ಕರ್ನಾಟಕ

karnataka

ETV Bharat / business

10 ವರ್ಷಗಳಲ್ಲಿ ಡೇಟಾ ದರ 269ರಿಂದ 9 ರೂ.ಗೆ ಇಳಿಕೆ; ಬ್ರಾಡ್ ಬ್ಯಾಂಡ್ ವೇಗ ಶೇ 72ರಷ್ಟು ಏರಿಕೆ - MOBILE DATA COST IN INDIA

ಕಳೆದ ಹತ್ತು ವರ್ಷಗಳಲ್ಲಿ ಮೊಬೈಲ್ ಡೇಟಾ ದರಗಳು ಶೇ 96ರಷ್ಟು ಇಳಿಕೆಯಾಗಿವೆ.

10 ವರ್ಷಗಳಲ್ಲಿ ಡೇಟಾ ದರ 269 ರಿಂದ 9 ರೂ.ಗೆ ಇಳಿಕೆ
ಸಂಗ್ರಹ ಚಿತ್ರ (IANS)

By ETV Bharat Karnataka Team

Published : 5 hours ago

ನವದೆಹಲಿ:2014ರ ಮಾರ್ಚ್​ಗೆ ಹೋಲಿಸಿದರೆ ಭಾರತದಲ್ಲಿ ಪ್ರತೀ ಜಿಬಿ ಡೇಟಾ ದರಗಳು 269 ರೂಪಾಯಿಗಳಿಂದ ಪ್ರಸ್ತುತ 9.08 ರೂಪಾಯಿಗೆ ಅಂದರೆ ಶೇ 96.6ರಷ್ಟು ಇಳಿಕೆಯಾಗಿದೆ ಎಂದು ಕೇಂದ್ರ ಸರ್ಕಾರ ಬುಧವಾರ ಸಂಸತ್ತಿಗೆ ಮಾಹಿತಿ ನೀಡಿತು.

ಸರಾಸರಿ ಮೊಬೈಲ್ ಬ್ರಾಡ್ ಬ್ಯಾಂಡ್ ವೇಗವು ಮಾರ್ಚ್ 2014ರಲ್ಲಿ ಇದ್ದ 1.30 ಎಂಬಿಪಿಎಸ್​ನಿಂದ 95.67 ಎಂಬಿಪಿಎಸ್​ಗೆ (ಅಕ್ಟೋಬರ್ ವೇಳೆಗೆ) ಶೇ 72ರಷ್ಟು ಏರಿಕೆಯಾಗಿದೆ ಎಂದು ಕೇಂದ್ರ ಸಂವಹನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಲೋಕಸಭೆಗೆ ತಿಳಿಸಿದ್ದಾರೆ.

ಪ್ರತೀ ಚಂದಾದಾರರ ಸರಾಸರಿ ವೈರ್‌ಲೆಸ್ ಡೇಟಾ ಬಳಕೆಯು ಪ್ರತೀ ವ್ಯಕ್ತಿಗೆ ತಿಂಗಳಿಗೆ 22.24 ಜಿಬಿಗೆ ಏರಿದೆ. ಅಕ್ಟೋಬರ್ ವೇಳೆಗೆ, 783 ಜಿಲ್ಲೆಗಳಲ್ಲಿ ಹರಡಿರುವ 4ಜಿ ಬೇಸ್ ಟ್ರಾನ್ಸಿವರ್ ಕೇಂದ್ರಗಳ (ಬಿಟಿಎಸ್) ಸಂಖ್ಯೆ 24,96,644ಕ್ಕೆ ತಲುಪಿದೆ. 779 ಜಿಲ್ಲೆಗಳಲ್ಲಿ 4,62,084 ಬಿಟಿಎಸ್ ಅನ್ನು ನಿಯೋಜಿಸುವ ಮೂಲಕ ಭಾರತವು ವಿಶ್ವದಲ್ಲೇ ವೇಗವಾಗಿ 5ಜಿ ಸೇವೆಗಳನ್ನು ಪ್ರಾರಂಭಿಸಿದೆ ಎಂದು ಸಚಿವರು ಹೇಳಿದರು.

ಕಳೆದ ತಿಂಗಳು ಭಾರತ 'ನೆಟ್ ವರ್ಕ್ ಸಿದ್ಧತಾ ಸೂಚ್ಯಂಕ 2024' (ಎನ್ಆರ್​ಐ 2024)ನಲ್ಲಿ 11 ಸ್ಥಾನಗಳಷ್ಟು ಮೇಲಕ್ಕೆ ಏರಿದೆ ಮತ್ತು ಈಗ ಜಾಗತಿಕವಾಗಿ 49ನೇ ಸ್ಥಾನದಲ್ಲಿದೆ.

