂಗಳಲ್ಲಿ ನಿರ್ದಿಷ್ಟಪಡಿಸಿದ ಯಾವುದೇ ವಿಷಯಗಳಿಗೆ ವಿಧೇಯಕ ಅಥವಾ ತಿದ್ದುಪಡಿಯನ್ನು ರಾಷ್ಟ್ರಪತಿಗಳ ಅನುಮೋದನೆ ಇಲ್ಲದೇ ಲೋಕಸಭೆಯಲ್ಲಿ ಮಂಡಿಸಲಾಗುವುದಿಲ್ಲ ಎಂದು ಹೇಳುತ್ತದೆ. ಈ ಮಸೂದೆಗಳನ್ನು ರಾಜ್ಯಗಳಲ್ಲಿ ವಿಧಾನ ಪರಿಷತ್ ಮತ್ತು ಸಂಸತ್ತಿನ ರಾಜ್ಯಸಭೆಯಲ್ಲಿ ಮಂಡಿಸುವಂತಿಲ್ಲ.
ಆರ್ಟಿಕಲ್ 110ರ ನಿಬಂಧನೆಗಳು ಯಾವುದೇ ತೆರಿಗೆಯನ್ನು ವಿಧಿಸಲು, ಮಾರ್ಪಡಿಸಲು, ರದ್ದುಗೊಳಿಸಲು ಅಥವಾ ನಿಯಂತ್ರಿಸಲು ನಿಬಂಧನೆಗಳನ್ನು ಒಳಗೊಂಡಿರುವ ಹಣಕಾಸು ಮಸೂದೆಗೆ ಸಂಬಂಧಿಸಿವೆ. ಜೊತೆಗೆ ಸರ್ಕಾರ ಸಾಲ ಪಡೆಯುವುದು, ಭಾರತದ ಸಂಚಿತ ನಿಧಿಯಿಂದ ಹಣವನ್ನು ಹಿಂತೆಗೆದುಕೊಳ್ಳುವುದು ಸೇರಿದಂತೆ ಇತರ ವಿಷಯಗಳಿಗೂ ಸಂಬಂಧಿಸಿದೆ.