ಬರ್ಧಮಾನ್ (ಪಶ್ಚಿಮ ಬಂಗಾಳ): ವೈವಿಧ್ಯತೆಯಲ್ಲಿಯೇ ಏಕತೆಯಿದೆ ಎಂದು ನಂಬುವ ಜವಾಬ್ದಾರಿಯುತ ಸಮಾಜವಾಗಿರುವ ಹಿಂದೂ ಸಮುದಾಯವನ್ನು ಒಗ್ಗೂಡಿಸುವುದು ಅಗತ್ಯವಿದೆ ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಭಾನುವಾರ ಹೇಳಿದರು.
ಬರ್ಧಮಾನ್ನ ಎಸ್ಎಐ ಮೈದಾನದಲ್ಲಿ ನಡೆದ ಆರ್ಎಸ್ಎಸ್ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, "ನಾವು ಹಿಂದೂ ಸಮಾಜದ ಬಗ್ಗೆಯೇ ಏಕೆ ಮಾತನಾಡುತ್ತೇವೆ ಎಂದು ಜನ ಆಗಾಗ ನಮ್ಮನ್ನು ಪ್ರಶ್ನಿಸುತ್ತಾರೆ. ಹಿಂದೂ ಸಮಾಜವು ದೇಶದ ಜವಾಬ್ದಾರಿಯುತ ಸಮಾಜವಾಗಿರುವುದೇ ಇದಕ್ಕೆ ಕಾರಣ" ಎಂದು ಹೇಳಿದರು.
"ಇಂದು ಇಲ್ಲಿ ನಡೆಯುತ್ತಿರುವುದು ಅಂಥ ವಿಶೇಷ ಸಮಾರಂಭವೇನಲ್ಲ. ಸಂಘದ ಬಗ್ಗೆ ಮಾಹಿತಿ ಇಲ್ಲದವರು ಸಂಘದ ಉದ್ದೇಶವೇನು ಎಂದು ಆಶ್ಚರ್ಯ ಪಡುತ್ತಾರೆ. ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮಾಜವಾಗಿರುವುದರಿಂದ ಆ ಸಮಾಜವನ್ನು ಸಂಘಟಿಸಲು ಪ್ರಯತ್ನಿಸುವುದು ಆರ್ಎಸ್ಎಸ್ನ ಉದ್ದೇಶವಾಗಿದೆ ಎಂಬುದೇ ನನ್ನ ಉತ್ತರವಾಗಿದೆ" ಎಂದು ಭಾಗವತ್ ತಿಳಿಸಿದರು.
ವಿಶ್ವದ ವೈವಿಧ್ಯತೆಯನ್ನು ಒಪ್ಪಿಕೊಳ್ಳುವ ಮಹತ್ವವನ್ನು ಅವರು ಒತ್ತಿ ಹೇಳಿದರು.
"ಭಾರತವು ಕೇವಲ ಒಂದು ಭೌಗೋಳಿಕ ಪ್ರದೇಶವಲ್ಲ; ಭಾರತಕ್ಕೆ ಒಂದು ಸ್ವರೂಪವಿದೆ. ಭಾರತದ ಮೌಲ್ಯಗಳೊಂದಿಗೆ ಬದುಕಲು ಸಾಧ್ಯವಾಗದ ಕೆಲವರು ಪ್ರತ್ಯೇಕ ದೇಶವನ್ನು ರಚಿಸಿಕೊಂಡರು. ಆದರೆ ಇಲ್ಲಿಯೇ ಉಳಿದವರು ಸ್ವಾಭಾವಿಕವಾಗಿ ಭಾರತದ ಈ ಸಾರವನ್ನು ಸ್ವೀಕರಿಸಿದರು. ಹಾಗಾದರೆ ಈ ಸಾರವೇನು? ವಿಶ್ವದ ವೈವಿಧ್ಯತೆಯನ್ನು ಸ್ವೀಕರಿಸುವ ಮೂಲಕ ಅಭಿವೃದ್ಧಿ ಹೊಂದುವ ಹಿಂದೂ ಸಮಾಜವೇ ಆ ಸಾರವಾಗಿದೆ. ನಾವು 'ವೈವಿಧ್ಯತೆಯಲ್ಲಿ ಏಕತೆ' ಎಂದು ಹೇಳುತ್ತೇವೆ. ಆದರೆ ವೈವಿಧ್ಯತೆಯೇ ಏಕತೆ ಎಂದು ಹಿಂದೂ ಸಮಾಜ ಅರ್ಥಮಾಡಿಕೊಂಡಿದೆ" ಎಂದು ಆರ್ಎಸ್ಎಸ್ ಮುಖ್ಯಸ್ಥ ಭಾಗವತ್ ನುಡಿದರು.