ಬ್ಯಾಂಕ್ ಮ್ಯಾನೇಜರ್ ಹುದ್ದೆ ತೊರೆದು ಸಗಣಿಯ ಬೆರಣಿ ಮಾರಾಟ ಅಹಮದ್‌ನಗರ (ಮಹಾರಾಷ್ಟ್ರ):ಜಿಲ್ಲೆಯ ಸಂಗಮನೇರ್ ತಾಲೂಕಿನ ಕೊಳೆವಾಡಿಯ ಸುಶಿಕ್ಷಿತ ವ್ಯಕ್ತಿ ಅಮೋಲ್ ಖುಲೆ (34) ಕುಟುಂಬದೊಂದಿಗೆ ಕೃಷಿ ಮತ್ತು ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಉನ್ನತ ಶಿಕ್ಷಣ ಪಡೆದಿರುವ ಅಮೋಲ್ ಖಾಸಗಿ ಕ್ರೆಡಿಟ್ ಬ್ಯಾಂಕ್‌ನಲ್ಲಿ ಜನರಲ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ಅಮೋಲ್ ಬ್ಯಾಂಕಿನಿಂದ ವರ್ಷಕ್ಕೆ 10 ಲಕ್ಷ ರೂಪಾಯಿ ವೇತನದ ಪ್ಯಾಕೇಜ್ ಪಡೆಯುತ್ತಿದ್ದರು.
ಆದರೆ, ಉದ್ಯೋಗದಲ್ಲಿ ಆಸಕ್ತಿ ಇಲ್ಲದ ಕಾರಣ ಅಮೋಲ್ ಬ್ಯಾಂಕ್ ಕೆಲಸ ಬಿಟ್ಟು ಮನೆಯಲ್ಲಿ ಪೂರ್ವಿಕರ ಕಾಲದಿಂದ ಬಂದಿರುವ ಕೃಷಿ ಮಾಡಲು ನಿರ್ಧರಿಸಿದ್ದಾರೆ. ಅಮೋಲ್ ಅವರು ಕೃಷಿ ಜೊತೆಗೆ ಐದು ಹಸುಗಳನ್ನು ಸಾಕಲು ಪ್ರಾರಂಭಿಸಿದರು. ಹಸುವಿನ ಹಾಲಿನ ಬೆಲೆ ಕಡಿಮೆ ಇದ್ದುದರಿಂದ ಗೋವಿನ ಸಗಣಿಯಿಂದಲೇ ಹೆಚ್ಚು ಆದಾಯದ ಮೂಲವಾಗಿ ಮಾಡಿಕೊಂಡಿದ್ದಾರೆ. ಪೂಜೆಯ ಹವನದ ಸಮಯದಲ್ಲಿ ಉಪಯೋಗಿಸಲು ಹಸುವಿನ ಸಗಣಿಯಿಂದ ಬೆರಣಿ ತಯಾರಿಸಿ ಪುಣೆ, ನಾಸಿಕ್, ಮುಂಬೈಗೆ ಒಯ್ದು ಮಾರಾಟ ಮಾಡಲು ಆರಂಭಿಸಿದರು.
ಬೆರಣಿಗೆ ಬೇಡಿಕೆ ಹೆಚ್ಚಾದ ಕಾರಣಕ್ಕೆ ಅಮೋಲ್ ಇನ್ನೂ 70 ಹಸುಗಳನ್ನು ಖರೀದಿಸಿದರು. ಕಳೆದ ನಾಲ್ಕು ವರ್ಷಗಳಿಂದ ಅಮೋಲ್ ಅವರೊಂದಿಗೆ ಇಡೀ ಕುಟುಂಬವು ಬೆರಣಿಯನ್ನು ತಯಾರಿಸುತ್ತಿದೆ. ಕುಟುಂಬದ ಸದಸ್ಯರು ಪ್ರತಿದಿನ 1200 ಬೆರಣಿಗಳನ್ನು ತಯಾರಿಸುವ ಕೆಲಸವನ್ನು ಮಾಡುತ್ತಾರೆ. ಅದರ ನಂತರ ಅಮೋಲ್ ಅವುಗಳನ್ನು ಪುಣೆ, ಮುಂಬೈಗೆ ತೆಗೆದುಕೊಂಡು ಹೋಗಿ ಮಾರಾಟ ಮಾಡಿ ಬರುತ್ತಾರೆ. ಒಂದು ಬೆರಣಿ 10 ರಿಂದ 12 ರೂಪಾಯಿಗೆ ಮಾರಾಟವಾಗುತ್ತಿದೆ ಎಂದು ಅಮೋಲ್ ಖುಲೆ ತಿಳಿಸಿದರು.
