ಕರ್ನಾಟಕ

karnataka

ETV Bharat / bharat

ಕಾಂಗ್ರೆಸ್​ನ ಅಧೀರ್ ವಿರುದ್ಧ ಸಿಕ್ಸರ್ ಬಾರಿಸುವರೇ ಯೂಸುಫ್: ರಾಜಕೀಯ ಕ್ಷೇತ್ರ, ಟಿಎಂಸಿ ಆಯ್ಕೆ ಮಾಡಿಕೊಂಡಿದ್ದೇಕೆ ಪಠಾಣ್? - Yusuf Pathan - YUSUF PATHAN

ಪಶ್ಚಿಮ ಬಂಗಾಳದ ಪ್ರತಿಷ್ಠಿತ ಬಹರಂಪುರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಹಿರಿಯ ನಾಯಕ ಅಧೀರ್ ರಂಜನ್ ಚೌಧರಿ ವಿರುದ್ಧ​ ಟಿಎಂಸಿಯಿಂದ ಸ್ಪರ್ಧಿಸಿರುವ ಯೂಸುಫ್ ಪಠಾಣ್ ತಮ್ಮ ರಾಜಕೀಯ ಪ್ರವೇಶದ ಬಗ್ಗೆ ಹಲವು ಹೊಸ ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ.

Yusuf Pathan-readies-for-adhir-challenge-says-he-joined-tmc-as-his-cricketing-days-were-over
ಕಾಂಗ್ರೆಸ್​ನ ಅಧೀರ್ ವಿರುದ್ಧ ಸಿಕ್ಸರ್ ಬಾರಿಸುವರೇ ಯೂಸುಫ್?: ರಾಜಕೀಯ ಕ್ಷೇತ್ರ, ಟಿಎಂಸಿ ಆಯ್ಕೆ ಮಾಡಿಕೊಂಡಿದ್ದೇಕೆ ಪಠಾಣ್?

By ETV Bharat Karnataka Team

Published : Apr 21, 2024, 5:56 PM IST

ಕೋಲ್ಕತ್ತಾ (ಪಶ್ಚಿಮ ಬಂಗಾಳ): ದೇಶಾದ್ಯಂತ 18ನೇ ಲೋಕಸಭೆ ಚುನಾವಣೆ ಕಾವು ಜೋರಾಗಿದೆ. ಪಶ್ಚಿಮ ಬಂಗಾಳದ ಕಾಂಗ್ರೆಸ್‌ ಹಿರಿಯ ನಾಯಕ ಅಧೀರ್ ರಂಜನ್ ಚೌಧರಿ ವಿರುದ್ಧ ತೃಣಮೂಲ ಕಾಂಗ್ರೆಸ್​ (ಟಿಎಂಸಿ)ನಿಂದ ಮಾಜಿ ಕ್ರಿಕೆಟಿಗ ಯೂಸುಫ್ ಪಠಾಣ್ ಸ್ಪರ್ಧೆಯಿಂದ ಬಹರಂಪುರ ಲೋಕಸಭಾ ಕ್ಷೇತ್ರವು ಹೈವೋಲ್ಟೇಜ್ ಕಣವಾಗಿ ಮಾರ್ಪಟ್ಟಿದೆ. ಭರ್ಜರಿ ಪ್ರಚಾರ ಕಾರ್ಯದಲ್ಲಿ ತೊಡಗಿರುವ ಯೂಸುಫ್ ಪಠಾಣ್, ತಮ್ಮ ರಾಜಕೀಯ ಪ್ರಯಾಣದ ಮೊದಲ ಯತ್ನದಲ್ಲೇ ಗೆಲುವಿನ ವಿಶ್ವಾಸವನ್ನೂ ಹೊಂದಿದ್ದಾರೆ.

