ನೆಲ್ಲೂರು (ಆಂಧ್ರ ಪ್ರದೇಶ):ಜಿಲ್ಲೆಯ ಮರಿಪಡು ಮಂಡಲದ ವೆಂಕಟಪುರಂ ಗ್ರಾಮದ 6 ವರ್ಷದ ಬಾಲಕನಲ್ಲಿ ಝೀಕಾ ಸೋಂಕು ಕಾಣಿಸಿಕೊಂಡಿದ್ದು, ಇದೀಗ ಆತಂಕ ಮೂಡಿದೆ. ಮುಂಬೈನ ಖಾಸಗಿ ಲ್ಯಾಬ್ನಲ್ಲಿ ನಡೆಸಿದ ಪರೀಕ್ಷೆಯಲ್ಲಿ ಸೋಂಕು ದೃಢಪಟ್ಟಿದ್ದು, ಮತ್ತೊಮ್ಮೆ ಖಾತ್ರಿ ಪಡಿಸಿಕೊಳ್ಳುವ ಉದ್ದೇಶದಿಂದು ಬಾಲಕನ ರಕ್ತ ಮತ್ತು ಮೂತ್ರದ ಸೋಂಕನ್ನು ಪುಣೆಯ ವೈರಲಾಜಿ ಸಂಸ್ಥೆ ಸಹಯೋಜನೆಯ ಸಂಸ್ಥೆಗೆ ಕಳುಹಿಸಲಾಗಿದೆ.
ವಿಶ್ವ ಆರೋಗ್ಯ ಸಂಸ್ಥೆಗೆ ಕೂಡ ಇದನ್ನು ತಿಳಿಸಲಾಗಿದ್ದು, ರಾಜ್ಯ ವೈದ್ಯಕೀಯ ಮತ್ತು ಆರೋಗ್ಯ ಇಲಾಖೆಯಿಂದ ಪ್ರತಿಕ್ರಿಯೆಗೆ ತಿಳಿಸಿದೆ.
ಲಕ್ಷಣಗಳು ಮತ್ತು ವೈದ್ಯಕೀಯ ಪ್ರತಿಕ್ರಿಯೆ: ನವೆಂಬರ್ 30ರಂದು ಬಾಲಕನಿಗೆ ಮೊದಲ ಬಾರಿಗೆ ಜ್ವರ ಬಂದಿತ್ತು. ಇದಾದ ಬಳಿಕ ಡಿಸೆಂಬರ್ 7ರಂದು ಮತ್ತೆ ಜ್ವರ ಕಾಣಿಸಿಕೊಂಡಿದ್ದು, ಆತನಿಗೆ ಮೂರ್ಚೆ ಸಮಸ್ಯೆ ಮತ್ತು ತ್ವಚೆಯಲ್ಲಿ ದದ್ದು ಕಾಣಿಸಿಕೊಂಡಿದೆ. ಆರಂಭದಲ್ಲಿ ನೆಲ್ಲೂರಿನ ಎರಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದ್ದು, ವೈದ್ಯರು ಸೋಂಕಿನ ಅನುಮಾನದ ಮೇರೆಗೆ ಪರೀಕ್ಷೆಗೆ ಮಾದರಿಯನ್ನು ಮುಂಬೈಗೆ ಕಳುಹಿಸಿದ್ದರು. ಅಲ್ಲಿ ಝೀಕಾ ಸೋಂಕು ಲಕ್ಷಣ ಪತ್ತೆಯಾಗಿದ್ದು, ಬಾಲಕನನ್ನು ಚೆನ್ನೈನ ಇಗ್ಮೊರ್ ಆಸ್ಪತ್ರೆಗೆ ಶಿಫಾರಸು ಮಾಡಲಾಗಿದ್ದು, ಸದ್ಯ ಬಾಲಕ ಚಿಕಿತ್ಸೆ ಪಡೆಯುತ್ತಿದ್ದಾನೆ.
ಆರೋಗ್ಯ ಇಲಾಖೆ ಕಣ್ಗಾವಲು: ಡಬ್ಲ್ಯೂಹೆಚ್ಒ ಎಚ್ಚರಿಕೆ ಹಿನ್ನೆಲೆ, ರಾಜ್ಯ ಆರೋಗ್ಯ ಇಲಾಖೆ ತಂಡ ಕೂಡ ವಿಜಯವಾಡದಿಂದ ತೆರಳಿದೆ. ಉಪ ನಿರ್ದೇಶಕ ರಾಮನಾಥ್ ರಾವ್ ಗ್ರಾಮವನ್ನು ತಲುಪಿದ್ದಾರೆ. ಡಬ್ಲ್ಯೂಹೆಚ್ಒ ಮೇಲ್ವಿಚಾರಕ ಅಧಿಕಾರಿ ಮೌನಿಕಾ ಮತ್ತು ರಾಜ್ಯ ಸೋಂಕುತಜ್ಞ ಕೊಂಡರೆಡ್ಡಿ ಹಾಗೂ ಸ್ಥಳೀಯ ಆರೋಗ್ಯ ಅಧಿಕಾರಿಗಳು ಭೇಟಿ ನೀಡಿದ್ದರು.