ಮುಂಬೈ(ಮಹಾರಾಷ್ಟ್ರ): ಬುಧವಾರ ರಾತ್ರಿ ನಿಧನರಾದ ಟಾಟಾ ಸಮೂಹ ಸಾಮ್ರಾಜ್ಯದ ವಿಶ್ರಾಂತ ಮುಖ್ಯಸ್ಥರು ಹಾಗೂ ಶ್ರೇಷ್ಠ ಸಮಾಜಸೇವಕರಾದ ರತನ್ ಟಾಟಾರ ಅಂತ್ಯಕ್ರಿಯೆ ಗುರುವಾರ ಸಂಜೆ ಮುಂಬೈನ ವರ್ಲಿಯಲ್ಲಿರುವ ಪಾರ್ಸಿ ಚಿತಾಗಾರದಲ್ಲಿ ನಡೆಯಿತು. ಅಂತ್ಯಕ್ರಿಯೆಗೂ ಮುನ್ನ ಸಕಲ ಸರ್ಕಾರಿ ಗೌರವ ನೀಡಲಾಯಿತು. ಸರ್ವಧರ್ಮದ ಗುರುಗಳಿಂದ ಪ್ರಾರ್ಥನೆ ನಡೆಯಿತು. ಆ ಬಳಿಕ ವಿದ್ಯುತ್ ಚಿತಾಗಾರದಲ್ಲಿ ಅಂತ್ಯಕ್ರಿಯೆ ನೆರವೇರಿತು. ಈ ವೇಳೆ ಕುಟುಂಬಸ್ಥರು, ಅಭಿಮಾನಿಗಳು, ಗಣ್ಯರು ಉಪಸ್ಥಿತರಿದ್ದರು.
ಟಾಟಾರ ಅಂತ್ಯಕ್ರಿಯೆ ಹೇಗೆ ನಡೆಯುತ್ತದೆ ಎಂಬ ಕುರಿತು ಸಹಜ ಕುತೂಹಲವಿತ್ತು. ಏಕೆಂದರೆ ಪಾರ್ಸಿ ಪದ್ಧತೆ ಹಿಂದೂ, ಮುಸ್ಲಿಂ, ಕ್ರೈಸ್ತರಿಗಿಂತ ಭಿನ್ನ. ಸ್ಮಶಾನವನ್ನು 'ದಖ್ಮಾ' ಅಥವಾ 'ಟವರ್ ಆಫ್ ಸೈಲೆನ್ಸ್' ಎಂದು ಸಂಬೋಧಿಸುವ ಇವರು, ಇಲ್ಲಿ ಯಾರಾದರೂ ಮೃತಪಟ್ಟರೆ ಭೌತಿಕ ದೇಹ ಶುದ್ಧೀಕರಿಸುವ ಪ್ರಕ್ರಿಯೆ ಮಾಡುತ್ತಾರೆ. ಮಾನವನ ದೇಹ ಪ್ರಕೃತಿಯ ಕೊಡುಗೆ. ಸತ್ತ ಬಳಿಕ ದೇಹವನ್ನು ಮರಳಿ ಪ್ರಕೃತಿಗೆ ಅರ್ಪಣೆ ಮಾಡುವ ಸಂಪ್ರದಾಯ ಪಾರ್ಸಿ ಧರ್ಮದ್ದು. ಮನುಷ್ಯ ಸತ್ತ ನಂತರ ಪುನಃ ಪ್ರಕೃತಿಯ ಪಾಲಾಗಬೇಕು. ಅಗ್ನಿಸ್ಪರ್ಶ ಮತ್ತು ಸಮಾಧಿ ಮಾಡುವುದರಿಂದ ನೀರು, ಗಾಳಿ ಮತ್ತು ಬೆಂಕಿಯಂತಹ ನೈಸರ್ಗಿಕ ಸಂಪನ್ಮೂಲಗಳನ್ನು ಕಲುಷಿತಗೊಳಿಸಿದಂತಾಗುತ್ತದೆ ಎಂಬುದು ಅವರ ನಂಬಿಕೆ.