ಮುರ್ಷಿದಾಬಾದ್ ಜಿಲ್ಲೆಯ ಬಹರಂಪುರ ಪ್ರತಿಷ್ಠಿತ ಲೋಕಸಭಾ ಕ್ಷೇತ್ರವಾಗಿದೆ. ಕಾಂಗ್ರೆಸ್​ನ ಅಧೀರ್ ರಂಜನ್ ಚೌಧರಿ ಅವರಿಗೆ ತಮ್ಮದೇ ತವರು ನೆಲದಲ್ಲಿ ಆಡಳಿತರೂಢ ಟಿಎಂಸಿಯಿಂದ ಸ್ಪರ್ಧೆ ಮಾಡಿರುವ ಯೂಸುಫ್​ ಪ್ರಬಲ ಎದುರಾಳಿಯಾಗಿದ್ದಾರೆ. ಬಹರಂಪುರ ಕ್ಷೇತ್ರಕ್ಕೆ ಹೊರಗಿನವರಾದ ಮೂಲತಃ ಗುಜರಾತ್​ನ ಬಲಗೈ ಬ್ಯಾಟರ್, ಪ್ರತಿ ದಿನವೂ ತಮ್ಮ ಶಕ್ತಿ ಮತ್ತು ಆತ್ಮವಿಶ್ವಾಸ ವೃದ್ಧಿಯಾಗುತ್ತಿದೆ. ಇಲ್ಲಿ ಸೋಲಲು ಬಿಡುವುದಿಲ್ಲ ಎಂದು ಇಲ್ಲಿನ ಜನ ಹೇಳುತ್ತಿದ್ದಾರೆ ಎಂದು ಸುದ್ದಿಸಂಸ್ಥೆ 'ಪಿಟಿಐ'ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದರು.

ಇಲ್ಲಿನ ಜನರು ಈಗಾಗಲೇ ನನ್ನನ್ನು ತಮ್ಮ ಮಗ, ಸಹೋದರ ಅಥವಾ ಸ್ನೇಹಿತ ಎಂದು ಸ್ವೀಕರಿಸಿದ್ದಾರೆ. ಚುನಾವಣೆಯ ಫಲಿತಾಂಶ ಏನೇ ಬಂದರೂ ನಾನು ಇಲ್ಲಿನ ಜನರ ಉತ್ತಮ ಭವಿಷ್ಯಕ್ಕಾಗಿ ಅವರೊಂದಿಗೆ ಇರುತ್ತೇನೆ. ಈ ಜನರೇ ನನ್ನ ಶಕ್ತಿ. ಅಲ್ಲಾನ ಅನುಗ್ರಹವಿದ್ದಲ್ಲಿ ನಾನು ಗೆಲ್ಲುತ್ತೇನೆ. ನಾನು ಪ್ರಸ್ತುತ ಇರುವಂತಹ ಸಕಾರಾತ್ಮಕ ಮನಸ್ಥಿತಿಯಿಂದ ಸೋಲಿನ ಸಾಧ್ಯತೆಯ ಬಗ್ಗೆ ಯೋಚಿಸುತ್ತಿಲ್ಲ ಎಂದು ಟಿಎಂಸಿ ಅಭ್ಯರ್ಥಿ ಆಗಿರುವ ಯೂಸುಫ್ ಹೇಳಿದರು.

ಅಧೀರ್ ರಂಜನ್​ ಬಗ್ಗೆ ಗೌರವವಿದೆ, ಆದರೆ...: ಮುಂದುವರೆದು ಮಾತನಾಡಿದ ಯೂಸುಫ್ ಪಠಾಣ್, ಇಲ್ಲಿನ ಹಾಲಿ ಸಂಸದರಾದ ಹಿರಿಯ ನಾಯಕ ಅಧೀರ್ ರಂಜನ್ ಚೌಧರಿ ಅವರ ಬಗ್ಗೆ ನನಗೆ ಅಪಾರ ಗೌರವವಿದೆ. ಆದರೆ, ಕೋವಿಡ್ ವರ್ಷಗಳಲ್ಲಿ ನೆಲಮಟ್ಟದಲ್ಲಿ ಅವರು ಕಾಣಿಸಿಕೊಳ್ಳದಿರುವ ಬಗ್ಗೆ ಜನರಿಂದ ಅಸಮಾಧಾನದ ಮಾತುಗಳನ್ನು ಕೇಳುತ್ತಿದ್ದೇನೆ. ಜೊತೆಗೆ ಮೂಲಸೌಕರ್ಯ ಮತ್ತು ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಅಗತ್ಯವಿರುವ ಕೇಂದ್ರದ ಅನುದಾನವನ್ನು ತರುವಲ್ಲಿ ಚೌಧರಿ ವಿಫಲರಾಗಿದ್ದಾರೆ ಎಂದು ಇಲ್ಲಿನ ಜನರು ಆರೋಪಿಸುತ್ತಿದ್ದಾರೆ. ಇಲ್ಲಿನ ಜನರಿಗೆ ಸಾಕಷ್ಟು ಉದ್ಯೋಗ ಸಿಗುತ್ತಿಲ್ಲ. 25 ವರ್ಷಗಳ ಸಂಸದರಾಗಿರುವ ಅವರು ಏಕೆ ವಿಫಲರಾದರು ಎಂದು ಜನರಿಗೆ ಉತ್ತರಿಸಬೇಕು ಎಂದರು.

