ಸಿಲಿಗುರಿ (ಪಶ್ಚಿಮ ಬಂಗಾಳ) :ಮಮತಾ ಬ್ಯಾನರ್ಜಿ ಅವರು ಇಂಡಿಯಾ ಮೈತ್ರಿಕೂಟದಿಂದ ಬೇರ್ಪಟ್ಟ ಒಂದು ದಿನದ ನಂತರ, ಪಕ್ಷದ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರು ಟಿಎಂಸಿ ವರಿಷ್ಠರೊಂದಿಗೆ ಮಾತನಾಡಿದ್ದಾರೆ ಮತ್ತು ಸೀಟು ಹಂಚಿಕೆ ಬಿಕ್ಕಟ್ಟಿಗೆ ಪರಿಹಾರವನ್ನು ಕಂಡುಕೊಳ್ಳುವ ಭರವಸೆ ಇದೆ ಎಂದು ಕಾಂಗ್ರೆಸ್ ಸಂಸದ ಜೈರಾಮ್ ರಮೇಶ್ ತಿಳಿಸಿದ್ದಾರೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ತಮ್ಮ ಪಕ್ಷವು ರಾಜ್ಯದಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಬ್ಯಾನರ್ಜಿ ಗುರುವಾರ ಹೇಳಿದ್ದರು.
ಇಲ್ಲಿನ ಬಾಗ್ದೋಗ್ರಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಮೇಶ್, ದೇಶದಲ್ಲಿ ಬಿಜೆಪಿ ವಿರುದ್ಧದ ಹೋರಾಟದಲ್ಲಿ ಕಾಂಗ್ರೆಸ್ ಅನಿವಾರ್ಯವಾಗಿರುವುದರಿಂದ ಬ್ಯಾನರ್ಜಿ ಇಲ್ಲದೆ ಇಂಡಿಯಾ ಮೈತ್ರಿಕೂಟವನ್ನು ಯೋಚಿಸುವುದಕ್ಕೂ ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಟಿಎಂಸಿ ಜೊತೆಗಿನ ಸೀಟು ಹಂಚಿಕೆ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳುವ ಭರವಸೆ ಇದೆ ಎಂದು ಅವರು ಇದೇ ವೇಳೆ ತಿಳಿಸಿದ್ದಾರೆ.
"ನಾವು ಬಂಗಾಳ ಮತ್ತು ಭಾರತದಲ್ಲಿ ಬಿಜೆಪಿಯನ್ನು ಸೋಲಿಸಬೇಕಾದರೆ, ಮಮತಾ ಬ್ಯಾನರ್ಜಿ ಅಗತ್ಯ ತುಂಬಾ ಇದೆ. ನಮ್ಮ ನಾಯಕಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರು ಮಮತಾ ಜಿ ಬಗ್ಗೆ ಅಪಾರ ಗೌರವ ಹೊಂದಿದ್ದಾರೆ. ಮುಖ್ಯಮಂತ್ರಿ "ಇಂಡಿಯಾ ಮೈತ್ರಿಕೂಟದ ಪ್ರಮುಖ ಆಧಾರ ಸ್ತಂಭ" ಎಂದಿರುವ ಅವರು, ''ಮಮತಾ ಬ್ಯಾನರ್ಜಿ ಮತ್ತು ಟಿಎಂಸಿ ಇಲ್ಲದೇ ಇಂಡಿಯಾ ಮೈತ್ರಿಕೂಟವನ್ನು ಯಾರೂ ಊಹಿಸಲು ಸಾಧ್ಯವಿಲ್ಲ'' ಎಂದಿದ್ದಾರೆ.