ಕರ್ನಾಟಕದಲ್ಲಿದ್ದಾರೆ 27 ಬಿಲಿಯನೇರ್‌ಗಳು: ಬೀಜಿಂಗ್ ಮೀರಿಸಿ ಆರ್ಥಿಕ ಹಬ್ ಆಗಿ ಬೆಳೆದ ಮುಂಬೈ - Hurun Global Rich List - HURUN GLOBAL RICH LIST
ದೇಶದ ಸಿರಿವಂತರ ಪಟ್ಟಿಯನ್ನು ಹ್ಯೂರನ್ (HURUN) ಸಂಸ್ಥೆ ಬಿಡುಗಡೆ ಮಾಡಿದ್ದು, ಕರ್ನಾಟಕದಲ್ಲಿ 27 ಉದ್ಯಮಿಗಳು 100 ಕೋಟಿ ರೂ.ಗೂ ಅಧಿಕ ಮೌಲ್ಯದ ಆಸ್ತಿ (ಬಿಲಿಯೇನರ್ಗಳು) ಹೊಂದಿದ್ದಾರೆ ಎಂದು ತಿಳಿಸಿದೆ.
ಕಲೆ, ಸಂಸ್ಕೃತಿ, ಸಾಹಿತ್ಯ ಕ್ಷೇತ್ರದಲ್ಲಿ ಕರ್ನಾಟಕ ಎಂದಿಗೂ ಶ್ರೀಮಂತ ನಾಡು. ಕರ್ನಾಟಕದಲ್ಲಿ ಆರ್ಥಿಕ ಸಿರಿವಂತರಿಗೂ ಕೊರತೆಯಿಲ್ಲ ಎಂಬುದು ಹ್ಯೂರನ್ (HURUN) ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ತಿಳಿದು ಬಂದಿದೆ. ವಿವಿಧ ಕ್ಷೇತ್ರಗಳ 27 ಉದ್ಯಮಿಗಳು 100 ಕೋಟಿ ರೂ.ಗೂ (ಬಿಲಿಯೇನರ್ಗಳು) ಅಧಿಕ ಆಸ್ತಿ ಹೊಂದಿದ್ದಾರೆ ಎಂದು ಸಮೀಕ್ಷೆ ಉಲ್ಲೇಖಿಸಿದೆ. ಇದರ ಜೊತೆಗೆ ದೇಶದಲ್ಲಿ ಮೂರನೇ ಅತ್ಯಧಿಕ ಬಿಲಿಯನೇರ್ಗಳನ್ನು ಹೊಂದಿರುವ ರಾಜ್ಯ ಕೂಡಾ ಕರ್ನಾಟಕ.
ಆರ್ಥಿಕ ಸಿರಿವಂತರ ಸಮೀಕ್ಷೆ ನಡೆಸುವ ಹ್ಯೂರನ್ ಸಂಸ್ಥೆಯು 2024ನೇ ಸಾಲಿನ ಕೋಟ್ಯಧಿಪತಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಭಾರತದ ನಗರವಾರು ಸಿರಿವಂತರಲ್ಲಿ ಬೆಂಗಳೂರು ದೇಶದಲ್ಲಿ ಮೂರನೇ ಸ್ಥಾನದಲ್ಲಿದೆ. ಇಲ್ಲಿ 27 ಮಂದಿ ಕುಬೇರರಿದ್ದಾರೆ ಎಂದು ಗುರುತಿಸಿದೆ. ಮುಂಬೈ 92 ಸಿರಿವಂತರನ್ನು ಹೊಂದುವ ಮೂಲಕ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ದೆಹಲಿಯಲ್ಲಿ 57 ಕೋಟಿಕುಳಗಳಿದ್ದು, ಎರಡನೇ ಸ್ಥಾನದಲ್ಲಿದೆ.
ಯಾವ ಕ್ಷೇತ್ರ, ಎಷ್ಟು ಸಿರಿವಂತರು?:ಬೆಂಗಳೂರಿನ 27 ಕುಬೇರರು ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದವರಾಗಿದ್ದಾರೆ. ಸಾಫ್ಟ್ವೇರ್ ಮತ್ತು ಸೇವಾ ಕ್ಷೇತ್ರದಲ್ಲಿ 7 ಜನರು ಬಿಲಿಯನೇರ್ಗಳಿರುವುದು ಅತ್ಯಧಿಕವಾಗಿದೆ. ಇದರ ಬಳಿಕ ರಿಯಲ್ ಎಸ್ಟೇಟ್ನಲ್ಲಿ 6, ಫಾರ್ಮಾಸ್ಯುಟಿಕಲ್ಸ್ನಲ್ಲಿ (ಔಷಧ ಕ್ಷೇತ್ರ) 4, ಹಣಕಾಸು 4, ಆಟೋಮೊಬೈಲ್, ನಿರ್ಮಾಣ ಮತ್ತು ಇಂಜಿನಿಯರಿಂಗ್, ಶಿಕ್ಷಣ ಮತ್ತು ತರಬೇತಿ, ಆರೋಗ್ಯ, ಕೈಗಾರಿಕೆ, ಹೂಡಿಕೆ ಕ್ಷೇತ್ರದಲ್ಲಿ ತಲಾ ಒಬ್ಬರು ಬಿಲಿಯನೇರ್ಗಳಿದ್ದಾರೆ.
