ನವದೆಹಲಿ : ಏಪ್ರಿಲ್ 1 ರಿಂದ ದೇಶದ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ ಎಲ್ಲಾ ವ್ಯಾಪಾರಿಗಳು / ಸಗಟು ವ್ಯಾಪಾರಿಗಳು, ಚಿಲ್ಲರೆ ವ್ಯಾಪಾರಿಗಳು, ದೊಡ್ಡ ಸರಪಳಿ ಚಿಲ್ಲರೆ ವ್ಯಾಪಾರಿಗಳು ಮತ್ತು ಸಂಸ್ಕರಣಾಕಾರರು ಏಪ್ರಿಲ್ 1 ರಿಂದ ಜಾರಿಗೆ ಬರುವಂತೆ, ತಮ್ಮ ಬಳಿ ಇರುವ ಗೋಧಿಯ ದಾಸ್ತಾನು ಪ್ರಮಾಣವನ್ನುಸರ್ಕಾರಿ ಪೋರ್ಟಲ್ನಲ್ಲಿ ಘೋಷಿಸಬೇಕು ಎಂದು ಕೇಂದ್ರ ಸರ್ಕಾರ ಶುಕ್ರವಾರ ಆದೇಶಿಸಿದೆ. ಪ್ರಸ್ತುತ ಗೋಧಿ ದಾಸ್ತಾನು ಅವಧಿಯ ಮಿತಿ ಮಾರ್ಚ್ 31 ಕ್ಕೆ ಕೊನೆಗೊಳ್ಳುತ್ತಿದೆ.
ಒಟ್ಟಾರೆ ಆಹಾರ ಪರಿಸ್ಥಿತಿಯನ್ನು ನಿರ್ವಹಿಸಲು ಮತ್ತು ಅಕ್ರಮ ದಾಸ್ತಾನುಗಳನ್ನು ತಡೆಗಟ್ಟುವ ಪ್ರಯತ್ನವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಎಲ್ಲಾ ಬಗೆಯ ಘಟಕಗಳಲ್ಲಿನ ಅಕ್ಕಿ ದಾಸ್ತಾನಿನ ಘೋಷಣೆ ನಿಯಮ ಈಗಾಗಲೇ ಜಾರಿಯಲ್ಲಿದೆ.
ಈವರೆಗೆ ಸರ್ಕಾರದ ಪೋರ್ಟಲ್ https://evegoils.nic.in ನಲ್ಲಿ ನೋಂದಾಯಿಸಿಕೊಳ್ಳದ ಘಟಕಗಳು ಇದರಲ್ಲಿ ತಮ್ಮನ್ನು ನೋಂದಾಯಿಸಿಕೊಳ್ಳಬೇಕು ಮತ್ತು ಪ್ರತಿ ಶುಕ್ರವಾರ ಗೋಧಿ ಮತ್ತು ಅಕ್ಕಿ ದಾಸ್ತಾನು ಬಹಿರಂಗಪಡಿಸಲು ಪ್ರಾರಂಭಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಧಾನ್ಯದ ಬೆಲೆಗಳು ಮತ್ತು ಲಭ್ಯತೆಯನ್ನು ನಿರ್ವಹಿಸಲು ಕಳೆದ ವರ್ಷ ಆಹಾರ ಇಲಾಖೆಯು ಆರಂಭಿಸಿದ ನಿರಂತರ ಪ್ರಯತ್ನಗಳ ಮುಂದುವರಿಕೆಯ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ.
ಡಿಸೆಂಬರ್ 2023 ರಲ್ಲಿ ಕೇಂದ್ರವು ಗೋಧಿ ದಾಸ್ತಾನು ಮಿತಿಯನ್ನು ಪರಿಷ್ಕರಿಸಿತ್ತು. ಚಿಲ್ಲರೆ ವ್ಯಾಪಾರಿಗಳಿಗೆ, ಪ್ರತಿ ಚಿಲ್ಲರೆ ಮಳಿಗೆಯು ದಾಸ್ತಾನು ಮಾಡಬಹುದಾದ ಗೋಧಿಯ ಪರಿಷ್ಕೃತ ಮಿತಿಯನ್ನು 10 ಮೆಟ್ರಿಕ್ ಟನ್ ನಿಂದ 5 ಮೆಟ್ರಿಕ್ ಟನ್ ಗೆ ಇಳಿಸಲಾಗಿತ್ತು. ದೊಡ್ಡ ಸರಪಳಿ ಚಿಲ್ಲರೆ ವ್ಯಾಪಾರಿಗಳಿಗೆ ತಮ್ಮ ಪ್ರತಿ ಮಳಿಗೆಗೆ 5 ಮೆಟ್ರಿಕ್ ಟನ್ ಮತ್ತು ತಮ್ಮ ಎಲ್ಲಾ ಡಿಪೋಗಳಲ್ಲಿ 1,000 ಮೆಟ್ರಿಕ್ ಟನ್ ಗೋಧಿಯನ್ನು ಸಂಗ್ರಹಿಸುವ ಅವಕಾಶ ನೀಡಲಾಯಿತು. ಈ ಹಿಂದೆ ಇದು ಕ್ರಮವಾಗಿ 10 ಮೆಟ್ರಿಕ್ ಟನ್ ಮತ್ತು 2000 ಮೆಟ್ರಿಕ್ ಟನ್ ಆಗಿತ್ತು.
ಕಳೆದ ತಿಂಗಳು ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯವು ಗೋಧಿಯ ಲಭ್ಯತೆ ಮತ್ತು ಬೆಲೆ ನಿಯಂತ್ರಿಸಲು ದಾಸ್ತಾನು ಮಿತಿಯನ್ನು ಮತ್ತಷ್ಟು ಕಡಿಮೆ ಮಾಡಿತ್ತು. ಈ ಮಿತಿಯನ್ನು ವ್ಯಾಪಾರಿಗಳು/ ಸಗಟು ವ್ಯಾಪಾರಿಗಳಿಗೆ ಮಿತಿಯನ್ನು 1000 ಮೆಟ್ರಿಕ್ ಟನ್ (ಎಂಟಿ) ನಿಂದ 500 ಮೆಟ್ರಿಕ್ ಟನ್ ಗೆ ಪರಿಷ್ಕರಿಸಲಾಗಿದೆ. ಪ್ರೊಸೆಸರ್ಗಳಿಗೆ ಮಿತಿಯನ್ನು ಪ್ರತಿ ಮಳಿಗೆಗೆ 5 ಮೆಟ್ರಿಕ್ ಟನ್ ಮತ್ತು ಅವರ ಎಲ್ಲಾ ಡಿಪೋಗಳಲ್ಲಿ 1000 ಮೆಟ್ರಿಕ್ ಟನ್, ಪ್ರತಿ ಮಳಿಗೆಗೆ 5 ಮೆಟ್ರಿಕ್ ಟನ್ ಮತ್ತು ಎಲ್ಲಾ ಡಿಪೋಗಳಲ್ಲಿ 500 ಮೆಟ್ರಿಕ್ ಟನ್ಗೆ ಬದಲಾಯಿಸಲಾಗಿದೆ.
ಇದನ್ನೂ ಓದಿ :2025ರಲ್ಲಿ ಭಾರತದ ಜಿಡಿಪಿ ಬೆಳವಣಿಗೆ ಅಂದಾಜು ಶೇ 6.8ಕ್ಕೆ ಹೆಚ್ಚಿಸಿದ ಮೋರ್ಗನ್ ಸ್ಟಾನ್ಲಿ - India GDP growth