ಮುಂಬೈ: ಮಹಾರಾಷ್ಟ್ರ ರಾಜಕೀಯದಲ್ಲಿ ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಈ ಬಾರಿ ರಾಜ್ಯದಲ್ಲಿ ಸರ್ಕಾರ ರಚಿಸುವ ಯಾವುದೇ ಮೈತ್ರಿಕೂಟಕ್ಕೆ ತಮ್ಮ ವಂಚಿತ್ ಬಹುಜನ ಆಘಾಡಿ (ವಿಬಿಎ) ಪಕ್ಷದ ಬೆಂಬಲ ನೀಡುವುದಾಗಿ ಪಕ್ಷದ ಅಧ್ಯಕ್ಷ ಪ್ರಕಾಶ್ ಅಂಬೇಡ್ಕರ್ ಘೋಷಿಸಿದ್ದಾರೆ. ಈ ಮೂಲಕ ವಿಬಿಎ ತನ್ನ ಸೈದ್ಧಾಂತಿಕ ನಿಲುವಿನಲ್ಲಿ ಅಚ್ಚರಿಯ ಪರಿವರ್ತನೆ ಮಾಡಿಕೊಂಡಿದೆ.
"ನಾಳಿನ ಫಲಿತಾಂಶದಲ್ಲಿ ವಿಬಿಎ ಪಕ್ಷಕ್ಕೆ ಸಾಕಷ್ಟು ಸಂಖ್ಯೆ ಸ್ಥಾನಗಳು ಸಿಕ್ಕಲ್ಲಿ, ಯಾವ ಮೈತ್ರಿಕೂಟವು ಸರ್ಕಾರ ರಚಿಸಲಿದೆಯೋ ಅವರಿಗೆ ನಾವು ಬೆಂಬಲ ನೀಡಲಿದ್ದೇವೆ. ನಾವು ಸರ್ಕಾರ ರಚಿಸಬಲ್ಲವರೊಂದಿಗೆ ಇರಲು ಬಯಸುತ್ತೇವೆ. ಈ ಬಾರಿ ನಾವು ಅಧಿಕಾರದಲ್ಲಿ ಇರಲು ಬಯಸುತ್ತೇವೆ. ಹಮ್ ಸತ್ತಾ ಮೇ ರೆಹನಾ ಚುನೆಂಗೆ!" ಎಂಬ ವಿಬಿಎ ಅಧ್ಯಕ್ಷ ಪ್ರಕಾಶ್ ಅಂಬೇಡ್ಕರ್ ಅವರ ಪೋಸ್ಟ್ ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಿದೆ.
ಸಾಮಾನ್ಯವಾಗಿ ಸೋಲು ಕಾಣುತ್ತ ಬಂದಿರುವ ವಿಬಿಎ ಈ ಬಾರಿ ಒಂದಿಷ್ಟು ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ. ಹೀಗಾಗಿ ಅಂಬೇಡ್ಕರ್ ಫಲಿತಾಂಶಕ್ಕೂ ಮುನ್ನವೇ ತಮ್ಮ ನಿಲುವನ್ನು ಪ್ರಕಟಿಸಿದ್ದಾರೆ ಎಂದು ಪಕ್ಷದ ಮುಖಂಡರೊಬ್ಬರು ತಿಳಿಸಿದ್ದಾರೆ. ತನ್ನ ಹೊಸ ನಿಲುವಿನಿಂದ ವಿಬಿಎ ಶಿವಸೇನೆ-ಭಾರತೀಯ ಜನತಾ ಪಕ್ಷ-ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ಆಡಳಿತಾರೂಢ ಮಹಾಯುತಿ ಮತ್ತು ಪ್ರತಿಪಕ್ಷ ಕಾಂಗ್ರೆಸ್-ಶಿವಸೇನೆ (ಯುಬಿಟಿ) -ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎಸ್ ಪಿ)ಗಳನ್ನು ಒಳಗೊಂಡ ಮಹಾವಿಕಾಸ ಆಘಾಡಿ ಈ ಎರಡೂ ಮೈತ್ರಿಕೂಟಗಳಿಂದ ರಾಜಕೀಯವಾಗಿ ಬೇಡಿಕೆ ಪಡೆದುಕೊಳ್ಳುವ ನಿರೀಕ್ಷೆಯಿದೆ.