ಕರ್ನಾಟಕ

karnataka

By ETV Bharat Karnataka Team

Published : Mar 14, 2024, 8:38 PM IST

ETV Bharat / bharat

ನೂತನ ಚುನಾವಣಾ ಆಯುಕ್ತರಾಗಿ ಎಸ್‌.ಎಸ್.ಸಂಧು, ಜ್ಞಾನೇಶ್ ಕುಮಾರ್ ನೇಮಕ; ಇವರ ಹಿನ್ನೆಲೆ ಏನು?

ನಿವೃತ್ತ ಐಎಎಸ್ ಅಧಿಕಾರಿಗಳಾದ ಎಸ್‌.ಎಸ್.ಸಂಧು ಮತ್ತು ಜ್ಞಾನೇಶ್ ಕುಮಾರ್ ಕೇಂದ್ರ ಚುನಾವಣಾ ಆಯುಕ್ತರಾಗಿ ನೇಮಕಗೊಂಡಿದ್ದಾರೆ.

Gyanesh Kumar, Sukhbir Sandhu
ನೂತನ ಚುನಾವಣಾ ಆಯುಕ್ತರಾಗಿ ಎಸ್‌.ಎಸ್.ಸಂಧು, ಜ್ಞಾನೇಶ್ ಕುಮಾರ್ ನೇಮಕ

ಹೈದರಾಬಾದ್: ಕೇಂದ್ರ ಚುನಾವಣಾ ಆಯುಕ್ತರನ್ನಾಗಿ ಎಸ್‌.ಎಸ್.ಸಂಧು ಮತ್ತು ಜ್ಞಾನೇಶ್ ಕುಮಾರ್ ಅವರನ್ನು ಕೇಂದ್ರ ಸರ್ಕಾರ ಗುರುವಾರ ನೇಮಕ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಮಿತಿಯು ಇವರಿಬ್ಬರನ್ನು ಚುನಾವಣಾ ಆಯುಕ್ತರೆಂದು ಆಯ್ಕೆ ಮಾಡಿದ್ದು, ಇಬ್ಬರೂ ಕೂಡ ನಿವೃತ್ತ ಐಎಎಸ್ ಅಧಿಕಾರಿಗಳಾಗಿದ್ದಾರೆ.

2024ರ ಲೋಕಸಭಾ ಚುನಾವಣೆಯ ವೇಳಾಪಟ್ಟಿ ಪ್ರಕಟಣೆಗೆ ದಿನಗಣನೆ ಆರಂಭವಾಗಿದೆ. ಆದರೆ, ಇದಕ್ಕೂ ಮೊದಲು ನಡೆದ ಅನಿರೀಕ್ಷಿತ ಬೆಳವಣಿಗೆಗಳಲ್ಲಿ ಚುನಾವಣಾ ಆಯುಕ್ತರಾಗಿದ್ದ ಅರುಣ್ ಗೋಯೆಲ್ ಫೆಬ್ರವರಿ 8ರಂದು ತಮ್ಮ ಸ್ಥಾನಕ್ಕೆ ದಿಢೀರ್​ ರಾಜೀನಾಮೆ ನೀಡಿದ್ದರು. ಇವರ ಅಧಿಕಾರಾವಧಿಯು 2027ರ ಡಿಸೆಂಬರ್ 5ರವರೆಗೆ ಇತ್ತು. ಮುಂದಿನ ವರ್ಷ ಫೆಬ್ರವರಿಯಲ್ಲಿ ಹಾಲಿ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ನಿವೃತ್ತರಾದ ನಂತರ ಅರುಣ್ ಗೋಯೆಲ್ ಈ ಹುದ್ದೆಯನ್ನು ಅಲಂಕರಿಸಬೇಕಿತ್ತು.

ಮತ್ತೊಬ್ಬ ಚುನಾವಣಾ ಆಯುಕ್ತರಾಗಿದ್ದ ಅನುಪ್ ಚಂದ್ರ ಪಾಂಡೆ ಫೆಬ್ರವರಿ 14ರಂದು ನಿವೃತ್ತಿ ಹೊಂದಿದ್ದರು. ಹೀಗಾಗಿ ಚುನಾವಣಾ ಆಯೋಗದಲ್ಲಿ ಈ ಪ್ರಮುಖ ಹುದ್ದೆಗಳು ಖಾಲಿಯಾಗಿದ್ದವು. ಹೊಸ ಚುನಾವಣಾ ಆಯುಕ್ತರನ್ನು ಆಯ್ಕೆ ಮಾಡಲು ಇಂದು ಪ್ರಧಾನಿ ಮೋದಿ ನೇತೃತ್ವದ ಆಯ್ಕೆ ಸಮಿತಿಯು ಇಂದು ಸಭೆ ನಡೆಸಿತ್ತು. ಈ ಸಭೆಯಲ್ಲಿ ಲೋಕಸಭೆಯಲ್ಲಿ ಕಾಂಗ್ರೆಸ್​ ಸಂಸದೀಯ ನಾಯಕರಾದ ಅಧೀರ್ ರಂಜನ್ ಚೌಧರಿ ಕೂಡ ಪಾಲ್ಗೊಂಡಿದ್ದರು. ಹೊಸ ಚುನಾವಣಾ ಆಯುಕ್ತರ ಹುದ್ದೆಗೆ ಎಸ್‌.ಎಸ್.ಸಂಧು ಮತ್ತು ಜ್ಞಾನೇಶ್ ಕುಮಾರ್ ಅವರನ್ನು ಸಮಿತಿ ಶಿಫಾರಸು ಮಾಡಿತ್ತು. ಅಂತೆಯೇ, ಕಾನೂನು ಸಚಿವಾಲಯವು ಇಬ್ಬರು ಅಧಿಕಾರಿಗಳ ನೇಮಕದ ಅಧಿಸೂಚನೆ ಹೊರಡಿಸಿದೆ.

