ಗೊಂಡಾ: ಉತ್ತರ ಪ್ರದೇಶದ ಗೊಂಡಾ ಎಂಬಲ್ಲಿ ಎಕ್ಸ್‌ಪ್ರೆಸ್ ರೈಲೊಂದು ಹಳಿತಪ್ಪಿ ನಾಲ್ವರು ಪ್ರಯಾಣಿಕರು ಸಾವನ್ನಪ್ಪಿರುವ ಘಟನೆ ಇಂದು ಮಧ್ಯಾಹ್ನ ನಡೆದಿದೆ. ಚಂಡೀಗಢದಿಂದ ಗೋರಖ್‌ಪುರ ಮೂಲಕ ಅಸ್ಸಾಂಗೆ ತೆರಳುತ್ತಿದ್ದ 15904 ಸಂಖ್ಯೆಯ ದಿಬ್ರುಗಢ ಎಕ್ಸ್‌ಪ್ರೆಸ್ ರೈಲಿನ 10 ಬೋಗಿಗಳು ಹಳಿತಪ್ಪಿ ಅಪಘಾತ ಸಂಭವಿಸಿದೆ. ದುರಂತದಲ್ಲಿ ಇಬ್ಬರು ಪ್ರಯಾಣಿಕರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಗೋರಖ್‌ಪುರ ರೈಲ್ವೆ ವಿಭಾಗದ ಮೋತಿಗಂಜ್ ಗಡಿಯಲ್ಲಿ ಈ ಘಟನೆ ನಡೆದಿದೆ. ಈ ಬಗ್ಗೆ ಮಾಹಿತಿ ಲಭಿಸಿದ ಕೂಡಲೇ ರೈಲ್ವೆ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ಹಾನಿಗೊಳಗಾದ ಬೋಗಿಗಳಲ್ಲಿ ಸಿಲುಕಿರುವ ಪ್ರಯಾಣಿಕರ ರಕ್ಷಣಾ ಕಾರ್ಯ ನಡೆಸಲಾಗುತ್ತಿದೆ.
ಸಿಎಂ ಯೋಗಿ ಪ್ರತಿಕ್ರಿಯೆ: ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ಸಿಎಂ ಯೋಗಿ ಆದಿತ್ಯನಾಥ್ ಅವರು ಪರಿಹಾರ ಕಾರ್ಯವನ್ನು ತ್ವರಿತಗೊಳಿಸುವಂತೆ ಮತ್ತು ಸ್ಥಳದಲ್ಲಿ ನಿರಂತರ ಆಂಬ್ಯುಲೆನ್ಸ್ ಸೇವೆಯನ್ನು ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಹತ್ತಿರದ ಆಸ್ಪತ್ರೆಗಳಿಗೂ ಅಲರ್ಟ್ ಮೋಡ್‌ನಲ್ಲಿರಲು ಸೂಚನೆ ನೀಡಲಾಗಿದ್ದು, ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ತಿಳಿಸಿದ್ದಾರೆ. ಇದೇ ವೇಳೆ, ರೈಲ್ವೆ ಸಹಾಯವಾಣಿಯನ್ನು ತೆರೆಯಲಾಗಿದೆ. ಸಹಾಯವಾಣಿ ಸಂಖ್ಯೆ 8957409292 (ಲಕ್ನೋ ಜಂಕ್ಷನ್), 8957400965 (ಗೊಂಡಾ)
ಘಟನೆ ಕುರಿತು ಈಶಾನ್ಯ ರೈಲ್ವೆ ಸಾರ್ವಜನಿಕ ಸಂಪರ್ಕ ಅಧಿಕಾರಿ (CPRO) ಪಂಕಜ್ ಸಿಂಗ್ ಪ್ರತಿಕ್ರಿಯೆ ನೀಡಿದ್ದು, ಸದ್ಯ ರೈಲ್ವೆ ಇಲಾಖೆಯ ವೈದ್ಯಕೀಯ ವ್ಯಾನ್ ಘಟನಾ ಸ್ಥಳಕ್ಕೆ ತಲುಪಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ. ರೈಲ್ವೆ ಸಹಾಯವಾಣಿ ಸಂಖ್ಯೆಗಳನ್ನು ಸಹ ತೆರೆಯಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ: ಪಾಟ್ನಾ ಏಮ್ಸ್ನ ನಾಲ್ವರು ವೈದ್ಯ ವಿದ್ಯಾರ್ಥಿಗಳ ಬಂಧನ - NEET UG paper leak