ಇದನ್ನೂ ಓದಿ:ಬಂಗಾಳದಲ್ಲಿ ಟಿಎಂಸಿ ಏಕಾಂಗಿ ಸ್ಪರ್ಧೆ: ಕಾಂಗ್ರೆಸ್‌ನ ಅಧೀರ್‌ ರಂಜನ್‌ ವಿರುದ್ಧ ಮಾಜಿ ಕ್ರಿಕೆಟಿಗ ಯೂಸುಫ್​ ಪಠಾಣ್ ಕಣಕ್ಕೆ

ಪಠಾಣ್ ಗೆದ್ದರೆ, ಜನರಿಗಾಗಿ ಏನು ಮಾಡುತ್ತಾರೆ?: ಇದೇ ವೇಳೆ, ಬಹರಂಪುರ ಮತದಾರರು ತಮ್ಮನ್ನು ಆಯ್ಕೆ ಮಾಡಿದರೆ, ಸಂಸತ್ತಿನಲ್ಲಿ ಜನರ ಪ್ರತಿನಿಧಿಯಾಗಿ ಪಠಾಣ್ ತಾವು ಮಾಡುವ ಕಾರ್ಯಗಳ ಪಟ್ಟಿ ಬಿಚ್ಚಿಟ್ಟರು. ವಲಸೆ ಕಾರ್ಮಿಕರನ್ನು ಹಿಡಿದಿಟ್ಟುಕೊಳ್ಳಲು ಉದ್ಯೋಗಾವಕಾಶಗಳ ಸೃಷ್ಟಿ, ವಿಶ್ವ ದರ್ಜೆಯ ಕ್ರೀಡಾ ಸಂಕೀರ್ಣ ನಿರ್ಮಾಣ, ಸ್ಥಳೀಯ ರೇಷ್ಮೆ, ಥರ್ಮಾಕೋಲ್ ಮತ್ತು ಸೆಣಬು ಉದ್ಯಮದ ಕಾರ್ಮಿಕರಿಗೆ ಮೂಲಸೌಕರ್ಯ ಮತ್ತು ರೈತರಿಗೆ ಬೆಂಬಲವಾಗಿ ನಿಲ್ಲುವುದು ನನ್ನ ಆದ್ಯತೆಯಾಗಿರಲಿದೆ. ನನಗೆ ಇಲ್ಲಿ ಮಾಡಲು ಇನ್ನೂ ಬಹಳಷ್ಟು ಕೆಲಸಗಳಿವೆ. ಈ ಪ್ರದೇಶದಲ್ಲಿ ನನ್ನ ಅಲ್ಪ ಸುತ್ತಾಟ, ಚುನಾವಣಾ ಪ್ರಚಾರಗಳು ಮತ್ತು ಜನರೊಂದಿಗೆ ಸಂವಾದದ ಸಮಯದಲ್ಲಿ ನಾನು ಇವುಗಳನ್ನು ಅರಿತುಕೊಂಡಿದ್ದೇನೆ ಎಂದು ವಿವರಿಸಿದರು.

