ನವದೆಹಲಿ: ದೀರ್ಘಕಾಲದ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಸಿಪಿಐ (ಎಂ)ನ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೊರಿ ನಿಧನರಾಗಿದ್ದಾರೆ. 72 ವಯಸ್ಸಿನ ಅವರು ದೆಹಲಿಯ ಏಮ್ಸ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅಲ್ಲಿಯೇ ಅವರು ಇಹಲೋಕ ತ್ಯಜಿಸಿದ್ದಾರೆ ಎಂದು ಆಸ್ಪತ್ರೆ ಮತ್ತು ಪಕ್ಷದ ಮೂಲಗಳು ತಿಳಿಸಿವೆ.
ಕಳೆದ ಕೆಲವು ದಿನಗಳಿಂದ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಶ್ವಾಸಕೋಸ ಸಮಸ್ಯೆಗೆ ಒಳಗಾಗಿದ್ದ ಅವರಿಗೆ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗಿತ್ತು. ಅವರು ಗುರುವಾರ ಮಧ್ಯಾಹ್ನ 3.05ಕ್ಕೆ ದೆಹಲಿಯ ಏಮ್ಸ್ನ ಐಸಿಯುನಲ್ಲಿ ಸಾವನ್ನಪ್ಪಿದ್ದಾರೆ.
ನ್ಯೂಮೋನಿಯಾ ರೀತಿಯ ಶ್ವಾಸಕೋಶ ಸೋಂಕಿಗೆ ಒಳಗಾಗಿದ್ದ ಅವರು ಆಗಸ್ಟ್ 19ರಂದು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಸ್ಥಿತಿ ಗಂಭೀರವಾಗಿದ್ದು, ಆಮ್ಲಜನಕದ ಬೆಂಬಲವನ್ನು ಅವರಿಗೆ ನೀಡಲಾಗಿತ್ತು. ಶ್ವಾಸಕೋಶದಲ್ಲಿ ಫಂಗಲ್ ಸೋಂಕು ಉಂಟಾಗಿತ್ತು ಎಂದು ಮೂಲಗಳು ತಿಳಿಸಿವೆ.