ಪುಣೆ, ಮಹಾರಾಷ್ಟ್ರ: ಇನ್ನು ಮುಂದೆ ತಾವು ಯಾವುದೇ ಚುನಾವಣೆಗಳಲ್ಲಿ ಸ್ಪರ್ಧಿಸುವುದಿಲ್ಲ ಎಂದು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ ಎಸ್ಪಿ ಬಣದ ಅಧ್ಯಕ್ಷ ಶರದ್ ಪವಾರ್ ಹೇಳಿದ್ದಾರೆ. 57 ವರ್ಷಗಳ ಕಾಲ ಸುದೀರ್ಘ ಸಕ್ರಿಯ ರಾಜಕಾರಣದಲ್ಲಿರುವ ಪವಾರ್ಗೆ ಮುಂದಿನ ತಿಂಗಳು 84 ವರ್ಷ ವಯಸ್ಸಾಗಲಿದೆ.
"ನನ್ನ ರಾಜ್ಯಸಭಾ ಸದಸ್ಯತ್ವ ಮುಗಿಯಲು ಇನ್ನೂ ಒಂದೂವರೆ ವರ್ಷ ಉಳಿದಿದೆ. ನಾನು ರಾಜ್ಯಸಭಾ ಸದಸ್ಯನಾಗಿ ಮುಂದುವರಿಯಬೇಕಾ ಅಥವಾ ಬೇಡವಾ ಎಂಬುದನ್ನು ಯೋಚಿಸಬೇಕಿದೆ. ಇನ್ನು ಮುಂದೆ ನಾನು ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸುವುದಿಲ್ಲ" ಎಂದು ಹೇಳಿದರು. ಸಭೆಯಲ್ಲಿ ಶರದ್ ಪವಾರ್ ರಾಜಕೀಯ ನಿವೃತ್ತಿ ಘೋಷಿಸಿದ್ದನ್ನು ಕಂಡ ಜನರು ಎದ್ದು ನಿಂತು ಬೇಡ ಬೇಡ ಎಂದು ಕೈಬೀಸಿದರು.
ಮೊಮ್ಮಗನ ಪರ ಸ್ವಾಭಿಮಾನ್' ಚುನಾವಣಾ ರ್ಯಾಲಿಯಲ್ಲಿ ಪವಾರ್ ಭಾಷಣ:ಎನ್ಸಿಪಿ - ಎಸ್ಪಿಯ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿರುವ ತಮ್ಮ ಮೊಮ್ಮಗ ಯುಗೇಂದ್ರ ಎಸ್ ಪವಾರ್ ಅವರ ಪರವಾಗಿ ಶಿರ್ ಸುಫಲ್ ಗ್ರಾಮದಲ್ಲಿ ನಡೆದ 'ಸ್ವಾಭಿಮಾನ್' ಚುನಾವಣಾ ರ್ಯಾಲಿಯಲ್ಲಿ ಪವಾರ್ ಮಾತನಾಡಿದರು. ಯುಗೇಂದ್ರ ಎಸ್ ಪವಾರ್ ಪ್ರತಿಷ್ಠಿತ ಬಾರಾಮತಿ ಕ್ಷೇತ್ರದಲ್ಲಿ ತಮ್ಮ ಚಿಕ್ಕಪ್ಪ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮತ್ತು ಉಪಮುಖ್ಯಮಂತ್ರಿ ಅಜಿತ್ ಪವಾರ್ ವಿರುದ್ಧ ಸ್ಪರ್ಧಿಸುತ್ತಿದ್ದಾರೆ.
14 ಬಾರಿ ಆಯ್ಕೆ ಮಾಡಿದ್ದಕ್ಕೆ ವಂದಿಸಿದ ಶರದ್ ಪವಾರ್;ಬಾರಾಮತಿ (ಪುಣೆಯ) ಜನರು ತಮ್ಮನ್ನು ದಾಖಲೆಯ 14 ಬಾರಿ ವಿಧಾನಸಭೆ ಮತ್ತು ಲೋಕಸಭೆಗೆ ಸತತವಾಗಿ ಆಯ್ಕೆ ಮಾಡಿದ್ದಕ್ಕೆ ಜನತೆಗೆ ವಿನಮ್ರರಾಗಿ ವಂದಿಸಿದ ಅವರು, ತಾವು ಪ್ರತಿಷ್ಠಿತ ದೇಶೀಯ ಮತ್ತು ಜಾಗತಿಕ ಕಾರ್ಯಗಳನ್ನು ನಿರ್ವಹಿಸುವುದರ ಜೊತೆಗೆ ಸಿಎಂ (4 ಬಾರಿ) ಮತ್ತು ಕೇಂದ್ರ ಸಚಿವರಾಗಿ (ಹಲವಾರು ಬಾರಿ) ಸೇವೆ ಸಲ್ಲಿಸಿದ್ದನ್ನು ಸ್ಮರಿಸಿಕೊಂಡರು.