ಅಮೇಠಿ (ಉತ್ತರ ಪ್ರದೇಶ): ಕೇಂದ್ರ ಸಚಿವೆ ಸ್ಮೃತಿ ಇರಾನಿ ಲೋಕಸಭಾ ಚುನಾವಣೆಗೆ ಅಮೇಥಿಯಲ್ಲಿ ಬಿಜೆಪಿಯಿಂದ ಇಂದು ನಾಮಪತ್ರ ಸಲ್ಲಿಸಿದರು. ಈಗಾಗಲೇ ಎರಡು ಬಾರಿ ಈ ಕ್ಷೇತ್ರದಿಂದ ಗೆದ್ದಿರುವ ಇರಾನಿ, ಇದೀಗ ಮೂರನೇ ಬಾರಿ ಅಖಾಡಕ್ಕಿಳಿದಿದ್ದಾರೆ. ಇಂದು ನಾಮಪತ್ರ ಸಲ್ಲಿಕೆಗೂ ಮುನ್ನ ಅವರು ಭರ್ಜರಿ ರೋಡ್ ಶೋ ನಡೆಸಿದರು. ಈ ವೇಳೆ ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಹಾಗೂ ಪತಿ ಜುಬಿನ್ ಇರಾನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ನಾಮಪತ್ರ ಸಲ್ಲಿಸಿದ ಸಚಿವೆ ಸ್ಮೃತಿ ಇರಾನಿ ಈ ವೇಳೆ ಅಲ್ಲಿ ನೆರೆದಿದ್ದ ಜನರನ್ನುದ್ದೇಶಿಸಿ ಮಾತನಾಡಿದ ಸ್ಮೃತಿ ಇರಾನಿ, ''2019ರಲ್ಲಿ ಅಮೇಥಿಯ ಜನರು ಇತಿಹಾಸ ನಿರ್ಮಿಸಿದಂತೆಯೇ ಈ ಬಾರಿಯೂ ಇತಿಹಾಸ ನಿರ್ಮಿಸಲಿದ್ದಾರೆ ಎಂಬ ವಿಶ್ವಾಸವಿದೆ. ಅಮೇಥಿಯಲ್ಲಿ ಮತ್ತೊಮ್ಮೆ ಕಮಲ ಅರಳಲಿದೆ. ಎದುರಾಳಿ ಯಾರೇ ಆಗಿರಲಿ, ಕ್ಷೇತ್ರದ ಸಾಮಾನ್ಯ ಕಾರ್ಯಕರ್ತ ಅವರನ್ನು ಸೋಲಿಸುವ ನಿರ್ಧಾರ ಮಾಡಿದ್ದಾರೆ. ಕಾಂಗ್ರೆಸ್ ವಿರುದ್ಧ ಒಂದು ಮಾತು ಹೇಳಿದರೆ ಸಾಕು ಜೈಲಿಗೆ ಹೋಗುವ ಕಾಲವಿತ್ತು. ಆದರೆ, ಇಂದಿನ ಪರಿಸ್ಥಿತಿಯೇ ಬೇರೆ ಇದೆ'' ಎಂದರು.
''ಅಮೇಥಿ ಸೇವೆಗಾಗಿ ನಾನು ಇಂದು ನಾಮಪತ್ರ ಸಲ್ಲಿಸಿದ್ದೇನೆ. ಅಮೇಥಿಯಲ್ಲಿ ಕಳೆದ 5 ವರ್ಷಗಳಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ 1,14,000 ಮನೆಗಳನ್ನು ನಿರ್ಮಿಸಲಾಗಿದೆ. 1.5 ಲಕ್ಷ ಕುಟುಂಬಗಳು ವಿದ್ಯುತ್ ಸಂಪರ್ಕ ಪಡೆದಿವೆ. 4 ಲಕ್ಷಕ್ಕೂ ಹೆಚ್ಚು ರೈತರು ಪಿಎಂ-ಕಿಸಾನ್ ಸಮ್ಮಾನ್ ನಿಧಿ ಪಡೆದಿದ್ದಾರೆ. ಹಾಗಾಗಿ ಕ್ಷೇತ್ರದ ಜನರು ಪ್ರಧಾನಿ ಮೋದಿ, ಬಿಜೆಪಿಯನ್ನು ಆಶೀರ್ವದಿಸುತ್ತಾರೆ ಎಂಬ ಭರವಸೆ ನನಗಿದೆ'' ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮಧ್ಯಾಹ್ನ 1 ಗಂಟೆ ಬಳಿಕ ಅವರು ನಾಮಪತ್ರ ಸಲ್ಲಿಸಿದರು.
ಮೇ 20 ರಂದು ಅಮೇಥಿ ಲೋಕಸಭಾ ಕ್ಷೇತ್ರಕ್ಕೆ ಐದನೇ ಹಂತದಲ್ಲಿ ಮತದಾನ ನಡೆಯಲಿದೆ. 2019ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಸೋಲಿಸಿದ್ದರು. ಸದ್ಯ ಈ ಕ್ಷೇತ್ರಕ್ಕೆ ಕಾಂಗ್ರೆಸ್ ಇನ್ನೂ ತನ್ನ ಅಭ್ಯರ್ಥಿಯನ್ನು ಘೋಷಿಸಿಲ್ಲ. ನಾಮಪತ್ರ ಸಲ್ಲಿಕೆಗೆ ಕೇವಲ ನಾಲ್ಕು ದಿನ ಮಾತ್ರ ಬಾಕಿ ಇದೆ. ಪ್ರಿಯಾಂಕಾ ಗಾಂಧಿ ಪತಿ ರಾಬರ್ಟ್ ವಾದ್ರಾ ಈ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಲಿದ್ದಾರೆ ಎನ್ನುವ ಊಹಾಪೋಹ ಸಹ ಇದೆ.
ಇದನ್ನೂ ಓದಿ:ಗಂಡೇ ವಿಧಾನಸಭಾ ಕ್ಷೇತ್ರದಿಂದ ಹೇಮಂತ್ ಸೋರೆನ್ ಪತ್ನಿ ಕಲ್ಪನಾ ನಾಮಪತ್ರ ಸಲ್ಲಿಕೆ - Kalpana Soren files nomination