ರಾಜಕೀಯ ಕ್ಷೇತ್ರ, ಟಿಎಂಸಿ ಪಕ್ಷ ಆಯ್ಕೆ ಮಾಡಿಕೊಂಡಿದ್ದೇಕೆ?:ಯೂಸುಫ್ ಪಠಾಣ್ ರಾಜಕೀಯಕ್ಕೆ ಬರುವ ಬಗ್ಗೆ ಯಾವುದೇ ಸುಳಿವು ನೀಡಿರಲಿಲ್ಲ. ಮಾರ್ಚ್ 10ರಂದು ಟಿಎಂಸಿ ಲೋಕಸಭೆ ಚುನಾವಣೆಗೆ ತನ್ನ ಅಭ್ಯರ್ಥಿಗಳ ಪಟ್ಟಿಯಲ್ಲಿ ಏಕಾಏಕಿ ಯೂಸುಫ್ ಹೆಸರು ಘೋಷಣೆ ಮಾಡಿದ್ದು ಎಲ್ಲರಲ್ಲೂ ಅಚ್ಚರಿ ಮೂಡಿಸಿತ್ತು. ಅದರಲ್ಲೂ, ಗುಜರಾತ್​ನವರಾದ ಯೂಸುಫ್ ಪಠಾಣ್ ದೂರದ ಪಶ್ವಿಮ ಬಂಗಾಳದಲ್ಲಿ ಚುನಾವಣಾ ಕಣಕ್ಕೆ ಇಳಿದಿದ್ದು ಹೊಸ ಚರ್ಚೆಗೆ ಗ್ರಾಸವಾಗಿದೆ. ಐಪಿಎಲ್​ನಲ್ಲಿ ಕೋಲ್ಕತ್ತಾ ನೈಟ್​ ರೈಡರ್ಸ್​ ತಂಡವನ್ನು ಪ್ರತಿನಿಧಿಸಿದ್ದು ಬಿಟ್ಟರೆ, ನೇರವಾಗಿ ರಾಜ್ಯದ ಜನತೆಯೊಂದಿಗೆ ದೊಡ್ಡ ನಂಟು ಇರಲಿಲ್ಲ.

ಈ ಬಗ್ಗೆ ಪ್ರತಿಕ್ರಿಯಿಸಿದ ಯೂಸುಫ್, ಲೋಕಸಭೆ ಚುನಾವಣೆ ಕಣಕ್ಕೆ ಇಳಿಯುವ ಬಹುಶಃ ಒಂದೂವರೆ ತಿಂಗಳ ಹಿಂದೆ ಟಿಎಂಸಿ ನಾಯಕಿ, ಸಿಎಂ ಮಮತಾ ಬ್ಯಾನರ್ಜಿ, ಅವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ನನ್ನನ್ನು ಸಂಪರ್ಕಿಸುವವರೆಗೆ ನನ್ನ ಮನಸ್ಸಿನಲ್ಲಿ ರಾಜಕೀಯ ಎಂಬುದು ಕೊನೆಯ ವಿಷಯವಾಗಿತ್ತು. ಅಭ್ಯರ್ಥಿಗಳ ಪಟ್ಟಿ ಪ್ರಕಟಿಸುವ ಒಂದು ವಾರಕ್ಕಿಂತ ಮುಂಚಿನವರೆಗೂ ನಾನು ಒಪ್ಪಿರಲಿಲ್ಲ. ನನ್ನ ಮೊದಲ ಪ್ರತಿಕ್ರಿಯೆಯೇ ನಕಾರಾತ್ಮಕವಾಗಿತ್ತು. ರಾಜಕೀಯಕ್ಕೆ ಬರುವ ಪ್ರಸ್ತಾಪವನ್ನು ಸ್ವೀಕರಿಸಬೇಕೇ ಅಥವಾ ಬೇಡವೇ ಎಂಬ ಸಂದಿಗ್ಧತೆಯಲ್ಲಿ ಸಿಲುಕಿದ್ದೆ ಎಂದು ಮಾಹಿತಿ ನೀಡಿದರು.

