ನವದೆಹಲಿ: ಭಾರತೀಯ ಸ್ಟಾರ್ಟ್ಅಪ್ಗಳು ಸಾಮಾನ್ಯ ವೇಗದಲ್ಲಿ ನಿಧಿ ಸಂಗ್ರಹಿಸುವುದನ್ನು ಮುಂದುವರಿಸಿದ್ದು, ಈ ವಾರ 21 ಸ್ಟಾರ್ಟ್ಅಪ್ಗಳು ದೇಶದಲ್ಲಿ ಸುಮಾರು 105 ಮಿಲಿಯನ್ ಡಾಲರ್ ಫಂಡಿಂಗ್ ಪಡೆದುಕೊಂಡಿವೆ. ಇದರಲ್ಲಿ ಆರು ಬೆಳವಣಿಗೆಯ ಹಂತದ ಒಪ್ಪಂದಗಳು ಮತ್ತು 12 ಆರಂಭಿಕ ಹಂತದ ಒಪ್ಪಂದಗಳು ಸೇರಿವೆ ಎಂದು ಎನ್ ಟ್ರಾಕರ್ ಶನಿವಾರ ವರದಿ ಮಾಡಿದೆ.
ಒಂದು ಬೆಳವಣಿಗೆಯ ಹಂತದ ಸ್ಟಾರ್ಟ್ಅಪ್ ಮತ್ತು ಎರಡು ಆರಂಭಿಕ ಹಂತದ ಸ್ಟಾರ್ಟ್ಅಪ್ಗಳು ತಾವು ಸಂಗ್ರಹಿಸಿದ ಫಂಡಿಂಗ್ ಮೊತ್ತವನ್ನು ಬಹಿರಂಗಪಡಿಸಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಸುಮಾರು 30 ಆರಂಭಿಕ ಮತ್ತು ಬೆಳವಣಿಗೆಯ ಹಂತದ ಸ್ಟಾರ್ಟ್ಅಪ್ಗಳು ಕಳೆದ ವಾರ ಒಟ್ಟಾರೆಯಾಗಿ ಸುಮಾರು 172.71 ಮಿಲಿಯನ್ ಡಾಲರ್ ಫಂಡಿಂಗ್ ಸಂಗ್ರಹಿಸಿವೆ.
ಬೆಳವಣಿಗೆಯ ಹಂತದ ಒಪ್ಪಂದಗಳಲ್ಲಿ, ಆರು ಸ್ಟಾರ್ಟ್ಅಪ್ಗಳು ಈ ವಾರ 54.5 ಮಿಲಿಯನ್ ಡಾಲರ್ ಫಂಡಿಂಗ್ ಸಂಗ್ರಹಿಸಿವೆ. ಅನುಸರಣೆ ಆಟೋಮೇಷನ್ ಪ್ಲಾಟ್ ಫಾರ್ಮ್ ಸ್ಟಾರ್ಟ್ಅಪ್ ಆಗಿರುವ ಸ್ಪ್ರಿಂಟೊ (Sprinto) ಅತಿ ಹೆಚ್ಚು 20 ಮಿಲಿಯನ್ ಡಾಲರ್ ಫಂಡಿಂಗ್ ಪಡೆದುಕೊಂಡಿದೆ.
