ಕುಲ್ತಾಳಿ (ಕೋಲ್ಕತ್ತಾ):ಉದ್ಯಮಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಸದ್ದಾಂ ಸರ್ದಾರ್ ಎಂಬ ದರೋಡೆಕೋರನನ್ನು ಪಶ್ಚಿಮ ಬಂಗಾಳ ಪೊಲೀಸರು ಹರಸಾಹಸದ ಬಳಿಕ ರಾಜ್ಯದ ದಕ್ಷಿಣ 24 ಪರಗಣ ಜಿಲ್ಲೆಯಲ್ಲಿ ಬಂಧಿಸಿದ್ದಾರೆ. ನಕಲಿ ಚಿನ್ನದ ವಿಗ್ರಹ ಮಾರಾಟ, ಸಾರ್ವಜನಿಕರಿಂದ ಹಣ ವಸೂಲಿ, ಬಂದೂಕು ಕಳ್ಳಸಾಗಣೆ, ನಕಲಿ ಕರೆನ್ಸಿ ವಹಿವಾಟು ಸೇರಿ ಬಂಧಿತನ ಮೇಲೆ ಹಲವು ಪ್ರಕರಣಗಳಿವೆ. ವಿವಿಧ ಪೊಲೀಸ್ ಠಾಣೆಯಲ್ಲಿ ಈತನ ವಿರುದ್ಧ ದೂರು ದಾಖಲಾಗಿದ್ದವು. ಬಂಧಿಸಲು ತೆರಳಿದಾಗ ಪೊಲೀಸರ ಮೇಲೆಯೇ ದಾಳಿ ನಡೆಸಿ ಪರಾರಿಯಾಗಿದ್ದನು. ಸದ್ಯ ಆತನನ್ನು ಬಂಧಿಸಿರುವ ಪೊಲೀಸರು ತನಿಖೆ ನಡೆಸಿದ್ದಾರೆ.
ಪ್ರಕರಣದ ಹಿನ್ನೆಲೆ:ವಂಚನೆಯನ್ನೇ ಕಾಯಕವನ್ನಾಗಿ ಮಾಡಿಕೊಂಡಿದ್ದ ಸದ್ದಾಂ, ನಕಲಿ ಚಿನ್ನದ ವಿಗ್ರಹಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಮಾರಾಟ ಮಾಡಿ, ಜನರಿಂದ ಹಣ ಪಡೆದು ವಸ್ತುಗಳನ್ನು ತಲುಪಿಸದೇ ಮೋಸ ಮಾಡುತ್ತಿದ್ದನು. ಈ ಬಗ್ಗೆ ವಿವಿಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದವು. ತನಿಖೆ ಕೈಗೊಂಡಿದ್ದ ಪೊಲೀಸರು ಸ್ಥಳೀಯ ಸಿಪಿಎಂ ನಾಯಕ ಮನ್ನನ್ ಖಾನ್ ಆಶ್ರಯ ಪಡೆದಿದ್ದ ಆರೋಪಿಯನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ. ಆರೋಪಿಗೆ ಆಶ್ರಯ ನೀಡಿದ್ದ ಮನ್ನನ್ ಖಾನ್ ಅವರನ್ನೂ ಬಂಧಿಸಲಾಗಿದೆ.
ಇದೊಂದು ಏಳು - ಎಂಟು ಜನರಿರುವ ದೊಡ್ಡ ಜಾಲವಾಗಿತ್ತು. ಈ ಚಟುವಟಿಕೆಯಲ್ಲಿ ಮನ್ನನ್ ಖಾನ್ ಕೂಡ ಭಾಗಿಯಾಗಿದ್ದ. ಸದ್ದಾಂ ಎರಡು ದಿನಗಳ ಕಾಲ ಮನ್ನನ್ ಖಾನ್ ಅವರ ಅಲಘರ್ (ಮೀನುಗಾರಿಕೆ ಮೇಲ್ವಿಚಾರಣಾ ಮನೆ) ನಲ್ಲಿ ಆಶ್ರಯ ಪಡೆದಿದ್ದ. ಈ ಬಗ್ಗೆ ಸುಳಿವು ಸಿಕ್ಕ ತಕ್ಷಣ ದಾಳಿ ಮಾಡಿ ಬಂಧಿಸಿದ್ದೇವೆ. ದಾಳಿ ವೇಳೆ ಕೆಲವರು ತಲೆ ಮರೆಸಿಕೊಂಡಿದ್ದಾರೆ. ಅದರಲ್ಲಿ ಸದ್ದಾಂನ ಕಿರಿಯ ಸಹೋದರ ಸೈರುಲ್ ಕೂಡ ಇದ್ದು, ಆತನಿಗಾಗಿ ಹುಡುಕಾಟ ನಡೆಸಿದ್ದೇವೆ. ದಾಳಿ ವೇಳೆ ಆರೋಪಿಗಳು ಪ್ರತಿರೋಧ ಮಾಡಿದ ಘಟನೆ ಕೂಡ ನಡೆಯಿತು. ಗುಂಪು ದಾಳಿಯಲ್ಲಿ ಕನಿಷ್ಠ ಮೂವರು ಪೊಲೀಸ್ ಸಿಬ್ಬಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.