ಕರ್ನಾಟಕ

karnataka

ETV Bharat / bharat

ತಿರುಪತಿಯಲ್ಲಿ ರಾಜಕೀಯಕ್ಕೆ ಲಗಾಮು, ಹಿಂದೂಯೇತರ ಸಿಬ್ಬಂದಿಗೆ ಗೇಟ್​​ಪಾಸ್​: ಶೀಘ್ರ ದರ್ಶನಕ್ಕೆ ಪ್ಲಾನ್​ - TTD KEY RESOLUTIONS

ತಿರುಮಲ ತಿರುಪತಿ ದೇವಸ್ಥಾನದ (ಟಿಟಿಡಿ) ನೂತನ ಅಧ್ಯಕ್ಷ ಬಿ.ಆರ್. ನಾಯ್ಡು ಅವರ ನೇತೃತ್ವದಲ್ಲಿ ಟ್ರಸ್ಟ್​​ನ ಮೊದಲ ಸಭೆ ನಡೆಸಲಾಗಿದ್ದು, ಮಹತ್ವದ 28 ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ.

ತಿರುಮಲ ತಿರುಪತಿ ದೇವಸ್ಥಾನ
ತಿರುಮಲ ತಿರುಪತಿ ದೇವಸ್ಥಾನ (ETV Bharat)

By ETV Bharat Karnataka Team

Published : Nov 19, 2024, 5:22 PM IST

ತಿರುಪತಿ (ಆಂಧ್ರಪ್ರದೇಶ):ಹಲವು ಅಪಭ್ರಂಶುಗಳಿಗೆ ಕಾರಣವಾಗಿದ್ದ ಹಿಂದೂಗಳ ಪವಿತ್ರ ಕ್ಷೇತ್ರವಾದ ತಿರುಪತಿ ದೇವಸ್ಥಾನದ ಶುದ್ಧೀಕರಣ ಮುಂದುವರಿದಿದೆ. ದೇವಸ್ಥಾನದ ಆವರಣದಲ್ಲಿ ರಾಜಕೀಯ ಭಾಷಣಕ್ಕೆ ಕಡ್ಡಾಯ ನಿಷೇಧ, ಹಿಂದುಯೇತರ ಸಿಬ್ಬಂದಿಗೆ ನಿವೃತ್ತಿ ಯೋಜನೆ​​, ಭಕ್ತರಿಗೆ 2 ಗಂಟೆಯಲ್ಲಿ ದೇವರ ದರ್ಶನ ಒದಗಿಸಲು ಯೋಜಿಸಲಾಗಿದೆ.

ತಿರುಮಲ ತಿರುಪತಿ ದೇವಸ್ಥಾನದ (ಟಿಟಿಡಿ) ನೂತನ ಅಧ್ಯಕ್ಷ ಬಿ.ಆರ್. ನಾಯ್ಡು ಅವರ ನೇತೃತ್ವದಲ್ಲಿ ಸೋಮವಾರ ನಡೆದ ಟ್ರಸ್ಟ್​​ನ ಮೊದಲ ಸಭೆಯಲ್ಲಿ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.

ತಿರುಪತಿಯ ಪ್ರಸಿದ್ಧ ಲಡ್ಡುಗಳ ತಯಾರಿಕೆಯಲ್ಲಿ ಕಲಬೆರಕೆ ಮಾಡಲಾಗಿದೆ ಎಂಬ ಆರೋಪ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು. ತಿರುಪತಿ ಪ್ರಸಾದದ ವಿವಾದದ ಬಳಿಕ ದೇವಸ್ಥಾನದ ಟ್ರಸ್ಟ್​​ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೆ ತಂದಿದೆ.

ದೇವಸ್ಥಾನದಲ್ಲಿ 'ರಾಜಕೀಯ' ನಿಷೇಧ:ತಿಮ್ಮಪ್ಪನ ದೇವಸ್ಥಾನದ ಆವರಣದಲ್ಲಿ ಯಾರೇ ಆಗಲಿ ರಾಜಕೀಯ ಭಾಷಣ ಮಾಡುವಂತಿಲ್ಲ. ರಾಜಕೀಯ ವಿಚಾರಗಳನ್ನು ಹಂಚಿಕೊಳ್ಳುವುದನ್ನು ಕಡ್ಡಾಯವಾಗಿ ನಿಷೇಧಿಸಿ ಸಭೆಯು ಮಹತ್ವದ ನಿರ್ಧಾರ ಕೈಗೊಂಡಿದೆ. ಹಾಗೊಂದು ವೇಳೆ ಯಾರಾದರೂ ನಿಯಮ ಮೀರಿದಲ್ಲಿ ಅವರ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಲಾಗುತ್ತದೆ. ಜೊತೆಗೆ, ತಿರುಮಲದಲ್ಲಿ ನಿರ್ಮಾಣವಾಗುತ್ತಿರುವ ಮುಮ್ತಾಜ್ ಹೋಟೆಲ್‌ನ ಅನುಮತಿ ರದ್ದು ಮಾಡಲಾಗಿದೆ.