ಬಿಸಿನೆಸ್-ಟು-ಬಿಸಿನೆಸ್ (ಬಿ 2 ಬಿ) ತ್ಯಾಜ್ಯ ನಿರ್ವಹಣೆ ಮತ್ತು ಮರುಬಳಕೆ ಮಾರುಕಟ್ಟೆ ಪ್ಲಾಟ್ಫಾರ್ಮ್ ರೆಸಿಕಲ್ (Recykal), ಹೌಸಿಂಗ್ ಫೈನಾನ್ಸ್ ಸಂಸ್ಥೆ ಎವಿಐಒಎಂ ಎಚ್ಎಫ್ಸಿ, ಡಿಜಿಟಲ್ ಸಾಲ ನೀಡುವ ಕಂಪನಿ ಆಕ್ಸಿಯೊ ಮತ್ತು ವೈದ್ಯಕೀಯ ಡಯಾಗ್ನೋಸ್ಟಿಕ್ಸ್ ಪ್ಲಾಟ್ಫಾರ್ಮ್ 5 ಸಿ ನೆಟ್ವರ್ಕ್ ಕಂಪನಿಗಳು ಕ್ರಮವಾಗಿ 13 ಮಿಲಿಯನ್ ಡಾಲರ್, 10 ಮಿಲಿಯನ್ ಡಾಲರ್, 6 ಮಿಲಿಯನ್ ಡಾಲರ್ ಮತ್ತು 3 ಮಿಲಿಯನ್ ಡಾಲರ್ ಫಂಡಿಂಗ್ ಪಡೆದುಕೊಂಡಿವೆ. ಇದಲ್ಲದೆ, 12 ಆರಂಭಿಕ ಹಂತದ ಸ್ಟಾರ್ಟ್ಅಪ್ಗಳು ಈ ವಾರದಲ್ಲಿ ಒಟ್ಟಾಗಿ 50 ಮಿಲಿಯನ್ ಡಾಲರ್ ಹಣ ಪಡೆದುಕೊಂಡಿವೆ.
ಕೃತಕ ಬುದ್ಧಿಮತ್ತೆ (ಎಐ) ಕ್ಲೌಡ್ ಮತ್ತು ಪ್ಲಾಟ್ಫಾರ್ಮ್-ಎ-ಸರ್ವೀಸ್ ಸ್ಟಾರ್ಟ್ಅಪ್ ನೈಸಾ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೆ, ಎಐ ಚಾಲಿತ ಆದಾಯ ಸಕ್ರಿಯಗೊಳಿಸುವ ಪ್ಲಾಟ್ಫಾರ್ಮ್ ಜಿಟಿಎಂ ಬಡ್ಡಿ (GTM Buddy), ಪ್ಲಾನಿಸ್ ಟೆಕ್ನಾಲಜೀಸ್ ನಂತರದ ಸ್ಥಾನಗಳಲ್ಲಿವೆ.
ಈ ಪಟ್ಟಿಯಲ್ಲಿ ಮಕ್ಕಳ ನಡವಳಿಕೆ ಮತ್ತು ಅಭಿವೃದ್ಧಿ ಆರೋಗ್ಯ ಸಂಸ್ಥೆ ಬಟರ್ ಫ್ಲೈ ಲರ್ನಿಂಗ್ಸ್, ಎಲೆಕ್ಟ್ರಿಕ್ ಮೊಬಿಲಿಟಿ ಪ್ಲಾಟ್ಫಾರ್ಮ್ ಆಟೋನೆಕ್ಸ್ಟ್ ಆಟೋಮೇಷನ್, ಫುಲ್ ಸ್ಟ್ಯಾಕ್ ಐವೇರ್ ಪ್ಲಾಟ್ಫಾರ್ಮ್ ಐ ಮೈ ಐ, ಎಲ್ಡರ್ ಕೇರ್ ಸ್ಟಾರ್ಟ್ಅಪ್ ಏಜ್ ಕೇರ್ ಲ್ಯಾಬ್ಸ್ ಮತ್ತು ಹೆಲ್ತ್ ಕೇರ್ ಸ್ಟಾರ್ಟ್ಅಪ್ ಪ್ಲಾಟಿನಂ ಆರ್ಎಕ್ಸ್ ಸೇರಿವೆ. ನಗರವಾರು ನೋಡುವುದಾದರೆ ಬೆಂಗಳೂರು ಮೂಲದ ಸ್ಟಾರ್ಟ್ಅಪ್ಗಳು 8 ಫಂಡಿಂಗ್ ಡೀಲ್ಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ ಮುಂಬೈ, ದೆಹಲಿ-ಎನ್ಸಿಆರ್, ಚೆನ್ನೈ, ಕಾನ್ಪುರ ಮತ್ತು ಹೈದರಾಬಾದ್ ನಂತರದ ಸ್ಥಾನಗಳಲ್ಲಿವೆ.
ಇದನ್ನೂ ಓದಿ : ಫಿನ್ಟೆಕ್ ಫಂಡಿಂಗ್ ಶೇ 59ರಷ್ಟು ಹೆಚ್ಚಳ: ಜಾಗತಿಕವಾಗಿ 3ನೇ ಸ್ಥಾನದಲ್ಲಿ ಭಾರತ - Fintech