ಅಲ್ವಾರ್, ರಾಜಸ್ಥಾನ:ಇಂದು ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಶಿಕ್ಷಣ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಈಗೀಗ ಬಹುತೇಕ ಪಾಲಕರು ತಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮ ಶಾಲೆಗಳಿಗೆ ಕಳುಹಿಸುತ್ತಿದ್ದಾರೆ. ಈ ನಡುವೆ ರಾಜಸ್ಥಾನದ ಅಲ್ವಾರ್ದಲ್ಲಿ ಸಂಸ್ಕೃತ ವೇದ ಪಾಠ ಶಾಲೆಯು ಪುರಾತನ ಹಾಗೂ ಐತಿಹಾಸಿಕ ವಿಧಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ಯುವಕರ ಕನಸುಗಳನ್ನು ನನಸಾಗಿಸಲು ಕೆಲಸ ಮಾಡುತ್ತಿದೆ.
ಅಲ್ವಾರ್ನ ಮಧುಸೂದನ ವೇದ ವಿದ್ಯಾಲಯದ ಅನೇಕ ವಿದ್ಯಾರ್ಥಿಗಳು ಸರ್ಕಾರಿ ಉದ್ಯೋಗಗಳನ್ನು ಪಡೆಯುವ ಮೂಲಕ ಗಮನ ಸೆಳೆದಿದ್ದಾರೆ. ಅಲ್ವಾರ್ ಮಾತ್ರವಲ್ಲದೇ ಇತರ ರಾಜ್ಯಗಳ ವಿದ್ಯಾರ್ಥಿಗಳು ಸಹ ಈ ಶಾಲೆಗೆ ಕಲಿಯಲು ಬರುತ್ತಾರೆ. ಈ ವೇದ ವಿದ್ಯಾಲಯವನ್ನು 2004 ರಲ್ಲಿ ಸ್ಥಾಪಿಸಲಾಗಿದೆ. 2009 ರಲ್ಲಿ ಇದು ಕೇಂದ್ರ ಶಿಕ್ಷಣ ಇಲಾಖೆಯಿಂದ ಮಾನ್ಯತೆ ಪಡೆದುಕೊಂಡಿದೆ.
21 ವಿದ್ಯಾರ್ಥಿಗಳಿಂದ ಆರಂಭವಾದ ಶಾಲೆ:ವಿದ್ಯಾರ್ಥಿಯೊಬ್ಬ ವೇದ ಶಿಕ್ಷಣ ಪಡೆದಾಗ ಆತನ ನೈತಿಕತೆ, ಚಾರಿತ್ರ್ಯ ಅತ್ಯುತ್ತಮ ಮಟ್ಟದಲ್ಲಿರುತ್ತದೆ. ವೇದ ವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಇಲ್ಲಿ ಸಹಜ ಹಾಗೂ ಸಾಧಾರಣ ಜೀವನ ನಡೆಸುವುದು ಹೇಗೆ ಎಂದು ಕಲಿಸಿಕೊಡಲಾಗುತ್ತದೆ. 2004 ರ ಅಕ್ಟೋಬರ್‌ನಲ್ಲಿ ನಗರದ ಕಲಾ ಕುವಾನ್‌ನಲ್ಲಿರುವ ರಾಮಕೃಷ್ಣ ಕಾಲೋನಿಯಲ್ಲಿ ಮಧುಸೂದನ ವೇದ ವಿದ್ಯಾಲಯವನ್ನು ಪ್ರಾರಂಭಿಸಲಾಯಿತು ಎಂದು ವೆಂಕಟೇಶ ದಿವ್ಯಧಾಮ ಟ್ರಸ್ಟ್ ಅಧ್ಯಕ್ಷ ಸ್ವಾಮಿ ಸುದರ್ಶನಾಚಾರ್ಯ ಮಹಾರಾಜ್ ಹೇಳಿದರು.