ನಾಲ್ಕು ವರ್ಷಗಳಿಂದ ಬೆರಣಿ ಮಾರಾಟ:ಅಮೋಲ್ ಅವರ ಮನೆಯಲ್ಲಿ ಸುಮಾರು 70 ಹಸುಗಳಿವೆ. ಮತ್ತು ಅವರು ಪ್ರತಿದಿನ 400 ಲೀಟರ್ ಹಾಲು ಉತ್ಪಾದಿಸುತ್ತಿದ್ದಾರೆ. ಹಾಲಿಗೂ ಉತ್ತಮ ಹಣ ಸಿಗುತ್ತಿದೆ. ಜೊತೆಗೆ ಹಸುವಿನ ಸಗಣಿಯಿಂದ ಬೆರಣಿ ತಯಾರಿಸುತ್ತಿದ್ದಾರೆ. ಈ ಕಾರ್ಯದಲ್ಲಿ ಇಡೀ ಕುಟುಂಬ ಸದಸ್ಯರು ತೊಡಗಿಸಿಕೊಂಡಿದ್ದಾರೆ. ಹಿಂದೂ ಸಂಪ್ರದಾಯದಲ್ಲಿ ಹಸುಗಳ ಉತ್ಪನ್ನಗಳನ್ನು ಅನೇಕ ಆಚರಣೆಗಳಲ್ಲಿ ಬಳಸಲಾಗುತ್ತದೆ. ಆದ್ದರಿಂದ ಹಸುಗಳಿಗೆ ಯಾವಾಗಲೂ ಹೆಚ್ಚಿನ ಬೇಡಿಕೆ ಇರುತ್ತದೆ. ಹಸುವಿನ ಸಗಣಿಯಿಂದ ಬೆರಣಿ ತಯಾರಿಸಿ ಅಮೋಲ್ ಅವರೇ ಮಾರಾಟ ಮಾಡುತ್ತಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಈ ವ್ಯಾಪಾರ ಮಾಡುತ್ತಿದ್ದಾರೆ.
30 ರಿಂದ 35 ಲಕ್ಷ ರೂ. ಲಾಭ:ಹಸುವಿನ ಸಗಣಿಯಿಂದ ಯಶಸ್ಸಿನ ದಾರಿ ಕಂಡುಕೊಂಡು ಅಮೋಲ್ ಅವರು, ಬೆರಣಿ ತಯಾರಿಸುವ ಕಾರ್ಯವನ್ನು ಆರಂಭಿಸಿದರು. ಬೆರಣಿ ವ್ಯಾಪಾರ ಬಹಳ ಚೆನ್ನಾಗಿ ನಡೆಯುತ್ತಿದೆ. ಯುವಕರು ಕೇವಲ ಉದ್ಯೋಗಕ್ಕಾಗಿ ಓಡುವ ಬದಲು ಸ್ವಯಂ ಉದ್ಯೋಗ ಕೈಗೊಳ್ಳುವುದು ಅಗತ್ಯವಿದೆ. ಇದು ಯಶಸ್ಸಿನ ದಾರಿ ಆಗುತ್ತದೆ ಎಂದು ಅಮೋಲ್ ಖುಲೆ ಸಲಹೆ ನೀಡಿದರು. ಮೊದಲು ಸಗಣಿ ಸಂಗ್ರಹಿಸಿ ಅದಕ್ಕೆ ನೀರು ಹಾಕಿ ಸಗಣಿಯನ್ನು ಪೂರ್ತಿಯಾಗಿ ಬೆರೆಸಿದ ನಂತರ ಬೆರಣಿಯನ್ನು ತಯಾರಿಸುತ್ತಾರೆ.
