ಸುಂದರ್‌ಗಢ(ಒಡಿಶಾ):ಒಡಿಶಾದಲ್ಲಿ ಲೋಕಸಭೆ ಚುನಾವಣೆಯೊಂದಿಗೆ ವಿಧಾನಸಭೆ ಚುನಾವಣೆಯೂ ಏಕಕಾಲಕ್ಕೆ ನಡೆಯುತ್ತಿದೆ. ಈ ಬಾರಿ ಚುನಾವಣಾ ಅಖಾಡಕ್ಕೆ ಭಾರತೀಯ ಪುರುಷರ ಹಾಕಿ ತಂಡದ ಮಾಜಿ ನಾಯಕರಾದ ದಿಲೀಪ್ ಟಿರ್ಕಿ ಮತ್ತು ಪ್ರಬೋಧ್ ಟಿರ್ಕಿ ಜಿಗಿದಿದ್ದಾರೆ. ಇಬ್ಬರು ಕೂಡ ಬೇರೆ-ಬೇರೆ ಪಕ್ಷಗಳಿಂದ ಸ್ಪರ್ಧಿಸಿದ್ದು, ಚುನಾವಣಾ ಕಣ ರಂಗೇರಿದೆ.
47 ವರ್ಷದ ದಿಲೀಪ್ ಹಾಗೂ 40 ವರ್ಷದ ಪ್ರಬೋಧ್ ಇಬ್ಬರೂ ತಮ್ಮ ಕ್ರೀಡಾ ವೃತ್ತಿಜೀವನದ ನಂತರ ಸಕ್ರಿಯ ರಾಜಕೀಯಕ್ಕೆ ಧುಮುಕ್ಕಿದ್ದಾರೆ. ಇವರು ಪರಸ್ಪರ ಮುಖಾಮುಖಿಯಾಗಿ ಸ್ಪರ್ಧಿಸದಿದ್ದರೂ, ಪ್ರತ್ಯೇಕ ಪಕ್ಷಗಳಿಂದ, ಪ್ರತ್ಯೇಕ ಕ್ಷೇತ್ರಗಳಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಹೀಗಾಗಿ ಈ ಮಾಜಿ ಹಾಕಿ ಪಟುಗಳ ಸ್ಪರ್ಧೆಯು ಹಾಕಿ ಟರ್ಫ್‌ನಿಂದ ರಾಜಕೀಯ ರಣಾಂಗಣವಾಗಿ ಪರಿವರ್ತನೆಗೊಂಡಂತಾಗಿದೆ.
ಒಬ್ಬರು ಲೋಕಸಭೆ, ಮತ್ತೊಬ್ಬರು ವಿಧಾನಸಭೆಗೆ ಸ್ಪರ್ಧೆ: ದಿಲೀಪ್ ಟಿರ್ಕಿ ಹಾಗೂ ಪ್ರಬೋಧ್ ಟಿರ್ಕಿ ಇಬ್ಬರೂ ಲೋಕಸಭೆ ಮತ್ತು ವಿಧಾನಸಭೆಗೆ ಪ್ರವೇಶಿಸುವ ಆಕಾಂಕ್ಷೆ ಹೊಂದಿದ್ದಾರೆ. ಆದರೆ, ಇಬ್ಬರೂ ಒಂದೇ ಜಿಲ್ಲೆಯಲ್ಲಿ ಸ್ಪರ್ಧೆ ಮಾಡುತ್ತಿದ್ದಾರೆ ಎಂಬುದು ವಿಶೇಷ. ಪ್ರಸ್ತುತ ಹಾಕಿ ಇಂಡಿಯಾದ ಅಧ್ಯಕ್ಷರೂ ಆದ ದಿಲೀಪ್ ಸುಂದರ್‌ಗಢ ಲೋಕಸಭೆ ಕ್ಷೇತ್ರದಲ್ಲಿ ಬಿಜೆಡಿಯಿಂದ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ. ಮತ್ತೊಂದೆಡೆ, ಪ್ರಬೋಧ್ ಅದೇ ಸುಂದರ್‌ಗಢ ಜಿಲ್ಲೆಯ ತಲ್ಸಾರಾ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್‌ನಿಂದ ಸ್ಪರ್ಧಿಸುತ್ತಿದ್ದಾರೆ.