ನವದೆಹಲಿ: ಉತ್ತರ ಪ್ರದೇಶದ ಅಯೋಧ್ಯೆಯ ರಾಮ ಮಂದಿರದ ಬಾಲ ರಾಮನಿಗೆ ಸೂರ್ಯ ರಶ್ಮಿಯ ತಿಲಕದ ವಿಸ್ಮಯ ಇಂದು ಜರುಗಿದೆ. ಲೋಕಸಭೆ ಚುನಾವಣೆಯ ಪ್ರಚಾರದ ನಡುವೆಯೂ ಪ್ರಧಾನಿ ಮೋದಿ ಲೈವ್ ಮೂಲಕ ಸೂರ್ಯ ತಿಲಕದ ಕ್ಷಣವನ್ನು ಕಣ್ತುಂಬಿಕೊಂಡರು. ಇದರ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಮೋದಿ ಹಂಚಿಕೊಂಡಿದ್ದಾರೆ.
ಪ್ರಧಾನಿ ಮೋದಿ ಚುನಾವಣೆ ಪ್ರಚಾರದಲ್ಲಿ ಬಿಡುವಿಲ್ಲದೆ ತೊಡಗಿಸಿಕೊಂಡಿದ್ದಾರೆ. ಇಂದು ಮತಪ್ರಚಾರಕ್ಕಾಗಿ ಅಸ್ಸೋಂ ಪ್ರವಾಸ ಕೈಗೊಂಡಿದ್ದರು. ನಲ್ಬರಿಯಲ್ಲಿ ಹಮ್ಮಿಕೊಂಡಿದ್ದ ಸಾರ್ವಜನಿಕ ಸಭೆಯಿಂದ ಹಿಂದಿರುಗುವಾಗ ವಿಮಾನದಲ್ಲೇ ಆಯೋಧ್ಯೆಯಲ್ಲಿ ನಡೆದ ವಿಸ್ಮಯ ಕ್ಷಣವನ್ನು ವೀಕ್ಷಿಸಿದ್ದಾರೆ. ಇದರ ಅನುಭವವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಅವರು, ಸೂರ್ಯ ತಿಲಕ ಮತ್ತು ಅದರಿಂದ ಹೊರಹೊಮ್ಮುವ ಆಧ್ಯಾತ್ಮಿಕ ಶಕ್ತಿಯು ವಿಕಸಿತ ಭಾರತ್ ಮಿಷನ್‌ನ ಪ್ರತಿಜ್ಞೆಯನ್ನು ಉತ್ತೇಜಿಸುತ್ತದೆ ಎಂದು ಹೇಳಿದ್ದಾರೆ. ಸೂರ್ಯ ತಿಲಕದ ಕ್ಷಣವನ್ನು ಕಣ್ತುಂಬಿಕೊಳ್ಳುವ ವೇಳೆ ಮೋದಿ ತಮ್ಮ ಪಾದರಕ್ಷೆಗಳನ್ನು ಬಿಟ್ಟಿದ್ದರು.
''ನನ್ನ ನಲ್ಬರಿ ರ‍್ಯಾಲಿ ನಂತರ ನಾನು ರಾಮ್ ಲಲ್ಲಾನ ಸೂರ್ಯ ತಿಲಕವನ್ನು ವೀಕ್ಷಿಸಿದೆ. ಕೋಟ್ಯಂತರ ಭಾರತೀಯರಂತೆ ಇದು ನನಗೆ ತುಂಬಾ ಭಾವನಾತ್ಮಕ ಕ್ಷಣವಾಗಿದೆ. ಅಯೋಧ್ಯೆಯಲ್ಲಿ ಭವ್ಯವಾದ ರಾಮನವಮಿ ಐತಿಹಾಸಿಕವಾಗಿದೆ. ಈ ಸೂರ್ಯ ತಿಲಕವು ನಮ್ಮ ಜೀವನಕ್ಕೆ ಶಕ್ತಿಯನ್ನು ತರಲಿ ಮತ್ತು ನಮ್ಮ ರಾಷ್ಟ್ರವು ವೈಭವದ ಹೊಸ ಎತ್ತರವನ್ನು ಏರಲು ಪ್ರೇರೇಪಿಸಲಿ'' ಎಂದು ಪ್ರಧಾನಿ ಮೋದಿ ತಮ್ಮ 'ಎಕ್ಸ್' ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.