ನವದೆಹಲಿ: ಹಿಮಾಚಲ ಪ್ರದೇಶದ ವಿಧಾನಸಭಾ ಸ್ಪೀಕರ್ ಅವರು ನಿಮ್ಮನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಿದ ಕ್ರಮದ ಬಗ್ಗೆ ಹೈಕೋರ್ಟ್‌ಗೆ ಏಕೆ ಹೋಗಲಿಲ್ಲ?. ಸ್ಪೀಕರ್ ಕ್ರಮದಿಂದ ನಿಮ್ಮ ಯಾವ ಮೂಲಭೂತ ಹಕ್ಕನ್ನು ಉಲ್ಲಂಘಿಸಲಾಗಿದೆ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಅನರ್ಹಗೊಂಡ ಆರು ಕಾಂಗ್ರೆಸ್ ಶಾಸಕರಿಗೆ ಪ್ರಶ್ನಿಸಿದೆ.
ಇತ್ತೀಚೆಗೆ ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ವಿಪ್ ಧಿಕ್ಕರಿಸಿ, ಪಕ್ಷದ ಅಭ್ಯರ್ಥಿ ವಿರುದ್ಧ ಮತ ಚಲಾಯಿಸಿದ್ದ ಕಾರಣಕ್ಕಾಗಿ ಸ್ಪೀಕರ್ ಆರು ಕಾಂಗ್ರೆಸ್ ಶಾಸಕರನ್ನು ಅನರ್ಹಗೊಳಿಸಿದ್ದಾರೆ. ಇದನ್ನು ಪ್ರಶ್ನಿಸಿ ಅನರ್ಹ ಶಾಸಕರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ದೀಪಂಕರ್ ದತ್ತಾ ಮತ್ತು ಪ್ರಶಾಂತ್ ಕುಮಾರ್ ಮಿಶ್ರಾ ಅವರನ್ನೊಳಗೊಂಡ ಪೀಠವು, ''ಅರ್ಜಿದಾರರು ಹಿಮಾಚಲ ಪ್ರದೇಶ ಹೈಕೋರ್ಟ್‌ಗೆ ಏಕೆ ಹೋಗಲಿಲ್ಲ'' ಎಂದು ಶಾಸಕರ ಪರ ಹಿರಿಯ ವಕೀಲ ಸತ್ಯಪಾಲ್ ಜೈನ್ ಅವರನ್ನು ಕೇಳಿತು.
ಆಗ 18 ಗಂಟೆಯೊಳಗೆ ಶಾಸಕರನ್ನು ಅನರ್ಹಗೊಳಿಸಿದ ಅಪರೂಪದ ಪ್ರಕರಣಗಳಲ್ಲಿ ಇದೂ ಒಂದಾಗಿದೆ ಎಂದು ಸತ್ಯಪಾಲ್ ಜೈನ್ ಪೀಠದ ವಾದ ಮಂಡಿಸಿದರು. ಈ ಸಂದರ್ಭದಲ್ಲಿ ''ಇಲ್ಲಿ ಯಾವ ಮೂಲಭೂತ ಹಕ್ಕು ಉಲ್ಲಂಘನೆಯಾಗಿದೆ'' ಎಂದು ವಕೀಲರಿಗೆ ನ್ಯಾಯಪೀಠ ಪ್ರಶ್ನಿಸಿತು. ಇದಕ್ಕೆ ಅರ್ಜಿದಾರರು ಜನರಿಂದ ಚುನಾಯಿತರಾಗಿದ್ದಾರೆ ಎಂದು ವಕೀಲರು ಉತ್ತರಿಸಿದರು. ಈ ವೇಳೆ, ''ಇದು ಮೂಲಭೂತ ಹಕ್ಕಲ್ಲ'' ಎಂದು ಪೀಠ ಹೇಳಿತು. ಶಾಸಕರ ಪರ ವಾದವನ್ನು ಆಲಿಸಿದ ನಂತರ ಸುಪ್ರೀಂ ಕೋರ್ಟ್ ಸೋಮವಾರ ಮುಂದಿನ ವಿಚಾರಣೆಗೆ ನಿಗದಿಪಡಿಸಿತು.
