ನವದೆಹಲಿ: 2023-24ರಲ್ಲಿ ಸುಮಾರು ಆರು ಕೋಟಿ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಯಾಗಿದ್ದು, ಅದರಲ್ಲಿ ಶೇಕಡಾ 70 ರಷ್ಟು ಹೊಸ ಸರಳೀಕೃತ ತೆರಿಗೆ ವ್ಯವಸ್ಥೆಯ ಅಡಿಯಲ್ಲಿ ಸಲ್ಲಿಸಲಾಗಿದೆ ಎಂದು ಕಂದಾಯ ಕಾರ್ಯದರ್ಶಿ ಸಂಜಯ್ ಮಲ್ಹೋತ್ರಾ ಹೇಳಿದ್ದಾರೆ. ಹೊಸ ಸರಳೀಕೃತ ತೆರಿಗೆ ವ್ಯವಸ್ಥೆಯು ಕಡಿಮೆ ತೆರಿಗೆ ದರ ಮತ್ತು ಕಡಿಮೆ ಕಡಿತ (ಡಿಸ್ಕೌಂಟ್) ಗಳನ್ನು ಹೊಂದಿದೆ.
ಪಿಎಚ್ಡಿ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿಯ ಬಜೆಟ್ ನಂತರದ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಮಲ್ಹೋತ್ರಾ, ಜನರು ಸರಳೀಕೃತ ತೆರಿಗೆ ವ್ಯವಸ್ಥೆಯನ್ನು ಒಪ್ಪಿಕೊಳ್ಳುವ ಬಗ್ಗೆ ಆರಂಭದಲ್ಲಿ ಕೆಲವರು ಆತಂಕ ವ್ಯಕ್ತಪಡಿಸಿದ್ದರು. ಆದರೆ ಬಹುತೇಕ ತೆರಿಗೆದಾರರು ಹೊಸ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ಆದ್ಯತೆ ನೀಡುತ್ತಿರುವುದು ಸಕಾರಾತ್ಮಕವಾಗಿದೆ ಮತ್ತು ಸರಳೀಕೃತ ವ್ಯವಸ್ಥೆಯತ್ತ ಯಶಸ್ವಿ ಪರಿವರ್ತನೆಯನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಹೇಳಿದರು.
ತೆರಿಗೆ ಪ್ರಕ್ರಿಯೆಯನ್ನು ಸರಳಗೊಳಿಸಲು ಪರಿಚಯಿಸಲಾದ ಹೊಸ ತೆರಿಗೆ ವ್ಯವಸ್ಥೆಯು ಹಿಂದಿನ ವ್ಯವಸ್ಥೆಗೆ ಹೋಲಿಸಿದರೆ ಕಡಿಮೆ ತೆರಿಗೆ ದರಗಳನ್ನು ಹೊಂದಿದೆ. ಆದರೆ ಕಡಿಮೆ ವಿನಾಯಿತಿಗಳು ಮತ್ತು ಕಡಿತಗಳನ್ನು ಒಳಗೊಂಡಿದೆ. ಹೊಸ ತೆರಿಗೆ ವ್ಯವಸ್ಥೆಯು ಅನುಸರಣೆ ಹೊರೆಗಳನ್ನು ಕಡಿಮೆ ಮಾಡುವ ಮತ್ತು ವ್ಯಕ್ತಿಗಳಿಗೆ ವ್ಯವಹರಿಸಲು ತೆರಿಗೆ ವ್ಯವಸ್ಥೆಯನ್ನು ಸರಳಗೊಳಿಸುವ ಗುರಿಯನ್ನು ಹೊಂದಿದೆ ಎಂದು ಮಲ್ಹೋತ್ರಾ ಒತ್ತಿ ಹೇಳಿದರು. 2024-25ರ ಬಜೆಟ್ ನಲ್ಲಿ ಘೋಷಿಸಲಾದ ಸಮಗ್ರ ಆದಾಯ ತೆರಿಗೆ ಪರಾಮರ್ಶೆಯು ತೆರಿಗೆ ಕಾನೂನನ್ನು ಸರಳಗೊಳಿಸುವ ಗುರಿಯನ್ನು ಹೊಂದಿದೆ ಎಂದು ಅವರು ತಿಳಿಸಿದರು.