ಪ್ರಾರಂಭದಲ್ಲಿ ಈ ಶಾಲೆ ಹಲವಾರು ಸಂಕಷ್ಟಗಳನ್ನು ಎದುರಿಸಬೇಕಾಯಿತು. ಆ ಸಮಯದಲ್ಲಿ ಶಾಲೆ ನಡೆಸಲು, ದಾನಿಗಳಿಂದ ನೆರವು ಕೇಳಲಾಯಿತು. ನಗರದಾದ್ಯಂತ ಸಂಚರಿಸಿ ಪ್ರತಿ ಕುಟುಂಬದಿಂದ ಒಂದೊಂದು ರೂಪಾಯಿ ಸಂಗ್ರಹಿಸಿ ಹುಂಡಿಗೆ ಹಾಕಿಸಿಕೊಳ್ಳಲಾಯಿತು. 21 ವಿದ್ಯಾರ್ಥಿಗಳಿಂದ ಶುರುವಾದ ಈ ಶಾಲೆಯಲ್ಲಿ ಈಗ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಣ ಪಡೆದುಕೊಳ್ಳುತ್ತಿದ್ದಾರೆ.
ಇಲ್ಲಿ ಓದಿದ ಹಲವರಿಗೆ ಸರ್ಕಾರಿ ನೌಕರಿ: 2009 ರಲ್ಲಿ ಈ ಶಾಲೆಗೆ ಭಾರತ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದಿಂದ ಮಾನ್ಯತೆ ಸಿಕ್ಕಿತು. ಈ ಶಾಲೆಯು ಸಾಂಪ್ರದಾಯಿಕ ರೀತಿಯಲ್ಲಿ ವೇದ ಶಿಕ್ಷಣವನ್ನು ನೀಡುತ್ತಿದೆ ಅಂತಾರೆ ಸ್ವಾಮಿ ಸುದರ್ಶನಾಚಾರ್ಯ ಮಹಾರಾಜ್ . ಅಲ್ವಾರ್ ನಿಂದ ಮಾತ್ರವಲ್ಲದೇ ಭಾರತದ ವಿವಿಧ ರಾಜ್ಯಗಳಿಂದ ವಿದ್ಯಾರ್ಥಿಗಳು ಇಲ್ಲಿಗೆ ಶಿಕ್ಷಣ ಪಡೆಯಲು ಬರುತ್ತಾರೆ. ಇಲ್ಲಿ ಕಲಿತ ಹಲವರು, ಸರ್ಕಾರಿ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಮಧುಸೂದನ ವೇದ ವಿದ್ಯಾಲಯದಲ್ಲಿ ಓದಿದ ವಿದ್ಯಾರ್ಥಿಗಳು ಸರಕಾರಿ ಸೇವೆಗೂ ಆಯ್ಕೆಯಾಗುತ್ತಿದ್ದಾರೆ ಎಂದು ಸ್ವಾಮಿ ಸುದರ್ಶನಾಚಾರ್ಯ ಹೇಳಿದರು.
2008 ರಲ್ಲಿ ಜಾರ್ಖಂಡ್‌ನ ವಿದ್ಯಾರ್ಥಿಯೊಬ್ಬರು ಸರ್ಕಾರಿ ಇಲಾಖೆಯ ನೌಕರಿಗೆ ಆಯ್ಕೆಯಾಗಿದ್ದಾರೆ ಎಂದು ಸುದರ್ಶನಾಚಾರ್ಯ ಹೇಳಿದರು. ಇದಾದ ನಂತರ ಅನೇಕ ವಿದ್ಯಾರ್ಥಿಗಳು ಧಾರ್ಮಿಕ ಗುರುಗಳ ಹುದ್ದೆಗೆ ಆಯ್ಕೆಯಾಗಿದ್ದಾರೆ. ವೇದ ಶಿಕ್ಷಣವನ್ನು ಪಡೆದ ನಂತರ, ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ಬೇರೆ ಯಾವುದೇ ಕ್ಷೇತ್ರದಲ್ಲಿಯೂ ರೂಪಿಸಿಕೊಳ್ಳಬಹುದಾಗಿದೆ ಅಂತಾರೆ ಅವರು.