ಅಂತಿಮವಾಗಿ ರಾಜಕೀಯ ಕ್ಷೇತ್ರ ಮತ್ತು ಟಿಎಂಸಿ ಪಕ್ಷವನ್ನು ಆಯ್ಕೆ ಮಾಡಲು ಕಾರಣವೇನು ಎಂಬ ಪ್ರಶ್ನೆಗೆ ಪಠಾಣ್ ನಗುತ್ತಾ, ನನ್ನ ಕ್ರಿಕೆಟ್ ದಿನಗಳು ಮುಗಿದಿವೆ. ನಾನು ಏನನ್ನಾದರೂ ಮಾಡಬೇಕಾಗಿತ್ತು. ಆಗ ಗಂಭೀರವಾಗಿ ನಾನು ಸಮಾಲೋಚಿಸಿದೆ. ನನ್ನ ಸಹೋದರ ಇರ್ಫಾನ್ ಮತ್ತು ಪತ್ನಿ ಅಫ್ರೀನ್ ಸೇರಿದಂತೆ ನನ್ನ ಕುಟುಂಬದರು, ನನ್ನ ಹಿರಿಯರು ಮತ್ತು ಸ್ನೇಹಿತರೊಂದಿಗೆ ಮಾತನಾಡಿದೆ. ಬಳಿಕ ಜನರಿಗೆ ಸೇವೆ ಸಲ್ಲಿಸಲು ಮತ್ತು ಸಮಾಜಕ್ಕೆ ಪ್ರೀತಿ ಮತ್ತು ಗೌರವದ ವಿಷಯದಲ್ಲಿ ನಾನು ಗಳಿಸಿದ್ದನ್ನು ಹಿಂದಿರುಗಿಸುವ ಅವಕಾಶವಾಗಿದೆ ಎಂದು ಭಾವಿಸಿದೆ ಎಂದು ತಿಳಿಸಿದರು.

ಮಮತಾ ಆಫರ್‌ಗೆ 'ಯೆಸ್​' ಎನ್ನಲು ಸಮಸ್ಯೆಯಾಗಲಿಲ್ಲ:ಕ್ರಿಕೆಟ್​ ಮೈದಾನದಲ್ಲಿ ಸಿಕ್ಸರ್​ ಬಾರಿಸುವ ಮೂಲಕ ಪರಿಚಿತರಾದ ಪಠಾಣ್​, 2011ರಿಂದ ಐಪಿಎಲ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್‌ ಪರವಾಗಿ ಆಡಲು ಪ್ರಾರಂಭಿಸಿದ ಒಂದು ದಶಕದಿಂದ ಮಮತಾ ಬ್ಯಾನರ್ಜಿ ಅವರ ಸಂಪರ್ಕಕ್ಕೆ ಬಂದಿದ್ದೆ. ನಾನು ಬಂಗಾಳಕ್ಕೆ ಬಂದು ತಿಂಗಳುಗಟ್ಟಲೆ ಇರುತ್ತಿದ್ದೆ. ಅವರು (ಮಮತಾ) ಕೋಲ್ಕತ್ತಾಗೆ ತಂದ ನಾಗರಿಕ ಮೂಲಸೌಕರ್ಯ ಅಭಿವೃದ್ಧಿಗಳನ್ನು ನೋಡುತ್ತಿದ್ದೆ. ಮಹಿಳಾ ಶಿಕ್ಷಣ ಮತ್ತು ಬಡವರಿಗಾಗಿ ಅವರು ಮಾಡಿದ ಕೆಲಸಗಳ ಬಗ್ಗೆ ಜನರು ನನಗೆ ಹೇಳುತ್ತಲೇ ಇದ್ದರು. ಕೆಕೆಆರ್ ಐಪಿಎಲ್ ಟ್ರೋಫಿ ಗೆದ್ದ ನಂತರ ನಾನು 2014ರಲ್ಲಿ ಮಮತಾ ಅವರನ್ನು ಭೇಟಿಯಾಗಿದ್ದೆ. ಆದ್ದರಿಂದ ಅವರ (ಮಮತಾ) ರಾಜಕೀಯದ ಆಫರ್‌ಗೆ 'ಯೆಸ್​' ಎಂದು ಹೇಳುವುದು ಹೆಚ್ಚು ಸಮಸ್ಯೆಯಾಗಿರಲಿಲ್ಲ ಎಂದು ವಿವರಿಸಿದರು.

ಇದನ್ನೂ ಓದಿ:ಉತ್ತರ ಪ್ರದೇಶ: ಮತದಾನ ಮುಗಿದ ಮರು ದಿನವೇ ಮೊರಾದಾಬಾದ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಿಧನ

ABOUT THE AUTHOR

...view details