ಕೋಲ್ಕತ್ತಾ (ಪಶ್ಚಿಮ ಬಂಗಾಳ): ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಸಂದೇಶಖಾಲಿಯಲ್ಲಿ ಮಕ್ಕಳ ಮೇಲಿನ ದೌರ್ಜನ್ಯ ಬಗ್ಗೆ ವರದಿಯಾಗಿದೆ. ಇದು ರಾಜಕೀಯ ಸಂಘರ್ಷಕ್ಕೂ ಕಾರಣವಾಗಿದೆ. ಇದೀಗ ಮಕ್ಕಳ ಮೇಲಿನ ದೌರ್ಜನ್ಯ ಕುರಿತು ದೂರುಗಳ ಪರಿಶೀಲನೆ ಮತ್ತು ಸಂತ್ರಸ್ತರ ಸಮಸ್ಯೆ ಆಲಿಸಲು ಪಶ್ಚಿಮ ಬಂಗಾಳ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಆರು ಸದಸ್ಯರ ತಂಡ ಭೇಟಿ ನೀಡಿದೆ.
ಪಡಿತರ ಹಗರಣಕ್ಕೆ ಸಂಬಂಧಿಸಿದಂತೆ ತೃಣಮೂಲ ಕಾಂಗ್ರೆಸ್ ನಾಯಕ ಶೇಖ್ ಶಾಜಹಾನ್ ವಿರುದ್ಧ ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ. ಒಂದು ತಿಂಗಳ ಇದೇ ಹಗರಣದ ತನಿಖೆಗೆಂದು ಸಂದೇಶಖಾಲಿ ಎಂಬ ಗ್ರಾಮದ ಮೇಲೆ ಇಡಿ ಅಧಿಕಾರಿಗಳು ದಾಳಿ ಮಾಡಿದ್ದರು. ಸದ್ಯ ಶೇಖ್ ಶಾಜಹಾನ್ ಇನ್ನೂ ತಲೆಮರೆಸಿಕೊಂಡಿದ್ದಾನೆ. ಆದರೆ, ಇಡಿ ದಾಳಿ ನಂತರದಿಂದ ಸಂದೇಶಖಾಲಿಯಲ್ಲಿ ಉದ್ವಿಗ್ನತೆ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ನಡುವೆ ಮಕ್ಕಳ ಮೇಲಿನ ದೌರ್ಜನ್ಯದ ಕುರಿತು ವರದಿಗಳು ಆಗಿವೆ.
ಅಲ್ಲದೇ, ಗ್ರಾಮಸ್ಥರ ಮೇಲೆ ಕೆಲವು ಟಿಎಂಸಿ ನಾಯಕರು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ಆರೋಪಗಳು ಕೂಡ ಕೇಳಿ ಬಂದಿವೆ. ಇದು ರಾಜಕೀಯ ಸಂಘರ್ಷಕ್ಕೂ ಕಾರಣವಾಗಿದೆ. ಗ್ರಾಮಸ್ಥರ ಮೇಲಿನ ದೌರ್ಜನ್ಯದ ವಿರುದ್ಧ ಪ್ರತಿಭಟನೆಗಳು ಸಹ ನಡೆದಿದೆ. ಮಮತಾ ಬ್ಯಾನರ್ಜಿ ಸರ್ಕಾರದ ವಿರುದ್ಧ ಬಿಜೆಪಿ ಮತ್ತು ಕಾಂಗ್ರೆಸ್ ಮುಖಂಡರು ವಾಗ್ದಾಳಿ ನಡೆಸಿದ್ದಾರೆ.