ಮುಂಬೈ (ಮಹಾರಾಷ್ಟ್ರ) :ಉದ್ಧವ್ ಠಾಕ್ರೆ ಗುಂಪಿನಶಿವಸೇನಾ (ಯುಬಿಟಿ) ಮುಖಂಡ ಅಭಿಷೇಕ್ ಘೋಸಲ್ಕರ್ ಕೊಲೆ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಮೌರಿಸ್ ನೊರೊನ್ಹಾ ಅವರ ಕಟ್ಟಾ ಬೆಂಬಲಿಗ ಮೆಹುಲ್ ಪಾರೇಖ್ ಮತ್ತು ರೋಹಿತ್ ಶಾಹು ಅಲಿಯಾಸ್ ರಾವಣ ಎಂದು ಗುರುತಿಸಲಾಗಿದೆ. ಮೃತ ಆರೋಪಿಯಾದ ಮೌರಿಸ್ ನೊರೊನ್ಹಾಗೆ ಈ ಇಬ್ಬರು ಬಂಧಿತ ಆರೋಪಿಗಳು ಸಹಾಯ ಮಾಡಿದ್ದಾರೆ ಎನ್ನಲಾಗಿದೆ.
ಗುರುವಾರ ಮುಂಬೈನಲ್ಲಿ ಅಭಿಷೇಕ್ ಘೋಸಲ್ಕರ್ ಅವರನ್ನು ಸ್ಥಳೀಯ ಸಾಮಾಜಿಕ ಕಾರ್ಯಕರ್ತ ಮೌರಿಸ್ ನೊರೊನ್ಹಾ ಫೇಸ್‌ಬುಕ್ ಲೈವ್ ವೇಳೆಯೇ ಗುಂಡಿಕ್ಕಿ ಹತ್ಯೆ ಮಾಡಿದ್ದನು. ಬಳಿಕ ಮೌರಿಸ್ ನೊರೊನ್ಹಾ ಕೂಡ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದನು ಎಂದು ಪೊಲೀಸರು ತಿಳಿಸಿದ್ದರು.
ಫೇಸ್‌ಬುಕ್ ಲೈವ್ ವೇಳೆ ಅಭಿಷೇಕ್ ಘೋಸಲ್ಕರ್ ಮತ್ತು ಮೌರಿಸ್ ನೊರೊನ್ಹಾ ಒಟ್ಟಿಗೆ ಮಾತನಾಡುತ್ತಿದ್ದರು. ಸ್ವಲ್ಪ ಸಮಯದ ಬಳಿಕ ನೊರೊನ್ಹಾ ಎದ್ದು ಹೋಗುತ್ತಾರೆ. ಈ ವೇಳೆ, ಅಭಿಷೇಕ್ ಘೋಸಲ್ಕರ್ ಮೇಲೆ ನೊರೊನ್ಹಾ ಏಕಾಏಕಿ ಮೂರು ಸುತ್ತು ಗುಂಡು ಹಾರಿಸಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಅಭಿಷೇಕ್ ಘೋಸಲ್ಕರ್ ಅವರ ಹೊಟ್ಟೆ ಮತ್ತು ಭುಜಕ್ಕೆ ಎರಡು ಗುಂಡು ತಗುಲಿದ್ದು, ಬಳಿಕ ಒಂದು ಗುಂಡಿನ ಶಬ್ದ ವಿಡಿಯೋ ಮರೆಯಲ್ಲಿ ಕೇಳಿ ಬಂದಿದೆ.
ಈ ಹಿಂದಿನಿಂದಲೂ ಇಬ್ಬರು ಕೂಡ ವೈಯಕ್ತಿಕ ದ್ವೇಷ ಹೊಂದಿದ್ದರು. ಆದರೆ ಇತ್ತೀಚೆಗಷ್ಟೇ ಘೋಸಲ್ಕರ್ ಮತ್ತು ನೊರೊನ್ಹಾ ಹೊಂದಾಣಿಕೆ ಮಾಡಿಕೊಂಡಿದ್ದರು. ಹೀಗಾಗಿ ಘೋಸಲ್ಕರ್ ಅವರನ್ನು ನೊರೊನ್ಹಾ ತನ್ನ ಕಚೇರಿಗೆ ಆಹ್ವಾನಿಸಿದ್ದ ಎಂದು ಮೂಲಗಳಿಂದ ತಿಳಿದು ಬಂದಿದೆ. ತಾನು ಆತ್ಮಹತ್ಯೆ ಮಾಡಿ ಕೊಳ್ಳುವ ಮೊದಲು ಘೋಸಲ್ಕರ್ನನ್ನು ಹತ್ಯೆ ಮಾಡಿದ್ದಾನೆ. ಇಡೀ ಈ ಘಟನೆಯನ್ನು ಫೇಸ್ ಬುಕ್ನಲ್ಲಿ ಲೈವ್ ಸ್ಟ್ರೀಮ್ ಮಾಡಲಾಗಿದೆ.