ಚುನಾವಣಾ ಆಯುಕ್ತರ ಹಿನ್ನೆಲೆ: ಚುನಾವಣಾ ಆಯುಕ್ತರಾಗಿ ಆಯ್ಕೆಯಾದ ಸುಖಬೀರ್ ಸಿಂಗ್ ಸಂಧು ನಿವೃತ್ತ ಐಎಎಸ್ ಅಧಿಕಾರಿ. ಇವರು ಉತ್ತರಾಖಂಡದ 17ನೇ ಮುಖ್ಯ ಕಾರ್ಯದರ್ಶಿಯಾಗಿದ್ದರು. 2021ರಲ್ಲಿ ಬಿಜೆಪಿ ಅಧಿಕಾರದಲ್ಲಿ ಪುಷ್ಕರ್ ಸಿಂಗ್ ಧಾಮಿ ಸಿಎಂ ಆದ ನಂತರ ಇವರು ಮುಖ್ಯ ಕಾರ್ಯದರ್ಶಿ ಆಗಿ ನೇಮಕವಾಗಿದ್ದರು. ಅಲ್ಲದೇ, ಸಂಧು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧ್ಯಕ್ಷರೂ ಆಗಿದ್ದರು. ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಉನ್ನತ ಶಿಕ್ಷಣ ಇಲಾಖೆಯಲ್ಲಿ ಹೆಚ್ಚುವರಿ ಕಾರ್ಯದರ್ಶಿಯಾಗಿಯೂ ಕೆಲಸ ಮಾಡಿದ್ದಾರೆ.

ಅಮೃತಸರದ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಸಂಧು ತಮ್ಮ ಎಂಬಿಬಿಎಸ್ ಪೂರ್ಣಗೊಳಿಸಿದ್ದಾರೆ. ಅಮೃತಸರದ ಗುರುನಾನಕ್ ದೇವ್ ವಿಶ್ವವಿದ್ಯಾಲಯದಿಂದ ಇತಿಹಾಸದಲ್ಲಿ ಸ್ನಾತಕೋತ್ತರ ಪದವಿಯನ್ನು ಸಹ ಮಾಡಿದ್ದಾರೆ. ಲುಧಿಯಾನ ಮುನ್ಸಿಪಲ್ ಕಾರ್ಪೊರೇಶನ್‌ನ ಕಮಿಷನರ್ ಆಗಿಯೂ ಕೆಲಸ ಮಾಡಿದ್ದಾರೆ.

ಜ್ಞಾನೇಶ್ ಕುಮಾರ್ ಕೂಡ ನಿವೃತ್ತ ಐಎಎಸ್ ಅಧಿಕಾರಿಯಾಗಿದ್ದಾರೆ. ಇವರು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯದಲ್ಲಿ ಕಾರ್ಯ ನಿರ್ವಹಿಸಿರುವ ಇವರು, ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 2019ರಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿಯನ್ನು ರದ್ದುಗೊಳಿಸಿದಾಗ ಗೃಹ ಸಚಿವಾಲಯದಲ್ಲಿ ಜಮ್ಮು ಮತ್ತು ಕಾಶ್ಮೀರ ಸಮಿತಿಯ ಮುಖ್ಯಸ್ಥರಾಗಿದ್ದರು. ಅಲ್ಲದೇ, ಅಮಿತ್ ಶಾ ಅಧೀನದಲ್ಲಿರುವ ಸಹಕಾರ ಸಚಿವಾಲಯದ ಕಾರ್ಯದರ್ಶಿಯಾಗಿಯೂ ಆಗಿದ್ದರು. ಇದೇ ಹುದ್ದೆಯಲ್ಲಿದ್ದಾಗ ನಿವೃತ್ತಿ ಹೊಂದಿದ್ದರು.

ಇದನ್ನೂ ಓದಿ:ಒಂದು ರಾಷ್ಟ್ರ, ಒಂದು ಚುನಾವಣೆ: 191 ದಿನಗಳಲ್ಲಿ ಅಧ್ಯಯನ ವರದಿ ಸಲ್ಲಿಸಿದ ಕೋವಿಂದ್ ಸಮಿತಿ

ABOUT THE AUTHOR

...view details