ನವದೆಹಲಿ: ದೇಶದ ಬೃಹತ್ ಉದ್ಯಮ ಸಂಸ್ಥೆಗಳಲ್ಲಿ ಒಂದಾಗಿರುವ ಟಾಟಾ ಗ್ರೂಪ್‌ನ ರತನ್ ಟಾಟಾ ಬುಧವಾರ ರಾತ್ರಿ ಇಹಲೋಕ ತ್ಯಜಿಸಿದ್ದಾರೆ. ದೂರದೃಷ್ಟಿ, ದಾರ್ಶನಿಕತೆಯ ವ್ಯಕ್ತಿತ್ವದ ಇವರು ಸಂಸ್ಥೆಯನ್ನು ಮುಗಿಲೆತ್ತರಕ್ಕೆ ಕೊಂಡೊಯ್ದಿದ್ದರು. ಅಷ್ಟು ಮಾತ್ರವಲ್ಲದೇ, ತಮ್ಮ ಸಂಸ್ಥೆಯನ್ನು ಜಾಗತಿಕ ಮಟ್ಟದಲ್ಲಿ ವಿಸ್ತರಿಸಿ ಭಾರತದ ಆರ್ಥಿಕತೆಗೂ ಅಷ್ಟೇ ದೊಡ್ಡ ಮಟ್ಟದ ಕೊಡುಗೆ ನೀಡಿದವರು. 20 ವರ್ಷ ಸಂಸ್ಥೆಯ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದ ಟಾಟಾ, ನಂತರ ವಿಶ್ರಾಂತ ಜೀವನ ನಡೆಸುತ್ತಿದ್ದರು. ಇದೀಗ ನಿಧನರಾಗಿದ್ದು, ಟಾಟಾ ಸಮೂಹವನ್ನು ಮುನ್ನಡೆಸುವ ಹೊಣೆಗಾರಿಕೆ ಯಾರದ್ದು ಎಂಬ ವಿಷಯ ಚರ್ಚೆಯಾಗುತ್ತಿದೆ.
150 ಬಿಲಿಯನ್ ಡಾಲರ್‌ಗೂ ಹೆಚ್ಚು ಮೌಲ್ಯದ ಟಾಟಾ ಗ್ರೂಪ್ ಉದ್ಯಮದ ಮುಂದಿನ ಉತ್ತರಾಧಿಕಾರಿ ಯಾರೆಂಬ ಕುರಿತು ಈಗಾಗಲೇ ಯೋಜನೆ ಸಿದ್ಧಗೊಂಡಿದೆ. 2017ರಲ್ಲಿ ಎನ್.ಚಂದ್ರಶೇಖರನ್ ಅವರು ಟಾಟಾ ಸನ್ಸ್ನ ಅಧ್ಯಕ್ಷರಾಗಿ ನೇಮಕವಾದರು. ಟಾಟಾ ಕುಟುಂಬದ ಇತರೆ ಸದಸ್ಯರು ಕೂಡ ಸಮೂಹದ ಇತರೆ ವಿಭಾಗದ ಉದ್ಯಮಗಳಲ್ಲಿ ತೊಡಗಿಸಿಕೊಂಡಿದ್ದು, ಭವಿಷ್ಯದ ನಾಯಕತ್ವದಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ. ಈ ಪೈಕಿ ಮುಖ್ಯ ವ್ಯಕ್ತಿಗಳು ಇವರು.
ನೊಯೆಲ್ ಟಾಟಾ:ನೊಯೆಲ್ ಟಾಟಾ ಅವರು ನವಲ್ ಟಾಟಾ (ರತನ್ ಟಾಟಾ ತಂದೆ) ಅವರ ಎರಡನೇ ಪತ್ನಿ ಸಿಮೊನ್ ಡುನೊಯೆರ್ ಅವರ ಪುತ್ರ. ಟಾಟಾ ಪರಂಪರೆಯಲ್ಲಿ ನೊಯೆಲ್ ಟಾಟಾ ಪ್ರಮುಖ ವ್ಯಕ್ತಿ. ಇವರ ಮಕ್ಕಳಾದ ಮಾಯಾಮ ನೆವಿಲ್ಲೆ ಮತ್ತು ಲೆಹ್ ಟಾಟಾ ಕೂಡ ಟಾಟಾ ಆಸ್ತಿಗೆ ಸಮರ್ಥ ಉತ್ತರಾಧಿಕಾರಿಯಾಗಬಲ್ಲರು.