ಮಥುರಾ (ಉತ್ತರ ಪ್ರದೇಶ): ಸ್ನೇಹ, ಮಾನವೀಯತೆ ಎಂಬುದು ಅನೇಕ ಬಾರಿ ರಕ್ತ ಸಂಬಂಧಗಳಿಗೂ ಮೀರಿದ್ದು ಎಂಬುದು ಸಾಬೀತಾಗಿದೆ. ಇದೇ ರೀತಿಯ ಘಟನೆಗೆ ಸ್ನೇಹಿತರು ಸಾಕ್ಷಿಯಾಗಿದ್ದಾರೆ. ಮಗಳ ಮದುವೆಗೆ ಇನ್ನೇನು ಎರಡು ದಿನ ಬಾಕಿ ಇದೆ ಎನ್ನುವಾಗ ಸಾವನ್ನಪ್ಪಿದ ತಮ್ಮ ಸಹೋದ್ಯೋಗಿ ಮಗಳ ಮದುವೆಯನ್ನು ಮಾಜಿ ಯೋಧನ ಸ್ನೇಹಿತರು ಸೇರಿ ಮಾಡಿದ್ದಲ್ಲದೇ, ತಂದೆ ಸ್ಥಾನದಲ್ಲಿ ನಿಂತು ಕನ್ಯಾದಾನ ಮಾಡಿ ಇತರರಿಗೆ ಮಾದರಿಯಾಗಿದ್ದಾರೆ.
ಏನಿದು ಘಟನೆ : ಮಂತ್ ಪೊಲೀಸ್ ಠಾಣೆಯ ನಿವೃತ್ತ ನೌಕರ ದೇವೇಂದ್ರ ಸಿಂಗ್(48) ಮಗಳ ಮದುವೆ ಇದೇ ಶನಿವಾರ ನಿಶ್ಚಯವಾಗಿತ್ತು. ಆದರೆ ದುರಾದೃಷ್ಟವಶಾತ್ ದೇವೇಂದ್ರ ಸಿಂಗ್ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದರು. ಮದುವೆ ಸಂಭ್ರಮದಲ್ಲಿದ್ದ ಮನೆಯಲ್ಲಿ ಸೂತಕದ ವಾತಾವರಣ ನಿರ್ಮಾಣವಾಯಿತು. ಹಸೆಮಣೆ ಏರಬೇಕಿದ್ದ ವಧು ತಂದೆ ಸಾವಿನ ಆಘಾತದಿಂದ ಮದುವೆಯೇ ಬೇಡ ಎಂದು ನಿರ್ಧರಿಸಿದರು.
ಸಂಭ್ರಮದ ಮನೆಯೊಂದು ಸಾವಿನ ಮನೆಯಾಗಿ ನಿರ್ಮಾಣವಾಯಿತು. ಇದೆಲ್ಲವನ್ನು ಮರೆತು ಮದುವೆ ಮಾಡೋಣ ಎಂದರೆ, ಮಗಳಿಗೆ ಕನ್ಯಾದಾನ ಮಾಡುವವರು ಯಾರು ಎಂಬ ಪ್ರಶ್ನೆ ಕೂಡ ಎದುರಾಗಿ, ಮದುವೆ ಕಾರ್ಯ ಅರ್ಧದಲ್ಲಿಯೇ ನಿಂತಿತು.