ಲಕ್ನೋ (ಉತ್ತರ ಪ್ರದೇಶ): ಹಿಂಸಾಚಾರಕ್ಕೆ ಒಳಗಾಗಿರುವ ಸಂಭಾಲ್ ಕ್ಷೇತ್ರಕ್ಕೆ ಹೊರಟಿದ್ದ 15 ಸದಸ್ಯರ ತಂಡದ ಸಮಾಜವಾದಿ ಪಕ್ಷದ ನಿಯೋಗವನ್ನು ಉತ್ತರ ಪ್ರದೇಶ ಪೊಲೀಸರು ತಡೆದಿದ್ದಾರೆ.
ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಅವರ ಸೂಚನೆ ಮೇರೆಗೆ ಈ ಕ್ರಮಕ್ಕೆ ಮುಂದಾಗಲಾಗಿದೆ. ಉತ್ತರ ಪ್ರದೇಶ ವಿಪಕ್ಷ ನಿಯೋಗ ಸಂಭಾಲ್‌ಗೆ ಭೇಟಿ ನೀಡುವ ಹಿನ್ನೆಲೆ ಲಕ್ನೋದಲ್ಲಿ ವಿಪಕ್ಷ ನಾಯಕ ಮತಾ ಪ್ರಸಾದ್ ಮನೆ ಮುಂದೆ ಕೂಡ ಬಿಗಿ ಭದ್ರತೆ ಮಾಡಲಾಗಿದೆ.
ಸಂಭಾಲ್ ಹಿಂಸಾಚಾರ ಕುರಿತು ಎಸ್‌ಪಿ, ಮಾತಾ ಪ್ರಸಾದ್ ಪಾಂಡೆ ನೇತೃತ್ವದಲ್ಲಿ ತಂಡ ರಚಿಸಿತ್ತು. ಈ ತಂಡ ಸ್ಥಳಕ್ಕೆ ತೆರಳಿ ಘಟನೆಯ ವಿವರ ಸಂಗ್ರಹಿಸಿ, ವರದಿ ನೀಡಲು ಸಿದ್ಧತೆ ನಡೆಸಿತ್ತು. ಆದ್ರೆ ಅವರನ್ನು ಲಕ್ನೋನಲ್ಲಿಯೇ ತಡೆಯಲಾಗಿದೆ.
ನಿಯೋಗದಲ್ಲಿ ಮಾತಾ ಪ್ರಸಾದ್ ಪಾಂಡೆ ಅವರಲ್ಲದೆ, ವಿಧಾನ ಪರಿಷತ್ ನಾಯಕ ಲಾಲ್ ಬಿಹಾರಿ ಯಾದವ್, ಪಕ್ಷದ ರಾಜ್ಯ ಅಧ್ಯಕ್ಷ ಶ್ಯಾಮ್ ಲಾಲ್ ಪಾಲ್, ಇತರ ಶಾಸಕರು ಮತ್ತು ಎಂಎಲ್‌ಸಿಗಳು ಮತ್ತು ಪ್ರಮುಖ ಅಧಿಕಾರಿಗಳು ಸದಸ್ಯರಾಗಿದ್ದಾರೆ.
ನಾಯಕರು ಪಾಂಡೆ ಅವರ ನಿವಾಸದಿಂದ ಸಂಭಾಲ್‌ಗೆ ತೆರಳುವ ಮುನ್ನ ಭದ್ರತಾ ಅಧಿಕಾರಿಗಳು ಅವರನ್ನು ತಡೆದು ನಿಲ್ಲಿಸಿದ್ದಾರೆ. ಪಕ್ಷದ ಕಚೇರಿಗೆ ಹೊರಡಲು ನಾಯಕರು ನಿರ್ಧರಿಸಿದ್ದರು. ಅವರಿಗೆ ಅವಕಾಶ ನಿರಾಕರಿಸಲಾಗಿದೆ.