ಪ್ರತಿ ವರ್ಷ ಚಳಿಗಾಲದಲ್ಲಿ ಹೆಚ್ಚು ಬೆರಣಿ ತಯಾರಿಸಲಾಗುತ್ತದೆ. ಇದರಿಂದ ಬೆರಣಿ ಕೂಡ ಉತ್ತಮ ಆಗಿರುತ್ತವೆ. ನಾವು ನಾಲ್ಕು ತಿಂಗಳಲ್ಲಿ ಸುಮಾರು ಎರಡು ಲಕ್ಷ ಬೆರಣಿಗಳನ್ನು ಸಿದ್ಧಪಡಿಸುತ್ತೇವೆ. ಮನೆಯಲ್ಲಿ 70 ಹಸುಗಳಿಂದ ದಿನಕ್ಕೆ 400 ಲೀಟರ್ ಹಾಲು ಲಭಿಸುತ್ತದೆ. ಮತ್ತು ಈ ಹಸುಗಳ ಮೂತ್ರವನ್ನು ಪ್ರತಿ ಲೀಟರ್‌ಗೆ ರೂ.50 ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಇದೇ ವೇಳೆ ಹಸುವಿನ ಬೆರಣಿ ತಯಾರಿಸಿ ಮಾರಾಟ ಮಾಡಲಾಗುತ್ತಿದೆ. ಎಲ್ಲಾ ಖರ್ಚು ಕಳೆದು ವರ್ಷಕ್ಕೆ 30 ರಿಂದ 35 ಲಕ್ಷ ರೂಪಾಯಿ ನಿವ್ವಳ ಲಾಭ ಲಭಿಸುತ್ತದೆ ಎನ್ನುತ್ತಾರೆ ಅಮೋಲ್ ಖುಲೆ.
ಅಮೋಲ್ ಪತ್ನಿ ಹೇಳೋದು ಹೀಗೆ:ಅಮೋಲ್ ಮೊದಲು ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದರು. ಆದರೆ, ಅವರು ಬೆಳಗ್ಗೆ ಕೆಲಸಕ್ಕೆ ಹೋಗಿ ರಾತ್ರಿ ತಡವಾಗಿ ಮನೆಗೆ ಬರುತ್ತಿದ್ದರು. ಇದರಿಂದಾಗಿ ಮನೆಯಲ್ಲಿ ಸಮಯ ಕಳೆಯಲು ಸಾಧ್ಯವಾಗಲಿಲ್ಲ. ನಾನು ಮತ್ತು ಅಮೋಲ್ ಆಗ ಮನೆಯ ಆವರಣದಲ್ಲೇ ಕೃಷಿ ಮಾಡಲು ನಿರ್ಧರಿಸಿದ್ದೆವು. ಸಿಕ್ಕಿದ್ದರಲ್ಲಿ ತೃಪ್ತರಾಗಿ ಇರುತ್ತಿದ್ದೆವು. ಇದಾದ ನಂತರ ಅಮೋಲ್ ಬ್ಯಾಂಕಿನ ಕೆಲಸ ಬಿಟ್ಟು ವ್ಯವಸಾಯ ಆರಂಭಿಸಿದ್ದರಿಂದ ಇಂದು ಉತ್ತಮ ವ್ಯಾಪಾರವಾಗುತ್ತಿದೆ. ನಾವೆಲ್ಲರೂ ಪ್ರತಿ ವರ್ಷ ಒಳ್ಳೆಯ ಹಣ ಸಂಪಾದಿಸುತ್ತಿದ್ದೇವೆ ಎಂದು ಅಮೋಲ್ ಪತ್ನಿ ಮಿಲನ್ ಸಂತಸ ವ್ಯಕ್ತಪಡಿಸಿದ್ದಾರೆ.
ನಾನು ಉನ್ನತ ಶಿಕ್ಷಣ ಪಡೆದಿದ್ದೇನೆ ಮತ್ತು ನಾನು ರೈತನನ್ನು ಮದುವೆಯಾಗುವುದಿಲ್ಲ ಎಂದು ಭಾವಿಸಿದೆ. ಆದರೆ ಈಗ ರೈತ ಪತಿಯೇ ಉತ್ತಮ ಎಂದು ಅನಿಸುತ್ತಿದೆ. ಈಗ ರೈತರು ತಮ್ಮ ಬಾಳ ಸಂಗಾತಿ ಆಗುವುದು ಬೇಡ ಎಂದು ಹೇಳುವ ಹುಡುಗಿಯರಿಗೂ ಮಿಲನ್ ಖುಲೆ ಸಲಹೆ ನೀಡಿದ್ದಾರೆ.
ಇದನ್ನೂ ಓದಿ:ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರಗಳಲ್ಲಿ ಯಾವುದೇ ಬದಲಾವಣೆಯಿಲ್ಲ: ಕೇಂದ್ರ ಸರ್ಕಾರ - Interest rates