ಶಿಮ್ಲಾ: ಎರಡು ವರ್ಷಗಳ ಬಳಿಕ ಹಿಮಾಚಲಪ್ರದೇಶದಲ್ಲಿ ಮತ್ತೆ ಹಿಮಪಾತ ಕಾಣಸಿಕೊಂಡಿದೆ. ಎರಡು ದಿನಗಳಿಂದ ಭಾರಿ ಹಿಮಪಾತ ಆಗುತ್ತಿದ್ದು ಇಂದು ಕೂಡು ಮುಂದುವರೆದಿದೆ. ಇಲ್ಲಿಯ ರಸ್ತೆಗಳೂ ಹಿಮದಿಂದ ಆವೃತ್ತವಾಗಿದ್ದು ಸುಮಾರು 700ಕ್ಕೂ ಹೆಚ್ಚಿನ ರಸ್ತೆಗಳಲ್ಲಿ ಸಂಚಾರ ಸ್ಥಗಿತಗೊಳಿಸಲಾಗಿದೆ.
ಒಂದೆಡೆ ಎರಡು ವರ್ಷಗಳ ಬಳಿಕ ಹಿಮಪಾತವಾಗಿದ್ದರಿಂದ ಪ್ರವಾಸಿಗರು ಮತ್ತು ಸ್ಥಳೀಯರು ಸಂಭ್ರಮ ಪಡುತ್ತಿದ್ದರೆ ಮತ್ತೊಂದೆಡೆ ಹಿಮಪಾತದಿಂದ ರಸ್ತೆಗಳು ಬಂದಾಗಿದ್ದು ಜನ ಜೀವನ ಅಸ್ತವ್ಯಸ್ತವಾಗಿದೆ. ಕಳೆದ ಎರಡು ದಿನಗಳಿಂದ ನಿರಂತರ ಹಿಮಪಾತವಾಗುತ್ತಿರುವುದರಿಂದ ಹಲವು ಪ್ರದೇಶಗಳಲ್ಲಿ ರಸ್ತೆಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ. ಒಟ್ಟಾರೆ ರಾಜ್ಯದಲ್ಲಿ 720 ರಸ್ತೆಗಳಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದೆ. ಚಂಬಾ ಜಿಲ್ಲೆಯಲ್ಲಿ 163, ಶಿಮ್ಲಾದಲ್ಲಿ 250, ಲಾಹೌಲ್ ಸ್ಪಿತಿಯಲ್ಲಿ 139, ಕುಲು ಮತ್ತು ಇತರ ಜಿಲ್ಲೆಗಳಲ್ಲಿ 67 ರಸ್ತೆಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ.
ಸದ್ಯ ರಸ್ತೆಮೇಲಿನ ಹಿಮ ತೆರವು ಮಾಡುವ ಕಾರ್ಯವನ್ನು ಕೈಗೊಳ್ಳಲಾಗಿದೆ. ಇದಕ್ಕಾಗಿ ಸುಮಾರು 250 ಯಂತ್ರೋಪಕರಣಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಮಧ್ಯಾಹ್ನ 12 ಗಂಟೆ ವೇಳೆಗೆ 300 ರಸ್ತೆಗಳಲ್ಲಿನ ಹಿಮ ತೆರವು ಮಾಡಲಾಗಿದ್ದು, ವಾಹನಗಳ ಸಂಚಾರ ಆರಂಭಗೊಂಡಿವೆ. ಮತ್ತೊಂದೆಡೆ ಈ ಭಾರಿ ಹಿಮಪಾತದಿಂದಾಗಿ ರಾಜ್ಯಾದ್ಯಂತ 2200ಕ್ಕೂ ಹೆಚ್ಚು ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗಳು ಹಾನಿಗೊಳಗಾಗಿವೆ. ಇದರಿಂದ ಹಲವು ಗ್ರಾಮಗಳಲ್ಲಿ ವಿದ್ಯುತ್ ಕಡಿತಗೊಂಡಿದ್ದು ಎರಡು ದಿನಗಳಿಂದ ಕತ್ತಲಲ್ಲಿ ಮುಳುಗಿವೆ. ಹಿಮಪಾತದಿಂದ ಈ ವರೆಗೂ ಒಟ್ಟು 72 ಕೋಟಿ ರೂ. ನಷ್ಟು ಹಾನಿ ಸಂಭವಿಸಿದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.