ಪೊಲೀಸರ ನಡೆ ಖಂಡಿಸಿ ಮಾತನಾಡಿರುವ ಪಾಂಡೆ, ನಮ್ಮನ್ನು ತಡೆಯುವ ಹಕ್ಕು ಪೊಲೀಸರಿಗೆ ಇಲ್ಲ. ಸಂಭಾಲ್‌ಗೆ ಯಾರು ಹೋಗದಂತೆ ವ್ಯವಸ್ಥೆ ಮಾಡಲಾಗಿದೆ ಆರೋಪಿಸಿದರು.
ಅವರು ಕಾನೂನು ಬಾಹಿರವಾಗಿ ಕೆಲಸ ಮಾಡುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಸರ್ಕಾರ ಎಂದೂ ಸಾಂವಿಧಾನಿಕ ವ್ಯವಸ್ಥೆಯನ್ನು ಅನುಸರಿಸುವುದಿಲ್ಲ, ಎಲ್ಲಿಗಾದರೂ ಪ್ರಯಾಣಿಸಬಹುದು ಎಂಬ ಹಕ್ಕನ್ನು ಸಂವಿಧಾನವೇ ನಮಗೆ ನೀಡಿದ್ದು, ಇದು ನಮ್ಮ ಮೂಲಭೂತ ಹಕ್ಕಾಗಿದೆ. ಸಂಭಾಲ್ನಲ್ಲಿ ನಿಷೇಧಾಜ್ಞೆ ವಿಧಿಸಲಾಗಿದೆಯೇ ಹೊರತು ಲಕ್ನೋನಲ್ಲಿ ಅಲ್ಲ ಎಂದು ಕಿಡಿಕಾರಿದರು.
ನಮ್ಮನ್ನು ತಡೆಯುತ್ತಿರುವುದು ಸಂಪೂರ್ಣವಾಗಿ ಅಸಂವಿಧಾನಿಕ ಮತ್ತು ಕಾನೂನುಬಾಹಿರವಾಗಿದೆ. ನಮಗೆ ಲಕ್ನೋದಲ್ಲಿರುವ ಪಕ್ಷದ ಕಚೇರಿಗೆ ಕೂಡ ಹೋಗಲು ಅವಕಾಶ ನೀಡುತ್ತಿಲ್ಲ ಎಂದು ಅವರು ದೂರಿದರು.
ಲಕ್ನೋನಿಂದ ಹೊರಟಿದ್ದ ನಿಯೋಗ ಸಂಭಾಲ್‌ಗೆ ತೆರಳುವ ಮೊದಲು ಮೊರಾದಾಬಾದ್‌ಗೆ ಭೇಟಿ ನೀಡಲು ಯೋಜಿಸಿತ್ತು. ಇಲ್ಲಿ ಹಿಂಸಾಚಾರದಲ್ಲಿ ಸಾವನ್ನಪ್ಪಿದ ಸಂತ್ರಸ್ತ ಕುಟುಂಬಗಳನ್ನು ತಂಡ ಭೇಟಿ ಮಾಡುವ ಉದ್ದೇಶ ಹೊಂದಿತ್ತು.
ಈ ನಡೆ ಖಂಡಿಸಿರುವ ಸಮಾಜವಾದಿ ನಾಯಕ ಅಖಿಲೇಶ್ ಯಾದವ್, ಇದು ಸರ್ಕಾರದ ಆಡಳಿತದ ವೈಫಲ್ಯ ಎಂದು ಖಂಡಿಸಿದ್ದಾರೆ. (ಐಎಎನ್ಎಸ್)
ಇದನ್ನೂ ಓದಿ: ಸಲ್ಲಿಕೆಯಾಗದ ಸಂಭಾಲ್ ಜಾಮಾ ಮಸೀದಿ ಸಮೀಕ್ಷಾ ವರದಿ: ಯಥಾಸ್ಥಿತಿ ಪಾಲನೆಗೆ ಸುಪ್ರೀಂ ಕೋರ್ಟ್ ಸೂಚನೆ