ಅಮರಾವತಿ(ಆಂಧ್ರಪ್ರದೇಶ) :ರಾಜ್ಯದಲ್ಲಿ ದುರಾಡಳಿತ, ನಿರುದ್ಯೋಗ, ಆಡಳಿತ ವೈಫಲ್ಯದ ವಿರುದ್ಧ ಕಾಂಗ್ರೆಸ್ ಚಲೋ ಸೆಕ್ರೆಟರಿಯೇಟ್ ಹೋರಾಟಕ್ಕೆ ಕರೆ ನೀಡಿದೆ. ಇದನ್ನು ತಡೆಯಲು ರಾಜ್ಯ ಸರ್ಕಾರ ಆ ಪಕ್ಷದ ನಾಯಕರ ಗೃಹಬಂಧನಕ್ಕೆ ಸೂಚಿಸಿದ್ದು, ಪಕ್ಷದ ಅಧ್ಯಕ್ಷೆ ವೈಎಸ್ ಶರ್ಮಿಳಾ ರೆಡ್ಡಿ ಅವರು ಕಾಂಗ್ರೆಸ್ ಕಚೇರಿಯಲ್ಲೇ ಒಂದು ರಾತ್ರಿ ಕಳೆಯುವಂತಾಗಿದೆ.
ಗುರುವಾರ ನಡೆದ ಚಲೋ ಸೆಕ್ರೆಟರಿಯೇಟ್ ಹೋರಾಟದಲ್ಲಿ ಹಲವಾರು ಕಾಂಗ್ರೆಸ್ ನಾಯಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್ನು ಕೆಲವರಿಗೆ ಗೃಹಬಂಧನ ವಿಧಿಸುತ್ತಿದ್ದಾರೆ. ಇದರಿಂದ ತಪ್ಪಿಸಿಕೊಳ್ಳಲು ಶರ್ಮಿಳಾ ಅವರು ಕಾಂಗ್ರೆಸ್ ಕಚೇರಿಯಲ್ಲೇ ನಿನ್ನೆಯಿಂದ ಉಳಿದುಕೊಂಡಿದ್ದಾರೆ. ಸರ್ಕಾರ ಮತ್ತು ಪೊಲೀಸರ ವಿರುದ್ಧ ಕಾಂಗ್ರೆಸ್ ಅಧ್ಯಕ್ಷೆ ಕಿಡಿಕಾರಿದ್ದಾರೆ.
ರಾಜ್ಯದ ವಿವಿಧೆಡೆಯಲ್ಲಿ ಕಾಂಗ್ರೆಸ್ ನಾಯಕರಿಗೆ ಅಲ್ಲಲ್ಲೇ ತಡೆ ಹಾಕಲಾಗುತ್ತಿದ್ದು, ಪ್ರತಿಭಟನೆಯನ್ನು ಹತ್ತಿಕ್ಕಲಾಗುತ್ತಿದೆ. ಇದರಿಂದ ರಾಜ್ಯಾದ್ಯಂತ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ರಾಜಧಾನಿ ಅಮರಾವತಿಯಲ್ಲಿ ಪೊಲೀಸರು ರಸ್ತೆ ರಸ್ತೆಗಳಲ್ಲಿ ಬಂದೋಬಸ್ತ್ ಏರ್ಪಡಿಸಿದ್ದಾರೆ.
ಕಾಂಗ್ರೆಸ್ ಕಚೇರಿಗೆ ಖಾಕಿ ಕಣ್ಗಾವಲು:ಆಂಧ್ರಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ವೈಎಸ್ ಶರ್ಮಿಳಾ ಅವರು ಪಕ್ಷದ ಕಚೇರಿಯಾದ ಆಂಧ್ರ ರತ್ನ ಭವನದಲ್ಲಿ ಉಳಿದುಕೊಂಡಿದ್ದು, ಅಲ್ಲೇ ಅವರನ್ನು ಪ್ರತಿಭಟನೆಯಿಂದ ತಡೆ ಹಿಡಿಯಲಾಗಿದೆ. ಇದರಿಂದ ಪಕ್ಷದ ಕಚೇರಿಯ ಸುತ್ತಲೂ ಭಾರೀ ಪೊಲೀಸರನ್ನು ನಿಯೋಜಿಸಲಾಗಿದೆ. ಸುತ್ತಲೂ ಬ್ಯಾರಿಕೇಡ್‌ಗಳನ್ನು ಹಾಕಲಾಗಿದೆ. ಇದರಿಂದ ಕಚೇರಿಯಲ್ಲಿ ಸುತ್ತ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಸರ್ಕಾರದ ವಿರುದ್ಧ ಶರ್ಮಿಳಾ ಕಿಡಿ:ಚಲೋ ಸೆಕ್ರೆಟರಿಯೇಟ್ ಹೋರಾಟಕ್ಕೆ ಕರೆ ನೀಡಿರುವ ಕಾಂಗ್ರೆಸ್ ಮುಖಂಡರ ಗೃಹಬಂಧನವನ್ನು ವಿರೋಧಿಸಿ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಶರ್ಮಿಳಾ, ನಿರುದ್ಯೋಗಿಗಳ ಪರವಾಗಿ ಮುಷ್ಕರಕ್ಕೆ ಕರೆ ನೀಡಿದರೆ ಗೃಹಬಂಧನ ಮಾಡುತ್ತೀರಾ?. ರಾಜ್ಯಾದ್ಯಂತ ಸಾವಿರಾರು ಸಂಖ್ಯೆಯಲ್ಲಿ ಬರುತ್ತಿರುವ ಪಕ್ಷದ ಕಾರ್ಯಕರ್ತರನ್ನು ಏಕೆ ತಡೆಯುತ್ತಿದ್ದೀರಿ?. ಪ್ರಜಾಪ್ರಭುತ್ವದಲ್ಲಿ ಪ್ರತಿಭಟಿಸುವ ಹಕ್ಕು ನಮಗಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಪಕ್ಷದ ನಾಯಕರನ್ನು ಬಂಧಿಸುತ್ತಿರುವ ಪೊಲೀಸರ ವಿರುದ್ಧ ಹರಿಹಾಯ್ದಿರುವ ಕಾಂಗ್ರೆಸ್ ಅಧ್ಯಕ್ಷೆ, ನಮ್ಮ ನಾಯಕರು ಭಯೋತ್ಪಾದಕರೇ ಅಥವಾ ಸಮಾಜ ವಿರೋಧಿಗಳೇ. ಪಕ್ಷದ ಕಚೇರಿಯಲ್ಲೇ ನನ್ನನ್ನು ಕೂಡಿ ಹಾಕಿರುವುದು ನಾಚಿಕೆಗೇಡಿನ ಸಂಗತಿ. ಸಿಎಂ ಜಗನ್ಮೋಹನ್ರೆಡ್ಡಿ ನೇತೃತ್ವದ ರಾಜ್ಯ ಸರ್ಕಾರಕ್ಕೆ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸೋಲಿನ ಭಯ ಕಾಡುತ್ತಿದೆ. ಹೀಗಾಗಿ ಪ್ರತಿಭಟನೆಯನ್ನು ಹತ್ತಿಕ್ಕಲಾಗುತ್ತಿದೆ ಎಂದು ಜರಿದಿದ್ದಾರೆ. ಜೊತೆಗೆ ತಮ್ಮ ನಾಯಕರನ್ನು ಬಂಧಿಸುತ್ತಿರುವ ವಿಡಿಯೋವನ್ನೂ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ:ಆಂಧ್ರಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿ ವೈಎಸ್ ಶರ್ಮಿಳಾ ನೇಮಕ