ನವದೆಹಲಿ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯಲ್ಲಿ ಇಳಿಕೆಯಾಗಿರುವುದರಿಂದ, ಕಳೆದ ವರ್ಷಕ್ಕೆ ಹೋಲಿಸಿದರೆ ಈ ಹಣಕಾಸು ವರ್ಷದಲ್ಲಿ ಕಚ್ಚಾ ತೈಲ ಆಮದಿನಲ್ಲಿ ಸರಕಾರಕ್ಕೆ 60,000 ಕೋಟಿ ರೂ.ಗಳಷ್ಟು ಉಳಿತಾಯವಾಗಲಿದೆ ಎಂದು ಅಂದಾಜಿಸಲಾಗಿದೆ. ಅಂದಾಜಿನ ಪ್ರಕಾರ, ಕಚ್ಚಾ ತೈಲ ಬೆಲೆಯು ಪ್ರತಿ ಬ್ಯಾರೆಲ್ಗೆ 1 ಡಾಲರ್ ಕುಸಿತವಾದಲ್ಲಿ ಭಾರತದ ವಾರ್ಷಿಕ ಆಮದು ವೆಚ್ಚ ಸುಮಾರು 13,000 ಕೋಟಿ ರೂ.ಗಳಷ್ಟು ಕಡಿಮೆಯಾಗುತ್ತದೆ.
ಈ ಹಣಕಾಸು ವರ್ಷದಲ್ಲಿ ಸರಾಸರಿ ಕಚ್ಚಾ ತೈಲ ಬೆಲೆ ಬ್ಯಾರೆಲ್ಗೆ 84 ಡಾಲರ್ ಆಗಿರಲಿದೆ ಎಂದು 2024 ರ ಆರ್ಥಿಕ ಸಮೀಕ್ಷೆಯಲ್ಲಿ ಅಂದಾಜಿಸಲಾಗಿದೆ. ಆದರೆ ಪ್ರಸ್ತುತ ಕಚ್ಚಾ ಬೆಲೆಗಳು ಇದಕ್ಕಿಂತಲೂ ಕೆಳಗಿಳಿದಿದ್ದು, ಈಗ ಬ್ಯಾರೆಲ್ಗೆ 70 ರಿಂದ 75 ಡಾಲರ್ ವ್ಯಾಪ್ತಿಯಲ್ಲಿ ಹೊಯ್ದಾಡುತ್ತಿವೆ. ಇದೇ ವ್ಯಾಪ್ತಿಯಲ್ಲಿ ಬೆಲೆಗಳು ಸ್ಥಿರಗೊಂಡರೆ, ಈ ಹಣಕಾಸು ವರ್ಷದ ಉಳಿದ ಅವಧಿಯಲ್ಲಿ ಭಾರತವು ಕಚ್ಚಾ ತೈಲ ಆಮದಿನಲ್ಲಿ ಗಣನೀಯ ಉಳಿತಾಯ ಮಾಡಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
"ಭಾರತ ಸರ್ಕಾರವು ಪ್ರತಿ ಬ್ಯಾರೆಲ್ ಕಚ್ಚಾ ತೈಲಕ್ಕೆ 85 ಯುಎಸ್ ಡಾಲರ್ ಬೆಲೆಯನ್ನು ನಿಗದಿಪಡಿಸಿದೆ. ಆದರೆ ಪ್ರಸ್ತುತ ಬೆಲೆಗಳು 70 ರಿಂದ 72 ಯುಎಸ್ ಡಾಲರ್ಗೆ ಹತ್ತಿರದಲ್ಲಿವೆ. ಇದು ಗಮನಾರ್ಹ ಲಾಭವನ್ನು ಸೂಚಿಸುತ್ತದೆ. 2025 ರಲ್ಲಿಯೂ ಕಚ್ಚಾ ತೈಲ ಬೆಲೆಗಳು 80 ಡಾಲರ್ಗಿಂತ ಕಡಿಮೆ ಮಟ್ಟದಲ್ಲಿಯೇ ಇರಲಿವೆ ಎಂದು ನಿರೀಕ್ಷಿಸಲಾಗಿದೆ. ಇದು ಮಾರ್ಚ್ 2025 ರವರೆಗೆ ಹೀಗೆಯೇ ಮುಂದುವರಿದರೆ ಭಾರತೀಯ ಆರ್ಥಿಕತೆಗೆ ಬಹುದೊಡ್ಡ ಲಾಭವಾಗಲಿದೆ" ಎಂದು ಕೆಡಿಯಾ ಅಡ್ವೈಸರಿ ನಿರ್ದೇಶಕ ಅಜಯ್ ಕೇಡಿಯಾ ಎಎನ್ಐ ಜೊತೆಗಿನ ವಿಶೇಷ ಸಂದರ್ಶನದಲ್ಲಿ ಹೇಳಿದರು.