ಜಾರ್ಖಂಡ್:ಜಾರ್ಖಂಡ್ನ15 ಜಿಲ್ಲೆಗಳ 43 ವಿಧಾನಸಭಾ ಕ್ಷೇತ್ರಗಳಲ್ಲಿ ಇಂದು ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದ್ದು, ಸಂಜೆ 5 ಗಂಟೆಯವರೆಗೆ ನಡೆಯಲಿದೆ. 31 ಕ್ಷೇತ್ರಗಳ ವ್ಯಾಪ್ತಿಯ 950 ಬೂತ್‌ಗಳಲ್ಲಿ ಸಂಜೆ 4 ಗಂಟೆಗೆ ಮತದಾನ ಮುಕ್ತಾಯವಾಗಲಿದೆ. ಶಾಂತಿಯುತ ಮತ್ತು ನ್ಯಾಯಸಮ್ಮತ ಮತದಾನಕ್ಕೆ ಸೂಕ್ತ ವ್ಯವಸ್ಥೆ ಮಾಡಿರುವುದಾಗಿ ಭಾರತೀಯ ಚುನಾವಣಾ ಆಯೋಗ ಈಗಾಗಲೇ ತಿಳಿಸಿದೆ.
ಪ್ರಧಾನಿ ನರೇಂದ್ರ ಮೋದಿ ತಮ್ಮ ಎಕ್ಸ್ ಪೋಸ್ಟ್‌ನಲ್ಲಿ, ಮತದಾರರು ಮತದಾನದಲ್ಲಿ ಪೂರ್ಣ ಉತ್ಸಾಹದಿಂದ ಪಾಲ್ಗೊಳ್ಳುವಂತೆ ಮನವಿ ಮಾಡಿದ್ದಾರೆ.
ರಾಜ್ಯದ 81 ವಿಧಾನಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದಲ್ಲಿ ರಾಂಚಿ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳು ಸೇರಿದಂತೆ ಒಟ್ಟು 43 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ.
1,37,10,717 ಮತದಾರರು ಚುನಾವಣೆಗೆ ಸ್ಪರ್ಧಿಸಿರುವ ಒಟ್ಟು 683 ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸಲಿದ್ದಾರೆ. ಒಟ್ಟು ಮತದಾರರಲ್ಲಿ 68,73,455 ಪುರುಷರು, 68,36,959 ಮಹಿಳೆಯರು ಮತ್ತು 303 ತೃತೀಯಲಿಂಗಿಗಳು ಸೇರಿದ್ದಾರೆ.
ಆಯೋಗವು ಮೊದಲ ಹಂತಕ್ಕೆ 15,344 ಮತಗಟ್ಟೆಗಳನ್ನು ಸ್ಥಾಪಿಸಿದೆ. ಈ ಪೈಕಿ ಗ್ರಾಮೀಣ ಪ್ರದೇಶದಲ್ಲಿ 12,716 ಹಾಗೂ ನಗರ ಪ್ರದೇಶದಲ್ಲಿ 2,628 ಬೂತ್‌ಗಳನ್ನು ಸ್ಥಾಪಿಸಲಾಗಿದೆ. ಮತದಾನಕ್ಕೂ ಮುನ್ನ ಜಾರ್ಖಂಡ್ನ ವಿವಿಧ ಮತಗಟ್ಟೆಗಳಲ್ಲಿ ಅಣಕು ಮತದಾನ ನಡೆಸಲಾಯಿತು. ಮಹಿಳೆಯರು ಸೇರಿದಂತೆ ಮತದಾರರು ಉತ್ಸಾಹದಿಂದ ಉದ್ದನೆಯ ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಲು ಕಾಯುತ್ತಿರುವ ದೃಶ್ಯಗಳು ಕಂಡುಬರುತ್ತಿವೆ.
ಅಣಕು ಮತದಾನದ ಸಮಯದಲ್ಲಿ ಕೆಲವು ಮತಗಟ್ಟೆಗಳಲ್ಲಿ ತಾಂತ್ರಿಕ ದೋಷ ಕಂಡುಬಂದಿದ್ದು, ಇವಿಎಂಗಳನ್ನು ಬದಲಾಯಿಸಬೇಕಾಗಿ ಬಂದಿತು.
ಲೋಹರ್ಡಗಾ ಜಿಲ್ಲೆಯಲ್ಲಿ ಶಾಂತಿಯುತವಾಗಿ ಮತದಾನ ಆರಂಭವಾಗಿದೆ. ಬಿಗಿ ಭದ್ರತೆಯ ನಡುವೆ ಮತದಾರರು ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡುತ್ತಿದ್ದಾರೆ. ನಿಗದಿತ ಸಮಯಕ್ಕೆ ಮತದಾನ ಪ್ರಕ್ರಿಯೆ ಆರಂಭವಾಗಿದೆ. ಎಲ್ಲಾ ಮತಗಟ್ಟೆಗಳಲ್ಲಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 428 ಮತಗಟ್ಟೆಗಳಲ್ಲಿ ಮತದಾನ ಪ್ರಕ್ರಿಯೆ ನಡೆಯುತ್ತಿದೆ.
ರಾಂಚಿಯ ಮತಗಟ್ಟೆಯಲ್ಲಿ ಜಾರ್ಖಂಡ್ನ ರಾಜ್ಯಪಾಲ ಸಂತೋಷ್ ಕುಮಾರ್ ಗಂಗ್ವಾರ್ ಮತದಾನ ಮಾಡಿದರು. ಮತ ಚಲಾಯಿಸಿ ಮಾತನಾಡಿದ ಅವರು, "ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ತಮ್ಮ ಹಕ್ಕು ಚಲಾಯಿಸುವಂತೆ ಮನವಿ ಮಾಡುತ್ತೇನೆ" ಎಂದರು.
ಇದನ್ನೂ ಓದಿ:ಜಾರ್ಖಂಡ್ ವಿಧಾನಸಭೆ ಚುನಾವಣೆ: 43 ಕ್ಷೇತ್ರಗಳಲ್ಲಿ ಇಂದು ಮೊದಲ ಹಂತದ ಮತದಾನ