ನವದೆಹಲಿ: ರಾಜಧಾನಿ ದೆಹಲಿಯಲ್ಲಿ ನಾಯಿಗಳ ಕಾಟ ನಿರಂತರವಾಗಿ ಹೆಚ್ಚುತ್ತಿದೆ. ಇತ್ತೀಚಿನ ಪ್ರಕರಣ ತುಘಲಕ್ ರಸ್ತೆ ಪ್ರದೇಶದಿಂದ ಬೆಳಕಿಗೆ ಬಂದಿದೆ. ಅಲ್ಲಿ ಮೂರ್ನಾಲ್ಕು ಬೀದಿ ನಾಯಿಗಳು ಒಂದೂವರೆ ವರ್ಷದ ಪುಟ್ಟ ಹೆಣ್ಣು ಮಗುವಿನ ಮೇಲೆ ದಾಳಿ ನಡೆಸಿವೆ. ಈ ದಾಳಿಯಲ್ಲಿ ಮಗು ಸಂಪೂರ್ಣವಾಗಿ ಗಾಯಗೊಂಡಿದ್ದು, ಸಾಕಷ್ಟು ಪ್ರಯತ್ನದ ನಂತರ ಹುಡುಗಿಯನ್ನು ರಕ್ಷಿಸಲಾಗಿತ್ತು. ಆದರೆ ಅಷ್ಟೊತ್ತಿಗೆ ತಡವಾಗಿತ್ತು. ಕುಟುಂಬದವರು ಆಕೆಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ದಾಗ ವೈದ್ಯರು ಮಗು ಸಾವನ್ನಪ್ಪಿದೆ ಎಂದು ಘೋಷಿಸಿದರು. ಇಂದು ದೆಹಲಿ ಮಹಾನಗರ ಪಾಲಿಕೆ ಮೇಯರ್ ಡಾ. ಶೈಲಿ ಒಬೆರಾಯ್ ಮೃತ ಮಗುವಿನ ಕುಟುಂಬವನ್ನು ಭೇಟಿಯಾಗಿ ಸಂತಾಪ ಸೂಚಿಸಿದರು.
ದೆಹಲಿಯಲ್ಲಿ ಬೀದಿ ನಾಯಿಗಳಿಂದ ದೊಡ್ಡ ಸಮಸ್ಯೆಯಾಗಿದೆ. ಇದು ಎನ್‌ಡಿಎಂಸಿ ಕ್ಷೇತ್ರ. ಮುಂಬರುವ ದಿನಗಳಲ್ಲಿ ಎನ್‌ಡಿಎಂಸಿ ಮತ್ತು ಎಂಸಿಡಿ ಒಟ್ಟಾಗಿ ಕೆಲಸ ಮಾಡಲಿವೆ. ಪ್ರಾಣಿ ಪ್ರಿಯರ ಮೇಲೂ ಕಾಳಜಿ ವಹಿಸಲಾಗುವುದು. ದೆಹಲಿಯ ಜನರನ್ನೂ ನೋಡಿಕೊಳ್ಳಲಾಗುವುದು. ಭವಿಷ್ಯದಲ್ಲಿ ಇಂತಹ ಅವಘಡಗಳು ಸಂಭವಿಸುವುದಿಲ್ಲ ಎಂದು ನಾವು ಭರವಸೆ ನೀಡುತ್ತೇವೆ. ಈ ಘಟನೆಯ ಬಗ್ಗೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಮಾಹಿತಿ ರವಾನಿಸಲಾಗಿದೆ. ಏನೇ ನೆರವು ನೀಡಿದರೂ ದೆಹಲಿ ಸರ್ಕಾರ ನೀಡಲಿದೆ. ಈ ಸಂಪೂರ್ಣ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು ಮತ್ತು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಮೇಯರ್ ಹೇಳಿದರು.
ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ಮಗುವಿನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು. ಸಂತ್ರಸ್ತೆಯ ಕುಟುಂಬ ತುಘಲಕ್ ಲೇನ್ ಪ್ರದೇಶದ ಧೋಬಿ ಘಾಟ್‌ನಲ್ಲಿ ವಾಸಿಸುತ್ತಿದೆ.