ಹಿಂದೂಯೇತರರಿಗೆ ನಿವೃತ್ತಿ ಯೋಜನೆ:ದೇವಸ್ಥಾನದಲ್ಲಿ ವಿವಿಧ ವಿಭಾಗಗಳಲ್ಲಿ ಕೆಲಸಕ್ಕೆ ನೇಮಿತವಾಗಿರುವ ಹಿಂದೂಯೇತರ ಸಿಬ್ಬಂದಿಯನ್ನು ಕೈಬಿಟ್ಟು, ಹಿಂದುಗಳನ್ನು ಮಾತ್ರ ನೇಮಿಸಬೇಕು ಎಂಬ ಬೇಡಿಕೆಗೆ ಟಿಟಿಡಿ ಸ್ಪಂದಿಸಿದೆ. ಈಗಿರುವ ಹಿಂದೂಯೇತರ ಸಿಬ್ಬಂದಿಗೆ ಸ್ವಯಂ ನಿವೃತ್ತಿ ಯೋಜನೆ (ವಿಆರ್​ಎಸ್​) ಜಾರಿಗೆ ತರಲಾಗುವುದು ಟಿಟಿಡಿ ಘೋಷಿಸಿದೆ.

2-3 ಗಂಟೆಯಲ್ಲಿ ತಿಮ್ಮಪ್ಪನ ದರ್ಶನ:ತಿಮ್ಮಪ್ಪನ ದರ್ಶನಕ್ಕಾಗಿ ಭಕ್ತರು ದಿನಗಟ್ಟಲೇ ಕಾಯುವುದನ್ನು ತಪ್ಪಿಸಲು ಟಿಟಿಡಿ ಮಾಸ್ಟರ್​ ಪ್ಲಾನ್​​ ಮಾಡಿದೆ. 2-3 ಗಂಟೆಯೊಳಗೆ ಎಲ್ಲ ಭಕ್ತರಿಗೆ ದರ್ಶನಾವಕಾಶ ಸಿಗುವಂತಾಗಲು ಕೃತಕ ಬುದ್ಧಿಮತ್ತೆ(ಎಐ) ಬಳಸಿಕೊಳ್ಳಲು ಯೋಜಿಸಲಾಗಿದೆ.

ಮಹತ್ವದ ನಿರ್ಧಾರಗಳಿವು:

  • ಪ್ರತಿ ತಿಂಗಳ ಮೊದಲ ಮಂಗಳವಾರದಂದು ಸ್ಥಳೀಯ ನಿವಾಸಿಗಳಿಗೆ ವಿಶೇಷ ದರ್ಶನ
  • ಆಂಧ್ರಪ್ರದೇಶ ಮತ್ತು ತೆಲಂಗಾಣದ ದೇವಾಲಯಗಳ ಅಭಿವೃದ್ಧಿಗೆ ದೇಣಿಗೆ ನೀಡಲು ರೂಪಿಸಿದ ವೆಂಕಟೇಶ್ವರ ದೇವಾಲಯ ನಿರ್ಮಾಣಂ (ಶ್ರೀವಾಣಿ) ಟ್ರಸ್ಟ್ ಟಿಟಿಡಿಯಲ್ಲಿ ವಿಲೀನ
  • ಟಿಟಿಡಿ ನೌಕರರ ಕೊಡುಗೆಯನ್ನು ಗುರುತಿಸಲು 'ಬ್ರಹ್ಮೋತ್ಸವ ಬಹುಮಾನ'
  • ಟಿಟಿಡಿ ಠೇವಣಿಗಳ ಸುರಕ್ಷತೆಗಾಗಿ ಖಾಸಗಿ ಬ್ಯಾಂಕ್‌ಗಳಲ್ಲಿ ಈಗಾಗಲೇ ಇಟ್ಟಿರುವ ಹಣವನ್ನು ಹಿಂಪಡೆದು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಠೇವಣಿ ಮಾಡಲು ನಿರ್ಧಾರ
  • ಲಡ್ಡು ಪ್ರಸಾದ ತಯಾರಿಕೆಯಲ್ಲಿ ಹೆಚ್ಚಿನ ಗುಣಮಟ್ಟದ ತುಪ್ಪ ಬಳಕೆ
  • ಭಕ್ತರಿಗಾಗಿ ತಿರುಮಲದ ಅನ್ನಪ್ರಸಾದ ಕಾಂಪ್ಲೆಕ್ಸ್‌ನಲ್ಲಿ ಪ್ರತಿದಿನ ಮೆನುವಿನಲ್ಲಿ ಮತ್ತೊಂದು ರುಚಿಕರವಾದ ಪಾಕ

ಇದನ್ನೂ ಓದಿ:ಗೂಗಲ್​ ಮ್ಯಾಪ್​ ಎಡವಟ್ಟು, 7 ತಾಸು ಕೆಸರಿನಲ್ಲಿ ಸಿಲುಕಿದ ಮಂಗಳೂರಿನ ಅಯ್ಯಪ್ಪ ಭಕ್ತ; ತಮಿಳುನಾಡು ಪೊಲೀಸರಿಂದ ರಕ್ಷಣೆ

ABOUT THE AUTHOR

...view details