ವಾಷಿಂಗ್ಟನ್ ಡಿಸಿ ಮೂಲದ ಸ್ವತಂತ್ರ ಲಾಭರಹಿತ ಸಂಶೋಧನೆ ಮತ್ತು ಶಿಕ್ಷಣ ಸಂಸ್ಥೆಯಾದ ಪೋರ್ಚುಗಲ್ಸ್ ಇನ್‌ಸ್ಟಿಟ್ಯೂಟ್ ಪ್ರಕಟಿಸಿದ ಸೂಚ್ಯಂಕದ ಪ್ರಕಾರ, ಭಾರತವು ತನ್ನ ಶ್ರೇಯಾಂಕವನ್ನು ಸುಧಾರಿಸಿಕೊಂಡಿದ್ದು ಮಾತ್ರವಲ್ಲದೆ 2023ರಲ್ಲಿದ್ದ 49.93ರಿಂದ 2024ರಲ್ಲಿ 53.63ಕ್ಕೆ ಏರಿಕೆಯಾಗಿದೆ. ಸಂವಹನ ಸಚಿವಾಲಯದ ಪ್ರಕಾರ, ದೇಶವು ಪ್ರಸ್ತುತ ಎಐ, ಎಫ್​ಟಿಟಿಎಚ್ ಇಂಟರ್ ನೆಟ್ ಚಂದಾದಾರಿಕೆ ಮತ್ತು ಮೊಬೈಲ್ ಬ್ರಾಡ್ ಬ್ಯಾಂಡ್ ಇಂಟರ್‌ನೆಟ್ ದಟ್ಟಣೆಯಂತಹ ಹಲವಾರು ಸೂಚಕಗಳಲ್ಲಿ ಮುಂಚೂಣಿಯಲ್ಲಿದೆ.

ಕಳೆದೊಂದು ದಶಕದಲ್ಲಿ ಟೆಲಿ-ಸಾಂದ್ರತೆಯು ಶೇಕಡಾ 75.2ರಿಂದ 84.69ಕ್ಕೆ ಏರಿಕೆಯಾಗಿದೆ ಮತ್ತು ವೈರ್‌ಲೆಸ್ ಸಂಪರ್ಕಗಳು 119 ಕೋಟಿಗೆ ತಲುಪಿವೆ. ಇದಲ್ಲದೆ, ಭಾರತ 2022ರಲ್ಲಿ 5ಜಿ ಸೇವೆಗಳನ್ನು ಪ್ರಾರಂಭಿಸಿದ್ದು, ಜಾಗತಿಕ ಮೊಬೈಲ್ ಬ್ರಾಡ್ ಬ್ಯಾಂಡ್ ವೇಗ ಶ್ರೇಯಾಂಕದಲ್ಲಿ 118ನೇ ಸ್ಥಾನಕ್ಕೇರಿದೆ. ಇತ್ತೀಚಿನ ಎರಿಕ್ಸನ್ ಮೊಬಿಲಿಟಿ ವರದಿಯ ಪ್ರಕಾರ, ಭಾರತದಲ್ಲಿ 5ಜಿ ಚಂದಾದಾರಿಕೆಗಳು 2030ರ ಅಂತ್ಯದ ವೇಳೆಗೆ ಸುಮಾರು 970 ಮಿಲಿಯನ್ ತಲುಪುವ ನಿರೀಕ್ಷೆಯಿದೆ. ಇದು ಮೊಬೈಲ್ ಚಂದಾದಾರಿಕೆಗಳ ಶೇಕಡಾ 74ರಷ್ಟಿದೆ. ಭಾರತದಲ್ಲಿ ಪ್ರತೀ ಸ್ಮಾರ್ಟ್​ಫೋನ್‌ನ ಸರಾಸರಿ ಮಾಸಿಕ ಡೇಟಾ ಬಳಕೆ 32 ಜಿಬಿಗೆ ತಲುಪಿದೆ. ಇದು 2030ರ ವೇಳೆಗೆ 66 ಜಿಬಿಗೆ ಬೆಳೆಯುವ ನಿರೀಕ್ಷೆಯಿದೆ.

ಇದನ್ನೂ ಓದಿ : ಹಿಂಗಾರು ಹಂಗಾಮಿನಲ್ಲಿ ಎಂಎಸ್​ಪಿಯಡಿ 2.75 ಲಕ್ಷ ರೈತರಿಗೆ 4,820 ಕೋಟಿ ರೂ. ಪಾವತಿ: ಕೇಂದ್ರ ಸರ್ಕಾರ - MSP SCHEME

ABOUT THE AUTHOR

...view details