ಸುಕ್ಮಾ(ಛತ್ತೀಸ್ಗಢ): ಜನವರಿ 30ರಂದು ಸುಕ್ಮಾ ಮತ್ತು ಬಿಜಾಪುರ ಗಡಿ ಪ್ರದೇಶಗಳಲ್ಲಿ ಸೈನಿಕರು ಮತ್ತು ನಕ್ಸಲೀಯರ ನಡುವೆ ಗುಂಡಿನ ಚಕಮಕಿ ನಡೆದಿತ್ತು. ಈ ವೇಳೆ ಮೂವರು ಯೋಧರು ಹುತಾತ್ಮರಾಗಿದ್ದರು. ಟೇಕಲಗುಡೆಂನಲ್ಲಿ ನಡೆದ ಈ ದಾಳಿಯಲ್ಲಿ ಇಬ್ಬರು ಮಹಿಳಾ ನಕ್ಸಲರು ಹತ್ಯೆಯಾಗಿದ್ದಾರೆ. ನಕ್ಸಲೀಯರು ಕರಪತ್ರಗಳ ಮೂಲಕ ಕೊಲ್ಲಲ್ಪಟ್ಟ ತಮ್ಮ ಸಹಚರರ ಛಾಯಾಚಿತ್ರಗಳನ್ನು ಬಿಡುಗಡೆ ಮಾಡಿದ್ದಾರೆ. ಇಬ್ಬರೂ ಪಿಎಲ್‌ಜಿಎ ಬೆಟಾಲಿಯನ್‌ನ ಮಹಿಳಾ ನಕ್ಸಲರಾಗಿದ್ದಾರೆ.
ದಾಳಿಯ ಬಳಿಕ ಸೈನಿಕರ ಕಾಟ್ರಿಡ್ಜ್‌ಗಳು ಮತ್ತು ಅವರ ಚೀಲಗಳನ್ನು ತೆಗೆದುಕೊಂಡು ಹೋಗಿದ್ದೇವೆ ಎಂದು ನಕ್ಸಲರು ಫೋಟೋಗಳ ಮೂಲಕ ತಿಳಿಸಿದ್ದಾರೆ. ಆದರೆ ಇವುಗಳನ್ನು ಭದ್ರತಾ ಪಡೆಗಳು ಖಚಿತಪಡಿಸಿಲ್ಲ.
''ನಕ್ಸಲೀಯರು ಸುಳ್ಳು ಹೇಳಿಕೆಗಳನ್ನು ನೀಡಿರುವ ಸಾಧ್ಯತೆ ಇದೆ. ದಾಳಿಯಲ್ಲಿ ಹತರಾದ ನಕ್ಸಲೀಯರ ಸಂಖ್ಯೆ ಹೆಚ್ಚಿದ್ದರೆ ಅದನ್ನು ಮರೆಮಾಚಿರುವ ಸಾಧ್ಯತೆಯಿದೆ. ಈ ಬಾರಿಯೂ ನಕ್ಸಲೀಯರು ಅದೇ ರೀತಿ ಮಾಡಿದ್ದಾರೆ. ಐದರಿಂದ ಆರು ನಕ್ಸಲೀಯರು ಹತ್ಯೆಯಾಗಿದ್ದಾರೆ. ಬಸ್ತಾರ್‌ನಾದ್ಯಂತ ಸೈನಿಕರು ಕ್ಷಿಪ್ರ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಒಂದು ಕಾಲದಲ್ಲಿ ನಕ್ಸಲೀಯರ ಸುರಕ್ಷಿತ ವಲಯವಾಗಿದ್ದ ಪ್ರದೇಶವನ್ನು ನಾವು ತಲುಪಿದ್ದೇವೆ. ಎನ್‌ಕೌಂಟರ್ ನಡೆದ ಟೇಕಲಗುಡೆಂ ಪ್ರದೇಶದಿಂದ ಪುವರ್ತಿ ಗ್ರಾಮವು ಕೆಲವು ಕಿಲೋಮೀಟರ್ ದೂರದಲ್ಲಿದೆ. ನಕ್ಸಲೀಯ ಕಮಾಂಡರ್ ಹಿದ್ಮಾ ಮತ್ತು ಟೇಕಲಗುಡೆಂ ದಾಳಿಯ ಮಾಸ್ಟರ್ ಮೈಂಡ್ ದೇವ ಇಬ್ಬರೂ ಈ ಪೂರ್ವಿ ಗ್ರಾಮದ ನಿವಾಸಿಗಳು. ಈಗ ಸೈನಿಕರು ಅವರಿರುವ ಪ್ರದೇಶಗಳತ್ತ ಬರುತ್ತಿರುವುದನ್ನು ಕಂಡು ನಕ್ಸಲೀಯರು ಭಯಗೊಂಡಿದ್ದಾರೆ. ಈ ಭೀತಿಯಲ್ಲಿ ಸೈನಿಕರನ್ನು ಗುರಿಯಾಗಿಸಿಕೊಂಡು ದಾಳಿ ಮಾಡುತ್ತಿದ್ದಾರೆ'' ಎಂದು ಬಸ್ತಾರ್ ಐಜಿ ಸುಂದರರಾಜ್ ಪಿ. ಮಾಹಿತಿ ನೀಡಿದ್ದಾರೆ.
12 ಹೊಸ ಬೇಸ್ ಕ್ಯಾಂಪ್‌ಗಳ ನಿರ್ಮಾಣ: ಬಿಜಾಪುರ ಮತ್ತು ಸುಕ್ಮಾ ಗಡಿ ಪ್ರದೇಶಗಳಲ್ಲಿ ಸೈನಿಕರ ಬೇಸ್ ಕ್ಯಾಂಪ್‌ಗಳು ನಿರಂತರವಾಗಿ ಹೆಚ್ಚುತ್ತಿವೆ. ಬಸ್ತಾರ್ ಐಜಿ ಪ್ರಕಾರ, ಸೈನಿಕರಿಗಾಗಿ ಒಟ್ಟು 12 ಹೊಸ ಬೇಸ್ ಕ್ಯಾಂಪ್‌ಗಳನ್ನು ನಿರ್ಮಾಣ ಮಾಡಲಾಗಿದೆ. ಬಿಜಾಪುರ ಪ್ರದೇಶದಲ್ಲಿ 6 ಶಿಬಿರಗಳನ್ನು ನಿರ್ಮಿಸಲಾಗಿದ್ದು, ಸುಕ್ಮಾದಲ್ಲಿ 6 ಶಿಬಿರಗಳಿವೆ. ನಿರಂತರವಾಗಿ ಹೆಚ್ಚುತ್ತಿರುವ ಒತ್ತಡ ಹಾಗೂ ಸೈನಿಕರ ಶೋಧದಿಂದಾಗಿ ನಕ್ಸಲೀಯರು ಆತಂಕಕ್ಕೆ ಒಳಗಾಗಿದ್ದಾರೆ. ಸೈನಿಕರು ಹತ್ತಿರಕ್ಕೆ ಬರುತ್ತಿದ್ದಂತೆ ಬಸ್ತಾರ್ನ ನಕ್ಸಲೀಯರು ಆತಂಕಗೊಂಡು ಭದ್ರತಾ ಪಡೆಗಳ ಮೇಲೆ ದಾಳಿ ನಡೆಸುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ:ನೌಕಾಪಡೆಗೆ ಈಗ ಐಎನ್‌ಎಸ್ ಸಂಧಾಯಕ್ ಬಲ: ಕಡಲ್ಗಳ್ಳರಿಗೆ ರಾಜನಾಥ್ ಸಿಂಗ್ ಎಚ್ಚರಿಕೆ ಸಂದೇಶ