ಕೋಲ್ಕತ್ತಾ(ಪಶ್ಚಿಮ ಬಂಗಾಳ):ಈ ಬಾರಿ ಕುತೂಹಲಕ್ಕೆ ಕಾರಣವಾಗಿದ್ದ ಪಶ್ಚಿಮ ಬಂಗಾಳ ಲೋಕಸಮರದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಭಾರೀ ಮುನ್ನಡೆ ಸಾಧಿಸಿದೆ. ಒಟ್ಟು 42 ಕ್ಷೇತ್ರಗಳ ಪೈಕಿ 29 ರಲ್ಲಿ ಟಿಎಂಸಿ ಮುಂದಿದ್ದರೆ, 12 ರಲ್ಲಿ ಬಿಜೆಪಿ ಮತ್ತು ಒಂದರಲ್ಲಿ ಮಾತ್ರ ಕಾಂಗ್ರೆಸ್ ಮುನ್ನಡೆ ಪಡೆದಿದೆ.
ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಭರ್ಜರಿ ಪ್ರಚಾರ ನಡೆಸಿದ್ದರಿಂದ ಈ ಬಾರಿ ಕಮಲ ಕಳೆದ ಬಾರಿಗಿಂತ ಹೆಚ್ಚು ಕ್ಷೇತ್ರದಲ್ಲಿ ಅರಳಲಿದೆ ಎಂದು ಅಂದಾಜಿಸಲಾಗಿತ್ತು. ಎಕ್ಸಿಟ್ ಪೋಲ್ನಲ್ಲಿಯೂ ಬಿಜೆಪಿ ಮುಂದಿತ್ತು. ಆದರೆ ಈಗ ಮತ ಎಣಿಕೆಯಲ್ಲಿ ಬಿಜೆಪಿಗೆ ಹಿನ್ನಡೆಯಾಗಿದೆ. 2019ರಲ್ಲಿ 18 ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿತ್ತು. ಇದೇ ಹಿನ್ನೆಲೆಯಲ್ಲಿ ಈ ಬಾರಿ ಪಶ್ಚಿಮ ಬಂಗಾಳದ ಮೇಲೆ ಕಮಲ ಪಡೆಗೆ ಭಾರೀ ನಿರೀಕ್ಷೆ ಇತ್ತು. ಆದರೆ ಪಶ್ಚಿಮ ಬಂಗಾಳ ಮತದಾರರು ತೀರ್ಪು ಬದಲಿಸಿದ್ದಾರೆ.
2019ರಲ್ಲಿ 22 ಕ್ಷೇತ್ರಗಳಲ್ಲಿ ಟಿಎಂಸಿ ಗೆದ್ದಿತ್ತು. ಆದರೆ ಈ ಬಾರಿ ಹೆಚ್ಚುವರಿಯಾಗಿ 29ರಲ್ಲಿ ಮೇಲುಗೈ ಸಾಧಿಸಿ ಪಶ್ಚಿಮ ರಾಜ್ಯದಲ್ಲಿ ತಾವೇ ಮುಂದು ಎಂಬುದನ್ನು ಮಮತಾ ತೋರಿಸಿದ್ದಾರೆ.