ನವದೆಹಲಿ: ದೆಹಲಿಯ ಉತ್ತಮ್ ನಗರ ಪೂರ್ವ ಮತ್ತು ಉತ್ತಮ್ ನಗರ ಪಶ್ಚಿಮ ಮೆಟ್ರೋ ನಿಲ್ದಾಣಗಳ ನಡುವಿನ ಹಳಿಯ ಮೇಲೆ ಡ್ರೋನ್ ಕಂಡು ಬಂದಿತ್ತು. ಡ್ರೋನ್ ಕಂಡು ಬಂದ ಹಿನ್ನಲೆ ದೆಹಲಿ ಮೆಟ್ರೋದ ಬ್ಲೂ ಲೈನ್ ಮಾರ್ಗದಲ್ಲಿ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಇದರಿಂದ ಪ್ರಯಾಣಿಕರು ತೊಂದರೆ ಅನುಭವಿಸಬೇಕಾಯಿತು ಎಂದು ಅಧಿಕಾರಿಗಳು ತಿಳಿಸಿದರು.
ಅಧಿಕಾರಿಗಳು ನೀಡಿರುವ ಪ್ರಕಾರ, ಮಧ್ಯಾಹ್ನ 2.50 ರಿಂದ 3.29ರ ವೇಳೆ ಮೆಟ್ರೋ ಪ್ರಯಾಣದಲ್ಲಿ ಸಂಚಾರ ವ್ಯತ್ಯಯವಾಗಿದೆ. ಟ್ರಾಕ್ ಮೇಲೆ ಡ್ರೋನ್ ಬಿದ್ದಿರುವುದನ್ನು ಗಮನಿಸಿದ ಅಧಿಕಾರಿಗಳು ಮುನ್ನೆಚ್ಚರಿಕ ಕ್ರಮವಾಗಿ ಮೆಟ್ರೋ ಸಂಚಾರ ಸ್ಥಗಿತಗೊಳಿಸಿದ್ದರು. ಇದರಿಂದ ಉತ್ತಮ್ ನಗರ್ ಪೂರ್ವ ಮತ್ತು ಉತ್ತಮ ನಗರ ಪಶ್ಚಿಮ ನಡುವಿನ ರೈಲು ಸಂಚಾರ ಸ್ತಬ್ಧಗೊಂಡಿತ್ತು.
ಉತ್ತಮ ನಗರ ಪೂರ್ಣ ಮತ್ತು ಜನಕ್‌ಪುರಿ ಪಶ್ಚಿಮದ ನಡುವೆ ಮತ್ತು ಉತ್ತಮ ನಗರ್ ಪಶ್ಚಿಮ ಹಾಗೂ ದ್ವಾರಕ ನಡುವೆ ಏಕಮುಖ ಟ್ರೈನ್ ಸೇವೆ ನೀಡಲಾಯಿತು. ಈ ವೇಳೆ, ಬ್ಲೂ ಲೈನ್‌ನ ಉಳಿದ ವಿಭಾಗಗಳಲ್ಲಿ ಎರಡು ಲೂಪ್‌ಗಳಲ್ಲಿ ರೈಲು ಸೇವೆಗಳನ್ನು ನೀಡಲಾಯಿತು. ಜನಕ್‌ಪುರಿ ಪಶ್ಚಿಮದಿಂದ ವೈಶಾಲಿ ಹಾಗೂ ನೋಯ್ಡಾ ಎಲೆಕ್ಟ್ರಾನಿಕ್ ಸಿಟಿ ಮತ್ತು ದ್ವಾರಕಾದಿಂದ ದ್ವಾರಕಾ ಸೆಕ್ಷನ್ 21 ವಿಭಾಗಗಳ ನಡುವೆ ಸಂಚಾರ ಎಂದಿನಂತೆ ಇತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.