ವೇದ ವಿದ್ಯಾಲಯದಿಂದ ಕೇವಲ ವಿದ್ವತ್, ಸಂಸ್ಕಾರ ಮಾತ್ರ ಸಾಧ್ಯ ಎಂಬ ತಪ್ಪು ಕಲ್ಪನೆ ಜನರ ಮನಸ್ಸಿನಲ್ಲಿದೆ. ಆದರೆ, ವೇದ ಶಿಕ್ಷಣ ಪಡೆದ ನಂತರ ಯಾವುದೇ ಕ್ಷೇತ್ರದಲ್ಲಿ ವೃತ್ತಿ ಮಾಡಬಹುದು. ಉದಾಹರಣೆಗೆ, ವೇದ ವಿದ್ಯಾಲಯದಲ್ಲಿ ಕಲಿತ ಅನೇಕ ವಿದ್ಯಾರ್ಥಿಗಳು ಇಂದು ಸ್ವಂತ ಸಂಸ್ಥೆಗಳನ್ನು ನಡೆಸುತ್ತಿದ್ದಾರೆ. ಅನೇಕರು ಮರಳಿ ಇಲ್ಲಿಗೆ ಬಂದು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲು ಶುರು ಮಾಡಿದ್ದಾರೆ. ಫಿಜಿಯ ರಾಯಭಾರ ಕಚೇರಿಯಲ್ಲಿ ವಿದ್ಯಾರ್ಥಿಯೊಬ್ಬರು ಪ್ರಾರ್ಥನೆ ಮತ್ತು ಆಚರಣೆಗಳನ್ನು ಹೇಳಿಕೊಡುತ್ತಿದ್ದಾರೆ. ಭಾರತದ ಸುಮಾರು 100 ದೇವಾಲಯಗಳಲ್ಲಿ, ವೇದ ವಿದ್ಯಾಲಯದಿಂದ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳು ಭಗವದ್ ಪ್ರವಚನಗಳನ್ನು ನೀಡುತ್ತಿದ್ದಾರೆ ಎಂದು ಸ್ವಾಮಿ ಸುದರ್ಶನಾಚಾರ್ಯ ಮಾಹಿತಿ ನೀಡಿದರು.
ವಿದ್ಯಾರ್ಥಿಗಳಿಗೆ ಉಚಿತ ಸೌಲಭ್ಯ:ಈ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಕೆಲವು ನಿಯಮಗಳನ್ನು ರೂಪಿಸಲಾಗಿದೆ ಎಂದು ಸ್ವಾಮಿ ಸುದರ್ಶನಾಚಾರ್ಯ ಹೇಳಿದ್ದಾರೆ. ಇಲ್ಲಿ ವಿದ್ಯಾಭ್ಯಾಸ ಆರಂಭಿಸಲು ಕನಿಷ್ಠ 12 ಹಾಗೂ ಗರಿಷ್ಠ 14 ವರ್ಷಗಳಾಗಿರಬೇಕು. ಇದಲ್ಲದೆ ಇಲ್ಲಿ ದಾಖಲಾಗುವ ವಿದ್ಯಾರ್ಥಿಗಳು ಭಾರತೀಯ ಸಾಂಪ್ರದಾಯಿಕ ಉಡುಗೆಗಳಾದ ಧೋತಿ ಮತ್ತು ಕುರ್ತಾ ಧರಿಸುವುದು ಕಡ್ಡಾಯವಾಗಿದೆ. ಶಾಲೆಯಲ್ಲಿ ದೇವರ ಅಡುಗೆ ಮನೆಯಿಂದ ತಯಾರಿಸಿದ ಆಹಾರವನ್ನೇ ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ. ಕಾಲಕಾಲಕ್ಕೆ ಇತರ ತಿಂಡಿಗಳನ್ನು ಸಹ ವಿದ್ಯಾರ್ಥಿಗಳಿಗೆ ಸಿದ್ಧಪಡಿಸಲಾಗುತ್ತದೆ. ಇಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಎಲ್ಲಾ ಸೌಲಭ್ಯಗಳನ್ನು ಉಚಿತವಾಗಿ ನೀಡಲಾಗುವುದು ಮತ್ತು ಚಳಿಗಾಲದಲ್ಲಿ ಬೆಚ್ಚಗಿನ ಬಟ್ಟೆಗಳನ್ನು ಸಹ ವಿತರಿಸಲಾಗುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಇದನ್ನು ಓದಿ:ಜ.13ರಿಂದ ಕುಂಭಮೇಳ: ಸಿದ್ಧತೆ ಬಹುತೇಕ ಪೂರ್ಣ, 40 ಕೋಟಿ ಜನರ ಆಗಮನ ನಿರೀಕ್ಷೆ