ಇದನ್ನೂ ಓದಿ:ಕೇರಳಕ್ಕೆ ಮಾರ್ಚ್ 31ರೊಳಗೆ ವಿಶೇಷ ಪ್ಯಾಕೇಜ್ ಕೊಡುವ ಬಗ್ಗೆ ಪರಿಗಣಿಸಿ: ಕೇಂದ್ರಕ್ಕೆ ಸುಪ್ರೀಂಕೋರ್ಟ್ ಸಲಹೆ
ಹಿಮಾಚಲ ಪ್ರದೇಶದಲ್ಲಿ ಫೆಬ್ರವರಿ 27ರಂದು ಏಕೈಕ ರಾಜ್ಯಸಭೆ ಸ್ಥಾನಕ್ಕೆ ಚುನಾವಣೆ ನಡೆದಿತ್ತು. ಕಾಂಗ್ರೆಸ್ ವಿಧಾನಸಭೆಯ ಸಂಖ್ಯಾಬಲದ ಆಧಾರದ ಮೇಲೆ ಈ ಸ್ಥಾನವನ್ನು ಸುಲಭವಾಗಿ ಗೆಲ್ಲಬಹುದಾಗಿತ್ತು. ಹೀಗಾಗಿ ಪಕ್ಷದಿಂದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರನ್ನು ಚುನಾವಣಾ ಕಣಕ್ಕೆ ಇಳಿಸಿತ್ತು. ಮತ್ತೊಂದೆಡೆ, ಬಿಜೆಪಿ ತನ್ನ ಸಂಖ್ಯಾಬಲ ಕಡಿಮೆ ಇದ್ದರೂ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿತ್ತು. ಇದರಿಂದ ಚುನಾವಣಾ ಜರುಗಿತ್ತು.
ಈ ವೇಳೆ, ಕಾಂಗ್ರೆಸ್ ಶಾಸಕರಾದ ರಾಜಿಂದರ್ ರಾಣಾ, ಸುಧೀರ್ ಶರ್ಮಾ, ಇಂದರ್ ದತ್ ಲಖನ್‌ಪಾಲ್, ದೇವಿಂದರ್ ಕುಮಾರ್ ಭೂಟೂ, ರವಿ ಠಾಕೂರ್ ಮತ್ತು ಚೇತನ್ಯ ಶರ್ಮಾ ಸೇರಿದಂತೆ ಆರು ಜನರು ಬಿಜೆಪಿ ಅಭ್ಯರ್ಥಿಯ ಪರವಾಗಿ ಮತ ಚಲಾಯಿಸಿದ್ದರು. ಇದರ ಪರಿಣಾಮ ಬಿಜೆಪಿ ಅಭ್ಯರ್ಥಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು. ಪಕ್ಷದ ವಿಪ್ ಉಲ್ಲಂಘಿಸಿ ಎದುರಾಳಿ ಅಭ್ಯರ್ಥಿಗೆ ಮತ ಹಾಕಿದ್ದಲ್ಲದೇ, ಈ ಶಾಸಕರು ನಂತರದಲ್ಲಿ ಬಜೆಟ್ ಮೇಲಿನ ಮತದಾನದಿಂದಲೂ ದೂರ ಉಳಿದಿದ್ದರು. ಆದ್ದರಿಂದ ವಿಪ್ ಉಲ್ಲಂಘನೆ ಆಧಾರದ ಮೇಲೆ ಈ ಶಾಸಕರನ್ನು ಶಾಸಕತ್ವದಿಂದ ಅನರ್ಹಗೊಳಿಸಬೇಕು ಎಂದು ಕಾಂಗ್ರೆಸ್ ಪಕ್ಷ ವಿಧಾನಸಭಾ ಸ್ಪೀಕರ್ ಬಳಿ ಅರ್ಜಿ ಸಲ್ಲಿಸಿತ್ತು.
ಇದಾದ ಬಳಿಕ ಫೆಬ್ರವರಿ 29ರಂದು ಆರು ಶಾಸಕರನ್ನು ಸ್ಪೀಕರ್ ಕುಲದೀಪ್ ಸಿಂಗ್ ಪಠಾನಿಯಾ ಅನರ್ಹಗೊಳಿಸಿ ಆದೇಶಿಸಿದ್ದರು. ಸ್ಪೀಕರ್ ಕ್ರಮ ಪ್ರಶ್ನಿಸಿ ಅನರ್ಹ ಶಾಸಕರು ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ಸ್ಪೀಕರ್ ನೋಟಿಸ್‌ಗೆ ಪ್ರತಿಕ್ರಿಯಿಸಲು ಸಾಕಷ್ಟು ಸಮಯ ನೀಡಿಲ್ಲ. ಇದು ಸಹಜ ನ್ಯಾಯದ ಉಲ್ಲಂಘನೆಯಾಗಿದೆ ಎಂದು ಶಾಸಕರು ತಮ್ಮ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಹಿಮಾಚಲ ಪ್ರದೇಶ ಸರ್ಕಾರವು ಶಾಸಕರ ಅನರ್ಹತೆಗೆ ಸಂಬಂಧಿಸಿದಂತೆ ಯಾವುದೇ ಆದೇಶವನ್ನು ಹೊರಡಿಸುವ ಮೊದಲು ವಿಚಾರಣೆ ನಡೆಸುವಂತೆ ಕೋರಿ ಕೇವಿಯಟ್ ಸಲ್ಲಿಸಿದೆ.
ಇದನ್ನೂ ಓದಿ:ಸುಪ್ರೀಂಕೋರ್ಟ್ ಮೊರೆ ಹೋದ ಅನರ್ಹಗೊಂಡ ಹಿಮಾಚಲ ಪ್ರದೇಶದ ಆರು ಶಾಸಕರು