ಜಾಗತಿಕವಾಗಿ 424 ರ್ಯಾಂಕ್ ಹೊಂದಿರುವ ಹಣಕಾಸು ಉದ್ಯಮಿ ನಿತಿನ್ ಕಾಮತ್ ಅವರು ರಾಜ್ಯದ ಅತೀ ಶ್ರೀಮಂತ ವ್ಯಕ್ತಿಯಾಗಿದ್ದರೆ, ರಿಯಲ್ ಎಸ್ಟೇಟ್ ಉದ್ಯಮಿ ಅರ್ಜುನ್ ಮೆಂಡ, ನಿಖಿಲ್ ಕಾಮತ್ ನಂತರದ ಸ್ಥಾನದಲ್ಲಿದ್ದಾರೆ. ಇನ್ಫೋಸಿಸ್ ಸ್ಥಾಪಕರಾದ ಎನ್.ಆರ್. ನಾರಾಯಣಮೂರ್ತಿ ಕುಟುಂಬ ಜಾಗತಿಕವಾಗಿ 854ನೇ ಸ್ಥಾನ ಹೊಂದಿದೆ. ಅಜೀಂ ಪ್ರೇಮ್ಜಿ (880), ಎಸ್.ಗೋಪಾಲಕೃಷ್ಣನ್ (812), ನಂದನ್ ನಿಲೇಕಣಿ (1274), ಜಿತೇಂದ್ರ ವಿರ್ವಾನಿ (1274), ರಮೇಶ್ ಕುನ್ಹಿಕನ್ನನ್ (2418) ಜಾಗತಿಕ ಕುಬೇರರ ಪಟ್ಟಿಯಲ್ಲಿದ್ದಾರೆ.
ಬಿಲಿಯನೇರ್ಗಳ ರಾಜಧಾನಿ ಮುಂಬೈ:ಅತ್ಯಧಿಕ ಕೋಟ್ಯಧಿಪತಿಗಳನ್ನು ಹೊಂದುವ ಮೂಲಕ ಭಾರತದ ಮುಂಬೈ 'ಏಷ್ಯಾದ ಬಿಲಿಯನೇರ್ಗಳ ರಾಜಧಾನಿ' ಎಂಬ ಖ್ಯಾತಿ ಪಡೆದಿದೆ. ಇಲ್ಲಿ 92 ಉದ್ಯಮಿಗಳು 100 ಕೋಟಿಗೂ ಅಧಿಕ ಆಸ್ತಿ ಹೊಂದಿದ್ದಾರೆ. ಚೀನಾದ ಬೀಜಿಂಗ್ 55 ಕೋಟ್ಯಧಿಪತಿಗಳನ್ನು ಹೊಂದಿದೆ.
ಮುಂಬೈ (ಸಂಗ್ರಹ ಚಿತ್ರ)
ಸಿರಿವಂತರ ಸಂಖ್ಯೆಯಲ್ಲಿ ಭಾರತ ಜಾಗತಿಕವಾಗಿ ಎರಡನೇ ಸ್ಥಾನದಲ್ಲಿದೆ. ಸಿರಿವಂತ ಉದ್ಯಮಿ ಮುಖೇಶ್ ಅಂಬಾನಿ ಏಷ್ಯಾದ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯರಾಗಿದ್ದಾರೆ. ಮುಂಬೈ ಕಳೆದ ಒಂದು ವರ್ಷದಲ್ಲಿ ಶೇಕಡಾ 48 ರಷ್ಟು ಸಿರಿವಂತಿಕೆ ಹೆಚ್ಚಿಸಿಕೊಂಡರೆ, ಬೀಜಿಂಗ್ ಕೇವಲ 28 ಪ್ರತಿಶತ ಏರಿಕೆ ಕಂಡಿದೆ. ಚೀನಾದಲ್ಲಿ ಸಿರಿವಂತರ ಆದಾಯ ತೀವ್ರ ಕುಸಿಯುತ್ತಿದೆ ಎಂದು ಸಮೀಕ್ಷೆ ಹೇಳಿದೆ.
ಜಾಗತಿಕ ಸವಾಲುಗಳ ಹೊರತಾಗಿಯೂ ಭಾರತದ ಸಂಚಿತ ಸಂಪತ್ತು ಒಂದು ವರ್ಷದಲ್ಲಿ 51% ರಷ್ಟು ಏರಿಕೆಯಾಗಿದೆ. ಅದರಲ್ಲಿ ಮುಂಬೈ ಅತ್ಯಧಿಕ ಸಿರಿವಂತಿಕೆ ದಾಖಲಿಸುವ ಮೂಲಕ ಆರ್ಥಿಕ ಹಬ್ ಆಗಿ ಗುರುತಿಸಿಕೊಂಡಿದೆ.