ನವದೆಹಲಿ: ಭಾರತದಲ್ಲಿ ದೇಶೀಯ ವಿಮಾನ ಪ್ರಯಾಣಿಕರ ದಟ್ಟಣೆಯು ಜುಲೈ ತಿಂಗಳಲ್ಲಿ ಶೇ 8.6ರಷ್ಟು (ವರ್ಷದಿಂದ ವರ್ಷಕ್ಕೆ) ಏರಿಕೆಯಾಗಿ 131.4 ಲಕ್ಷಕ್ಕೆ (1 ಕೋಟಿ 31 ಲಕ್ಷ) ತಲುಪಿದೆ ಮತ್ತು ಕಳೆದ ವರ್ಷ ಇದೇ ತಿಂಗಳಲ್ಲಿ ಈ ಪ್ರಮಾಣ 121 ಲಕ್ಷದಷ್ಟಿತ್ತು ಎಂದು ವರದಿಯೊಂದು ಶುಕ್ರವಾರ ತಿಳಿಸಿದೆ. ಅಲ್ಲದೆ ದೇಶೀಯ ವಿಮಾನ ಸಂಚಾರವು 2019 ರ ಜುಲೈನಲ್ಲಿ ಇದ್ದ ಕೋವಿಡ್ ಪೂರ್ವ ಮಟ್ಟವಾದ 119.1 ಲಕ್ಷಕ್ಕಿಂತ ಶೇಕಡಾ 10ರಷ್ಟು ಹೆಚ್ಚಾಗಿದೆ ಎಂದು ಕ್ರೆಡಿಟ್ ರೇಟಿಂಗ್ ಏಜೆನ್ಸಿ ಐಸಿಆರ್ಎ ವರದಿ ತಿಳಿಸಿದೆ.
ಏಪ್ರಿಲ್ನಿಂದ ಜುಲೈವರೆಗಿನ (ನಾಲ್ಕು ತಿಂಗಳ ಅವಧಿ) ಅವಧಿಯಲ್ಲಿ ದೇಶೀಯ ವಿಮಾನ ಪ್ರಯಾಣಿಕರ ದಟ್ಟಣೆ 533.4 ಲಕ್ಷವಾಗಿದ್ದು, ಕಳೆದ ವರ್ಷದ ಇದೇ ಅವಧಿಗೆ (506.9 ಲಕ್ಷ) ಹೋಲಿಸಿದರೆ ಶೇಕಡಾ 5.2ರಷ್ಟು ಬೆಳವಣಿಗೆಯಾಗಿದೆ ಮತ್ತು 2020 ರ ಹಣಕಾಸು ವರ್ಷದ ಇದೇ ನಾಲ್ಕು ತಿಂಗಳ ಅವಧಿಯಲ್ಲಿನ ಕೋವಿಡ್ ಪೂರ್ವ ಮಟ್ಟವಾದ 471.1 ಲಕ್ಷಕ್ಕಿಂತ ಶೇಕಡಾ 13.2ರಷ್ಟು ಹೆಚ್ಚಾಗಿದೆ.
ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ, ಭಾರತೀಯ ವಿಮಾನಯಾನ ಕಂಪನಿಯ ವಿಮಾನಗಳ ಅಂತರರಾಷ್ಟ್ರೀಯ ಪ್ರಯಾಣಿಕರ ದಟ್ಟಣೆಯು ಶೇಕಡಾ 16.7ರಷ್ಟು ಬೆಳವಣಿಗೆಯೊಂದಿಗೆ 80.5 ಲಕ್ಷಕ್ಕೆ ತಲುಪಿದೆ.
ದೇಶೀಯ ಮತ್ತು ಅಂತರರಾಷ್ಟ್ರೀಯ ವಿಮಾನ ಪ್ರಯಾಣಿಕರ ದಟ್ಟಣೆಯಲ್ಲಿ ನಿರಂತರ ಚೇತರಿಕೆ, ತುಲನಾತ್ಮಕವಾಗಿ ಸ್ಥಿರವಾದ ವೆಚ್ಚಗಳು ಮತ್ತು 2025ರ ಹಣಕಾಸು ವರ್ಷದಲ್ಲಿ ಇದೇ ಪ್ರವೃತ್ತಿ ಮುಂದುವರಿಯುವ ನಿರೀಕ್ಷೆಗಳಿಂದಾಗಿ ಭಾರತೀಯ ವಾಯುಯಾನ ಉದ್ಯಮವು ಸ್ಥಿರವಾದ ಬೆಳವಣಿಗೆ ಸಾಧಿಸಲಿದೆ ಎಂದು ಐಸಿಆರ್ಎ ಹೇಳಿದೆ.